More

    ಹಳ್ಳಿಗರ ವಲಸೆ ತಡೆಗೆ ಕೃಷಿ ಸಬಲೀಕರಣ: ಸಚಿವ ಡಾ. ಅಶ್ವತ್ಥನಾರಾಯಣ ಹೇಳಿಕೆ

    ಮೈಸೂರು: ದೇಶದ ಆರ್ಥಿಕ ಚಾಲಕ ಶಕ್ತಿಗಳಲ್ಲಿ ಕೃಷಿ ಕೂಡ ಒಂದಾಗಿದ್ದು, ಬಹುದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ಷೇತ್ರವೂ ಹೌದು. ಆದರೂ ವಿವಿಧ ಕಾರಣಗಳಿಗಾಗಿ ದುಡಿಮೆ ಅರಸಿ ಹಳ್ಳಿಗರು ನಗರಗಳತ್ತ ವಲಸೆ ಬರುತ್ತಿದ್ದಾರೆ. ಅಭಿವೃದ್ಧಿ, ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು ಕೃಷಿ ಸಬಲೀಕರಣ ಅಗತ್ಯವಾಗಿದ್ದು, ಇದರಿಂದಾಗಿ ಹಳ್ಳಿಗರ ವಲಸೆ ತಡೆಯಲು ಸಾಧ್ಯವಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರುವ ಕೃಷಿ ಮೇಳದ ಎರಡನೇ ದಿನವಾದ ಶನಿವಾರ ರೈತ ಸಾಧಕರಿಗೆ ಫ್ರೀಡಂ ಆಪ್​ನಿಂದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನಿಸಿ ಮಾತನಾಡಿದರು. ತಂತ್ರಜ್ಞಾನದ ಆವಿಷ್ಕಾರವು ಕೃಷಿ ಕ್ಷೇತ್ರದಲ್ಲಿ ಭರವಸೆದಾಯಕ ಬೆಳವಣಿಗೆಗೆ ಕಾರಣವಾಗಿದೆ. ಕೃಷಿ ಲಾಭದಾಯಕ ಜತೆಗೆ ಉದ್ಯಮದ ಸ್ವರೂಪ ಪಡೆಯುತ್ತಿರುವುದನ್ನು ರೈತರು ಗಮನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಸಕ್ತ ರೈತರಿಗೆ ಡಿಜಿಟಲ್ ಫಾರ್ವಿುಂಗ್, ತಂತ್ರಜ್ಞಾನ ಆಧರಿತ ಕೃಷಿ ಕೌಶಲ ತರಬೇತಿ ನೀಡಲಾಗುತ್ತಿದೆ. ಆಹಾರಧಾನ್ಯ, ಹಣ್ಣು-ತರಕಾರಿ ಮತ್ತಿತರ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯು ವಿಪುಲವಾಗಿ ಬೆಳೆಯುವ ಅವಕಾಶಗಳಿದ್ದು, ಮಾರುಕಟ್ಟೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿದೆ ಎಂದರು.

    ಗ್ರಾಮೀಣ ಪ್ರದೇಶಕ್ಕೆ ವಿಸ್ತರಣೆ: ಕೃತಕಬುದ್ಧಿಮತ್ತೆ, ಹೊಸ ತಂತ್ರಜ್ಞಾನ, ಆವಿಷ್ಕಾರಗಳನ್ನು ಕೃಷಿಗೆ ಪರಿಣಾಮಕಾರಿಯಾಗಿ ಅಳವಡಿಸಲೆಂದು ಅಂತರ್ಜಾಲ ವೇಗ ಹೆಚ್ಚಿಸುವ ಬ್ರಾಡ್​ಬ್ಯಾಂಡ್ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಲು ಸರ್ಕಾರ ಬದ್ಧವಾಗಿದೆ ಎಂದ ಸಚಿವರು, ಬೇಸಾಯ ಕ್ರಮಗಳ ಸುಧಾರಣೆ, ಹೊಸ ಪದ್ಧತಿ ಅಳವಡಿಕೆ, ಬದಲಾದ ಪರಿಸ್ಥಿತಿ ಅನುಗುಣವಾಗಿ ಶೇಖರಣೆ, ಸರಬರಾಜು ಸರಪಳಿ, ದತ್ತಾಂಶ ಸಂಗ್ರಹಣೆಗೆ ತಂತ್ರಜ್ಞಾನದ ಸ್ಪರ್ಶ ನೀಡಿದರೆ, ರೈತರಿಗೆ ಉತ್ತಮ ಗುಣಮಟ್ಟದ ಜೀವನ ಕಲ್ಪಿಸಲು ಸಾಧ್ಯವಿದೆ ಎಂದು ಹೇಳಿದರು. ಮಾರುಕಟ್ಟೆ ಜ್ಞಾನ-ತಂತ್ರಜ್ಞಾನ, ಬೆಳೆದ ಬೆಳೆಗಳ ಮಾರಾಟ ವಿಧಾನ, ಯಾಂತ್ರೀಕರಣ ಎಲ್ಲವೂ ಕೃಷಿ, ಕೃಷಿಕರ ಮಹತ್ವವನ್ನು ಹೆಚ್ಚಿಸಿದ್ದು, ಆರ್ಥಿಕತೆ ವೃದ್ಧಿಗೆ ರೈತರು ಗಮನಾರ್ಹ ಕೊಡುಗೆ ನೀಡಬಲ್ಲವರಾಗಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ರೈತರಿಗೆ ಸ್ವಾವಲಂಬಿ, ಸ್ವಾಭಿಮಾನ ಬದುಕು ಕಟ್ಟಿಕೊಡಲು ಶ್ರಮಿಸುತ್ತಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಮೈಸೂರು ಮೇಯರ್ ಶಿವಕುಮಾರ್, ರಾಜ್ಯ ಮುಕ್ತ ವಿವಿ ಕುಲಪತಿ ಡಾ.ಶರಣಪ್ಪ ಹಲ್ಸೆ, ಕುಲಸಚಿವ ಡಾ.ಕೆ.ಎಲ್.ಎನ್.ಮೂರ್ತಿ, ಫ್ರೀಡಂ ಆಪ್ ಸಂಸ್ಥಾಪಕ, ಸಿಇಒ ಸಿ.ಎಸ್.ಸುಧೀರ್, ಅಮೃತ್ ನೋನಿ ವ್ಯವಸ್ಥಾಪಕ ನಿರ್ದೇಶಕಿ ಮಂಗಲಾಂಬಿಕೆ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ದಿಗ್ವಿಜಯ ನ್ಯೂಸ್ ಸಂಪಾದಕ ಸಿದ್ದು ಕಾಳೋಜಿ ಇದ್ದರು.

    ಲಗೋರಿ ಆಡಿ ಲಯ ಹೆಚ್ಚಿಸಿದ ಸಚಿವ: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವೇದಿಕೆ ಸಮೀಪದ ಬಯಲಿನಲ್ಲಿ ಗ್ರಾಮೀಣ ಆಟೋಟಗಳ ಸ್ಪರ್ಧೆ ವಿಷಯ ತಿಳಿದು ಅತ್ತ ಹೆಜ್ಜೆ ಹಾಕಿದರು. ಸ್ವತಃ ಲಗೋರಿ ಆಡುವ ಮೂಲಕ ಸ್ಪರ್ಧೆಗೆ ಸಾಂಕೇತಿಕ ಚಾಲನೆ ನೀಡಿ, ಸ್ಪರ್ಧಿಗಳು ಹಾಗೂ ನೆರೆದವರಲ್ಲಿ ಲಯ ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಭತ್ತದ ರಾಶಿ ಮಾಡಿ ರೈತರನ್ನೂ ಖುಷಿಪಡಿಸಿದರು. ಮಳಿಗೆಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಮಾದರಿಗಳು ಒಟ್ಟು ಹಳ್ಳಿ, ವ್ಯವಸಾಯದ ಪರಿಸರವನ್ನು ಸೃಷ್ಟಿಸಿದೆ ಎಂದು ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

    ದೇಸಿ ಕ್ರೀಡೆಗಳ ವೈಭವ: ಕೃಷಿ ಮೇಳದ ಭಾಗವಾಗಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಎಲ್ಲ ವಯೋಮಾನದವರನ್ನು ಕೈಬೀಸಿ ಕರೆಯಿತು. ನೋಡಿ ಖುಷಿಪಡಲೆಂದು ಬಂದವರು ಪೈಪೋಟಿಗೆ ಧುಮುಕಿ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಗೆ ಮತ್ತೆ ಹೊಳಪು ನೀಡಿದರು. ಒಂಟಿ ಕಾಲಿನ ಓಟ, ಲಗೋರಿ, ಚಮಚೆಯಲ್ಲಿ ನಿಂಬೆಹಣ್ಣಿಟ್ಟುಕೊಂಡು ವೇಗದ ನಡಿಗೆ, ಗೊಬ್ಬರ ಮೂಟೆ ಹೊತ್ತು ಓಡುವ ಹೀಗೆ ತರಹೇವಾರಿ ದೇಸಿ ಕ್ರೀಡೆಗಳ ತಮ್ಮ ವೈಭವವನ್ನು ಮೆರೆದವು. ಸ್ಪರ್ಧಿಗಳಿಗಿಂತ 4-5 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಆಸಕ್ತರು ಚಪ್ಪಾಳೆ ತಟ್ಟಿ, ಕೇಕೆ ಹಾಕಿ, ಸಿಳ್ಳೆ ಹೊಡೆದು ಸ್ಪರ್ಧಿಗಳಿಗೆ ಹುರಿದುಂಬಿಸುವ ಜತೆಗೆ ಸ್ವತಃ ಉಲ್ಲಾಸದಲ್ಲಿ ಮಿಂದೆದ್ದರು.

    ಕೃಷಿಮೇಳದಲ್ಲಿ ಕೈದೀವಿಗೆಯಾದ ಗೋಷ್ಠಿಗಳು: ತೋಟಗಾರಿಕೆ ಹೊಸ ಸಾಧ್ಯತೆ, ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ, ಸಿರಿಧಾನ್ಯ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಪ್ರಧಾನ ವಿಷಯಗಳಡಿ ಸಂಘಟಿಸಿದ್ದ ಗೋಷ್ಠಿಗಳು ಪ್ರಗತಿಪರ, ಪ್ರಯೋಗಶೀಲ ರೈತರಿಗೆ ಕೈದೀವಿಗೆಯಾದವು. ವಿಷಯ ತಜ್ಞರು, ಪ್ರಗತಿಪರ ಕೃಷಿಕರು ಸ್ವಾನುಭವದೊಂದಿಗೆ ಸರಳವಾಗಿ ವಿಷಯ ಪ್ರಸ್ತುತಪಡಿಸಿ, ರೈತರು ಏಕಮುಖಿ ಆಲೋಚನಾ, ಹಿಂದಿನ ಚಿಂತನಾಕ್ರಮದಿಂದ ಹೊರಬರುವ ಅಗತ್ಯತೆಯನ್ನು ಪ್ರತಿಪಾದಿಸಿದರು.

    ಗಮನಸೆಳೆದ ಸಾಧಕರು: ಶಿಕ್ಷಣದ ಪ್ರಮಖ ವೇದಿಕೆಯಾದ ಫ್ರೀಡಂ ಆಪ್ ಸಂಸ್ಥಾಪಕ, ಸಿಇಒ ಸಿ.ಎಸ್.ಸುಧೀರ್ ಅವರು ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಒಬ್ಬೊಬ್ಬ ರೈತರನ್ನೂ ಪರಿಚಯಿಸುತ್ತ ಹೋದರೆ, ನೆರೆದ ಜನರು ಅಚ್ಚರಿಯಿಂದ ಹುಬ್ಬೇರಿಸಿ ಚಪ್ಪಾಳೆ ತಟ್ಟಿ ಶಹಬ್ಬಾಸ್​ಗಿರಿ ನೀಡಿದರು. ಬಂಡೂರು ಕುರಿ, ಸಮಗ್ರ ಕೃಷಿಯಲ್ಲಿ ಸಾವಯವ ಬಳಕೆ, ಶೂನ್ಯಬಂಡವಾಳ, ಜೇನು ಕೃಷಿ, ನಾಟಿ ಕೋಳಿ ಸಾಕಣೆ, ಅಪೌಷ್ಟಿಕತೆ ನಿವಾರಣೆಗೆ ನುಗ್ಗೆ ಸೊಪ್ಪಿನ ಪುಡಿ, ಡಚ್​ರೋಸ್, ಡ್ರ್ಯಾಗನ್ ಫ್ರೂಟ್, ಹೈನುಗಾರಿಕೆ ಹೀಗೆ ಪ್ರತಿಯೊಂದು ಕಸುಬಿನಲ್ಲೂ ಹೊಸತನ ಕಂಡುಹಿಡಿದು, ಪ್ರಯೋಗ ಮಾಡಿ, ಆರಂಭಿಕ ನಷ್ಟ-ಕಷ್ಟಗಳನ್ನು ಉಂಡು ಯಶಸ್ಸಿನ ಗಡಿ ತಲುಪಿದ ನೇಗಿಲಯೋಗಿಗಳು ಸನ್ಮಾನಿತರಾದರು. ಸಾಧನೆ ಮೆಟ್ಟಿಲು ಏರಿದ ಬಳಿಕ ಆಸಕ್ತಿಯಿಂದ ಹುಡುಕಿಕೊಂಡು ಬಂದವರಿಗೂ ಮಾರ್ಗದರ್ಶನ ನೀಡಿ ತಮ್ಮೊಂದಿಗೆ ಸಾಧನೆ ಹಾದಿಯಲ್ಲಿ ಸಾಗಲು ಸ್ಪೂರ್ತಿ ತುಂಬಿದವರು. ಒಂದಿಬ್ಬರು ಹೊರತುಪಡಿಸಿದರೆ ಬಹುತೇಕರು ಎರಡರಿಂದ ಹೆಚ್ಚೆಂದರೆ ಐದು ಎಕರೆ ಒಳಗೆ ಜಮೀನು ಹೊಂದಿದವರು. ವಾರ್ಷಿಕ ಕೋಟಿ ಲೆಕ್ಕದಲ್ಲಿ ವಹಿವಾಟು ನಡೆಸುವಂತಹ ಸಾಮರ್ಥ್ಯ ಸಂಪಾದಿಸಿದ್ದಾರೆ. ತಾವು ದುಡಿದು, ಹತ್ತಾರು ಕೈಗಳಿಗೆ ಕೆಲಸ ನೀಡಲು ಶಕ್ತರಾದವರ ಬಗ್ಗೆ ತಿಳಿದ ಜನರು ‘ಭಲೇ.. ಭೇಷ್…’ ಎಂದು ಉದ್ಗರಿಸಿ, ಸನ್ಮಾನ ಸಮಾರಂಭದ ಉದ್ದೇಶ ಸಾರ್ಥಕವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಬೆಳೆ ಬೆಳೆಯುವುದಕ್ಕಿಂತ ಮಾರಾಟವೇ ರೈತರ ಮುಂದಿರುವ ದೊಡ್ಡ ಸವಾಲು. ಪರಿಸ್ಥಿತಿ ಅನಿವಾರ್ಯತೆಗೆ ಸಿಲುಕಿ ಮಾರುಕಟ್ಟೆಯಲ್ಲಿ ಸಿಕ್ಕಿದ ಬೆಲೆಗೆ ಬೆಳೆ ಮಾರಾಟ ಮಾಡಿ ನಷ್ಟದಿಂದ ಕೈಸುಟ್ಟುಕೊಳ್ಳುವುದೇ ಹೆಚ್ಚು. ಬೆಳೆದ ಬೆಳೆಗಳ ಮೌಲ್ಯವರ್ಧನೆಯಿಂದ ಹೆಚ್ಚಿನ ಲಾಭದ ಅವಕಾಶಗಳಿವೆ. ಈ ಹಂತದಲ್ಲಿ ಸಹನೆ, ಸಹಕಾರ ಹಾಗೂ ಮಾರುಕಟ್ಟೆ ಜ್ಞಾನ ಗಳಿಸುವುದು ಅಷ್ಟೇ ಮುಖ್ಯವಾಗಿದೆ.

    | ರಾಮನಂಜಪ್ಪ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ, ನಾಗಮಂಗಲ

    ಮಾನವಕುಲಕ್ಕೆ ಅಮೃತ್ ವರದಾನ

    ಮೈಸೂರು: ಅಮೃತ್​ನೋನಿ- ಹೆಸರಿಗೆ ತಕ್ಕಂತೆ ಜೀವಕ್ಕೆ ಅಮೃತವಿದ್ದಂತೆ. ದೇಹದ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಒಟ್ಟಾರೆ ಮನುಷ್ಯನ ಆಯುಷ್ಯವನ್ನು ವೃದ್ಧಿಸುವ ಜೀವಾವೃತವಿದು. ಮಾನವ ದೇಹಕ್ಕೆ ವರದಾನವಾಗಿರುವ ಅಮೃತ್​ನೋನಿ ಸೇವನೆಯಿಂದ ಅಗತ್ಯ ಪೋಷಕಾಂಶ ಒದಗುತ್ತದೆ. ಶೇ.80 ನೋನಿ ಹಣ್ಣಿನ ಸತ್ವ ಹಾಗೂ ಆಯುರ್ವೆದ ಗಿಡಮೂಲಿಕೆಗಳ ವಿಶಿಷ್ಟ ಸಂಯೋಜನೆ ಹೊಂದಿದೆ. ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದೆ. ಸುಸ್ತು, ಆಯಾಸದಿಂದ ಬಳಲುವವರು ಇದರ ಸೇವನೆಯಿಂದ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ. ಮಂಡಿ ಸವೆತ, ಸಂಧಿನೋವು, ಸಕ್ಕರೆ ಕಾಯಿಲೆಯಿಂದ ಬಳಲುವವರು ಅಮೃತ್​ನೋನಿ ಸೇವನೆಯಿಂದ ಸಾಕಷ್ಟು ಪರಿಹಾರ ಪಡೆದಿದ್ದಾರೆ.

    ಸಂಸ್ಥೆ ಆರಂಭ: ಶಿವಮೊಗ್ಗ ಜಿಲ್ಲೆಯಲ್ಲಿ 2008ರಲ್ಲಿ ರೈತಾಪಿ ಕುಟುಂಬದ ಡಾ.ಶ್ರೀನಿವಾಸಮೂರ್ತಿ ಪ್ರಾರಂಭಿಸಿದ ವ್ಯಾಲ್ಯೂ ಪ್ರಾಡಕ್ಟ್ಸ್ನಿಂದ ಅಮೃತ್​ನೋನಿ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದ್ದು, 15 ವರ್ಷಗಳಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಇದು ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಲಕ್ಷಾಂತರ ಗ್ರಾಹಕರನ್ನು ಸಂತೃಪ್ತಿಗೊಳಿಸಿದೆ. ರಾಜ್ಯ ಸರ್ಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತಗೊಂಡಿದೆ. ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಗತ್ಯವಾದ ಪ್ರಮಾಣಪತ್ರವನ್ನು ಹೊಂದಿದೆ. 6ರಿಂದ 8 ಬಗೆಯ ಉತ್ಪನ್ನಗಳು ಲಭ್ಯವಿದ್ದು, ಉತ್ತಮ ದರ್ಜೆಯ ನೋನಿ ಹಣ್ಣು ಹಾಗೂ ಆಯುರ್ವೆದ ಗಿಡಮೂಲಿಕ ಬಳಸಲಾಗುತ್ತಿದೆ. ಪ್ರತಿ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ತಂತ್ರಜ್ಞಾನದಲ್ಲಿ ತಯಾರಿಸಿ ತಲುಪಿಸುವ ಮೂಲಕ ಸಹಸ್ರಾರು ಗ್ರಾಹಕರ ವಿಶ್ವಾಸ ಗಳಿಸಿದೆ.

    ಒಕ್ಕಲಿಗರಿಗೆ ಹೆಣ್ಣು ಕೊಡುವುದಿಲ್ಲವೆಂಬ ಕಾಲವೊಂದಿತ್ತು. ರೈತನೇ ನಿಜವಾದ ಸಾಮ್ರಾಟ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಜೈಕಿಸಾನ್ ಎನ್ನುವುದು ಹೊಗಳಿಕೆಗಲ್ಲ, ನೈಜತೆಯ ಪ್ರತಿಬಿಂಬ. ಎಷ್ಟೇ ದುಡ್ಡಿದ್ದರೂ ತಿನ್ನುವುದಕ್ಕಾಗುವುದಿಲ್ಲ, ಕೃಷಿ ಹಾಗೂ ಕೃಷಿಕರ ಪ್ರಾಮುಖ್ಯತೆ ಆಧುನಿಕ ಜಗತ್ತಿಗೆ ಅರ್ಥವಾಗುತ್ತಿದೆ. ಅನ್ನದಾತರು ಎದೆಗುಂದುವ ಅಗತ್ಯವಿಲ್ಲ.

    | ಮಂಗಳಾಂಬಿಕೆ ವ್ಯವಸ್ಥಾಪಕ ನಿರ್ದೇಶಕಿ, ಅಮೃತ್ ನೋನಿ

    ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!

    ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಹದಿಹರೆಯದ ವಿದ್ಯಾರ್ಥಿನಿ!

    ಗಂಡನ ನಾಲಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡ್ತಿ; ವಾಪಸ್​ ಬಾ ಎಂದು ತವರಿಗೆ ಹೋಗಿ ಕರೆದಿದ್ದೇ ತಪ್ಪಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts