More

    ಕಮರಿದೆ ಉದ್ಯೋಗದ ಕನಸು ; ಅಂತಿಮ ಆಯ್ಕೆ ಪ್ರಕಟಿಸದೆ ಕೆಪಿಎಸ್ಸಿ ಮೀನಮೇಷ

    ತುಮಕೂರು: ವಿವಿಧ ಸರ್ಕಾರಿ ಇಲಾಖೆಗಳ ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಕರೆದು 4 ವರ್ಷಗಳಾಗುತ್ತಾ ಬಂದರೂ ಈವರೆಗೆ ಅಂತಿಮ ಆಯ್ಕೆ ಪ್ರಕಟಿಸಿಲ್ಲ. ಲಿಖಿತ ಪರೀಕ್ಷೆ, ಮೂಲ ದಾಖಲಾತಿ ಪರಿಶೀಲನೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಅಭ್ಯರ್ಥಿಗಳ ‘ಭವಿಷ್ಯ’ದ ಮೇಲೆ ಕಾರ್ಮೋಡ ಕವಿದಂತಾಗಿದೆ.

    ಆಯೋಗವು 11 ವಿವಿಧ ಇಲಾಖೆಗಳಲ್ಲಿ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಹತೆಯುಳ್ಳವರಿಗೆ ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ 571 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿಗೆ 2017ರ ಮಾರ್ಚ್ 15ರಂದು ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷ ಜೂನ್ 4 ಹಾಗೂ 11 ರಂದು ಲಿಖಿತ ಪರೀಕ್ಷೆ ನಡೆಸಿತ್ತು. ಫೆಬ್ರವರಿ 2018ರಲ್ಲಿ ಅರ್ಹತಾ ಪಟ್ಟಿ ಪ್ರಕಟಿಸಿ, 2019ರ ಏಪ್ರಿಲ್‌ನಲ್ಲಿ 1:3 ರಂತೆ ಮೂಲದಾಖಲಾತಿ ಪರಿಶೀಲನೆ ಮಾಡಲಾಗಿದೆ. ಡಿಸೆಂಬರ್ 10ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಕೂಡ ಪ್ರಕಟಿಸಿತು. ತಾತ್ಕಾಲಿಕ ಪಟ್ಟಿ ಪ್ರಕಟಿಸಿ ಒಂದೆರಡು ವಾರಗಳಲ್ಲಿ ಅಂತಿಮ ಪಟ್ಟಿ ಪ್ರಕಟಿಸುತ್ತಿದ್ದ ಕೆಪಿಎಸ್ಸಿ 6 ತಿಂಗಳಾದರೂ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜತೆ ಚೆಲ್ಲಾಟ ಮುಂದುವರಿಸಿದೆ.

    571 ಹುದ್ದೆಗಳು: ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಹತೆಯುಳ್ಳವರಿಗೆ ಮೀಸಲಿಗೆ ಅನುಗುಣವಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ 237 ಹಾಗೂ ಉಳಿದ ವೃಂದದ 334 ಹುದ್ದೆಗಳಿದ್ದು, ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ಆದರೆ ಅಂತಿಮ ಪಟ್ಟಿ ಪ್ರಕಟಿಸಲು ಇನ್ನೂ ಮೀನಮೇಷ ಎಣಿಸಲಾಗುತ್ತಿದೆ. ಈ ಸಂಬಂಧ ಪ್ರತಿಕ್ರಿಯೆಗಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

    1:3 ರಂತೆ ಮೂಲ ದಾಖಲಾತಿ ಪರಿಶೀಲಿಸಿ 2019ರ ಡಿಸೆಂಬರ್‌ನಲ್ಲಿ ತಾತ್ಕಾಲಿಕ ಆಯ್ಕೆ ಪ್ರಕಟಿಸಲಾಗಿದೆ. 6 ತಿಂಗಳಾದರೂ ಅಂತಿಮ ಪಟ್ಟಿ ಪ್ರಕಟಿಸಿಲ್ಲ. ಉದ್ಯೋಗ ಸಿಗಲಿದೆ, ಅಕ್ಕ-ತಂಗಿಯರ ಮದುವೆ ಮಾಡಬಹುದೆಂಬ ಆಸೆಗೆ ತಣ್ಣೀರೆರಚಿದಂತಾಗಿದೆ. ಕೆಪಿಎಸ್ಸಿ ಸಹಾಯವಾಣಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ. 4 ವರ್ಷಗಳಿಂದ ಕಾಯುತ್ತಿದ್ದು, ಭವಿಷ್ಯವೇ ಮಂಕಾಗಿದೆ.
    ಹೆಸರು ಹೇಳಲಿಚ್ಛಿಸದ ಉದ್ಯೋಗಾಕಾಂಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts