More

    ಶ್ರೀ ಕೊಟ್ಟೂರೇಶ್ವರ ಜಾತ್ರೆಗೆ ಕ್ಷಣಗಣನೆ

    ಭಕ್ತರಿಗೆ ಅಗತ್ಯ ಸೌಲಭ್ಯ ವ್ಯವಸ್ಥೆ | ಭದ್ರತೆಗೆ ಸಾವಿರ ಪೊಲೀಸರ ನಿಯೋಜನೆ

    ಕೊಟ್ಟೂರು: ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಮಾ.4ರಂದು ಜರುಗಲಿದ್ದು, ಸ್ವಾಮಿಯ ದರ್ಶನ ಪಡೆದು ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾಗಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

    ಸೋಮವಾರ (ಮಾ.4) ಸಂಜೆ ಶಿಶಿರ ಋತು ಮಾಘಮಾಸ ಬಹುಳ ನವಮಿ ಮೂಲನಕ್ಷತ್ರ ಸಂಧಿಸುತ್ತಿದ್ದಂತೆ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಸ್ವಾಮಿಯ ಉತ್ಸವ ಮೂರ್ತಿ ಹಿರೇಮಠದಿಂದ ಪಲ್ಲಕ್ಕಿಯಲ್ಲಿ ಹೊರಟು ಹರಳಯ್ಯನ ಮಗಳು ಆರತಿ ಬೆಳಗಿದ ಮೇಲೆ ರಥವೇರಲಿದೆ. ಈ ಸಂಪ್ರದಾಯ ಅನಾದಿಕಾಲದಿಂದಲೂ ನಡೆಯುತ್ತ ಬಂದಿದ್ದು, ಇದು ಕೊಟ್ಟೂರೇಶ್ವರ ಸ್ವಾಮಿಯ ಸಮ ಸಮಾಜ ನಿರ್ಮಾಣ ಧ್ಯೇಯವಾಗಿದೆ.

    ರಥೋತ್ಸವಕ್ಕೂ ಮೊದಲು ನಾಗರ ವಾಹನೋತ್ಸವ, ನವಿಲು, ಗಜ, ವೃಷಭ ವಾಹನೋತ್ಸವ ನಡೆಯಲಿದೆ. ಈಗಾಗಲೇ ರಾಜ್ಯದ ವಿವಿಧ ಪಟ್ಟಣ, ನಗರಗಳಿಂದ ಪಾದಯಾತ್ರಿಗಳು ತಂಡೋಪತಂಡವಾಗಿ ಕೊಟ್ಟೂರಿಗೆ ಆಗಮಿಸಿದ್ದಾರೆ. ಇವರಿಗೆ ಉಚಿತ ಉಪಾಹಾರ, ಹಣ್ಣು, ತಂಪು ಪಾನೀಯ, ಔಷಧಗಳ ವಿತರಣೆಯೊಂದಿಗೆ ವೈದ್ಯಕೀಯ ಸೇವೆಯೂ ನೀಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪಟ್ಟಣ ಪಂಚಾಯಿತಿ ಆಡಳಿತ ಭಕ್ತರಿಗಾಗಿ ಕುಡಿವ ನೀರಿನ ವ್ಯವಸ್ಥೆ ಕೈಗೊಂಡಿದ್ದು, ಸ್ವಚ್ಛತಾ ಕಾರ್ಯ ನಡೆಸಿದೆ. ಜಾತ್ರೆಗೆ ಆಗಮಿಸಿ ಭಕ್ತರಿಗೆ ಮನರಂಜನೆ ನೀಡಲು ಕೆ.ಬಿ.ಆರ್.ಡ್ರಾಮಾ ಕಂಪನಿ, ಶ್ರೀಗುರು ತೋಂಟದಾರ್ಯ ನಾಟ್ಯ ಸಂಘ, ಶ್ರೀ ಗುರು ಸಿದ್ಧಲಿಂಗೇಶ್ವರ ನಾಟ್ಯ ಸಂಘ ಬೀಡು ಬಿಟ್ಟಿವೆ.

    ತ್ರಿವಿಧ ಕ್ರಿಯಾ ಪೂಜೆ ನಿರಂತರ


    ಕೊಟ್ಟೂರು: ಜಾತ್ರೆ ಹಿನ್ನೆಲೆಯಲ್ಲಿ ಶ್ರೀಗುರು ಬಸವೇಶ್ವರ ಸ್ವಾಮಿಗೆ ನಿತ್ಯ ಐದು ಪೂಜೆಗಳನ್ನು ನೆರವೇರಿಸುತ್ತ ಬರಲಾಗಿದೆ. ಈ ಪೈಕಿ ಪ್ರಮುಖವಾದ ಮೂರು ಕ್ರಿಯಾ ಪೂಜೆಗಳು ಚಾಚೂ ತಪ್ಪದೆ ಆಚರಿಸಲಾಗುತ್ತಿದೆ.

    ಮಹಲ್ ಮಠದ ನಿರಂಜನ ಜಗದ್ಗುರು ಶಂಕರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಪ್ರಕಾಶ ಕೊಟ್ಟೂರು ದೇವರು ಕಳೆದ ಒಂಬತ್ತು ವರ್ಷಗಳಿಂದ ಕ್ರಿಯಾ ಮೂರ್ತಿಗಳಾಗಿ ನಿರಂತರ ತ್ರಿವಿಧ ಕ್ರಿಯಾಪೂಜಾ ಕಾರ್ಯವನ್ನು ಪರಂಪರೆ, ಸಂಪ್ರದಾಯದಂತೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ನಿತ್ಯ ನಸುಕಿನ ಜಾವ 3ಗಂಟೆಗೆ ಶಿವಪ್ರಕಾಶ ಕೊಟ್ಟೂರು ದೇವರು ಕ್ರಿಯಾ ಪೂಜೆ ಆರಂಭಿಸಿ ಬೆಳಗ್ಗೆ ಆರು ಗಂಟೆಗೆ ಪ್ರಥಮ ಪೂಜೆ, ಎರಡನೇ ಪೂಜೆ ಮಧ್ಯಾಹ್ನ 12 ರಿಂದ 1:30ರವರೆಗೆ ಹಾಗೂ ಮೂರನೇ ಪೂಜೆ ರಾತ್ರಿ 8:30 ರಿಂದ 10 ಗಂಟೆಗೆವರೆಗೆ ನಡೆಯುತ್ತದೆ. ಮಧ್ಯಾಹ್ನ ಪಂಚಾಮೃತ ಅಭಿಷೇಕ, ಸಂಜೆ ಅಷ್ಟಾವರ ಪೂಜೆ ಮಂಗಳಾರತಿ, ರಾತ್ರಿ ಕ್ರಿಯಾ ಪ್ರಸಾದ ಪೂಜೆ ನಡೆಯುತ್ತದೆ. ರಥೋತ್ಸವಕ್ಕೂ ಮುಂಚೆ ನಾಗರ, ನವಿಲು, ಗಜ, ವೃಷಭ ವಾಹನೋತ್ಸವ ಹಾಗೂ ರಥೋತ್ಸವ ಸೇರಿದಂತೆ ದೇವಾಲಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳು ಇವರ ಸಾನಿಧ್ಯದಲ್ಲಿಯೇ ನಡೆಯುವುದು ವಿಶೇಷ. ತ್ರಿವಿಧ ಕ್ರಿಯಾ ಪೂಜೆ ಕೈಗೊಳ್ಳುವುದು ನಮ್ಮ ಜೀವನದ ಅತ್ಯಂತ ಶ್ರೇಷ್ಠಕಾರ್ಯ ಎನ್ನುತ್ತಾರೆ ಶಿವಪ್ರಕಾಶ ಕೊಟ್ಟೂರು ದೇವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts