More

    ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿಯಲ್ಲಿ ಹೆಣ ಹೂಳಲೂ ಜಾಗವಿಲ್ಲ; ಕೃಷಿ ಭೂಮಿ ಇಲ್ಲದವರಿಗೆ ಪರದಾಟ

    ಕೊಟ್ಟೂರು : ಈ ಊರಲ್ಲಿ ಯಾರಾದರೂ ಮೃತಪಟ್ಟರೆ ಅವರ ಕುಟುಂಬಕ್ಕೆ ಶವಸಂಸ್ಕಾರದ್ದೇ ಚಿಂತೆ…

    ಹೌದು, ಪಟ್ಟಣಕ್ಕೆ ಹೊಂದಿಕೊಂಡಿರುವ ಚಪ್ಪರದಹಳ್ಳಿಯಲ್ಲಿ ಜಾಗದ ಕೊರತೆಯಿಂದ ಅಂತ್ಯಕ್ರಿಯೆಗೆ ಪರದಾಡುವಂತ ಸ್ಥಿತಿ ಇದೆ. ಎಲ್ಲ ವರ್ಗದ ಜನರು ವಾಸವಿದ್ದು, 800 ಮನೆಗಳಿವೆ.

    ಮುಸ್ಲಿಮರಿಗೆ ಖಬರಸ್ಥಾನವಿದೆ. ಉಳಿದವರಿಗೆ ಇರುವ ಒಂದೇ ರುದ್ರಭೂಮಿಯೂ ಚಿಕ್ಕದಾಗಿದ್ದು, ಗಿಡಗಂಟಿಗಳು ಬೆಳೆದು ನಿಂತಿವೆ. ಅಲ್ಲದೆ ಗುಂಡಿಗಳು ಬಿದ್ದಿದ್ದು, ಮೃತದೇಹ ಹೊತ್ತು ಸಾಗುವುದು ಕಷ್ಟವಾಗಿದೆ. ಹೊಲ, ಗದ್ದೆ ಹೊಂದಿದವರ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ರುದ್ರಭೂಮಿ ಬದಲಿಗೆ ಹೊಲದಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಉಳಿದವರ ಪರಿಸ್ಥಿತಿ ಹೇಳತೀರದು. ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಹಲವಾರು ವರ್ಷಗಳಿಂದ ಇದೇ ಪರಿಸ್ಥಿತಿಗೆ ಗ್ರಾಮಸ್ಥರು ರೋಸಿಹೋಗಿದ್ದಾರೆ.

    ಕೊಟ್ಟೂರಿನ ಸಮೀಪದಲ್ಲೇ ಗ್ರಾಮ ಇರುವ ಕಾರಣ ಸುತ್ತಲಿನ ಬಹುತೇಕ ಪ್ರದೇಶ ನಿವೇಶನಗಳಾಗಿವೆ. ಎಲ್ಲಿಯೂ ಸರ್ಕಾರಿ ಭೂಮಿ ಇಲ್ಲ. ಸ್ಮಶಾನಕ್ಕಾಗಿ ಭೂಮಿ ಖರೀದಿಸುವುದೂ ಕಷ್ಟದ ಮಾತಾಗಿದೆ. ಹೀಗಾಗಿ ಯಾರಾದರೂ ಸತ್ತರೆ ಸ್ವಂತ ಕಣ, ಹೊಲದಲ್ಲಿಯೇ ಸಮಾಧಿ ಮಾಡಬೇಕಿದೆ ಎಂದು ಗ್ರಾಮದ ಶಿವನಾಗಪ್ಪ, ನಿಂಗಪ್ಪ, ಕೊಟ್ರೇಶಪ್ಪ, ಮಲ್ಲೇಶಪ್ಪ ಅಳಲು ತೋಡಿಕೊಂಡರು.


    ಊರಲ್ಲಿ ಶವಸಂಸ್ಕಾರ ಮಾಡುವುದೇ ಸಮಸ್ಯೆಯಾಗಿದೆ. ಇರುವ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ. ಊರಿನ ಸುತ್ತಮುತ್ತ ಎಲ್ಲಿಯೂ ಸರ್ಕಾರಿ ಭೂಮಿ ಇಲ್ಲ. ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಕೂಡ್ಲಿಗಿ, ಕೊಟ್ಟೂರು ತಹಸೀಲ್ದಾರ್‌ಗೆ ಏಳೆಂಟು ಸಲ ಮನವಿ ಕೊಟ್ಟಿದ್ದರೂ ಸ್ಪಂದನೆ ಇಲ್ಲ. ಇತ್ತೀಚೆಗೆ ಭೇಟಿ ನೀಡಿದ್ದ ಶಾಸಕ ಭೀಮಾನಾಯ್ಕ ಗಮನಕ್ಕೂ ತಂದಿದ್ದೇವೆ.
    | ಕೆ.ಕೊಟ್ರೇಶ ತಾಪಂ ಮಾಜಿ ಸದಸ್ಯ, ಚಪ್ಪರದಹಳ್ಳಿ


    ಸ್ಮಶಾನಕ್ಕಾಗಿ ಚಪ್ಪರದಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಸರ್ಕಾರಿ ಭೂಮಿ ಬಗ್ಗೆ ಪರಿಶೀಲಿಸಲು ಗ್ರಾಮಲೆಕ್ಕಾಧಿಕಾರಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಭೂಮಿ ಇದ್ದಲ್ಲಿ ಅಂತ್ಯಸಂಸ್ಕಾರಕ್ಕೆ ಮೀಸಲಿಡಲಾಗುವುದು.
    | ಜಿ.ಅನಿಲ್ ಕುಮಾರ್ ತಹಸೀಲ್ದಾರ್ ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts