More

    ನೀರಿಲ್ಲದೆ ಮುರುಟುತ್ತಿವೆ ಕೋಟಿ ಸಸಿ!

    ಬೆಳಗಾವಿ: ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಕೃಷಿ ಬೆಳೆಗಳು ಒಣಗುತ್ತಿರುವುದು ಒಂದು ಕಡೆಯಾದರೆ ನಾನಾ ಕಡೆ ನೆಟ್ಟಿರುವ ಕೋಟ್ಯಂತರ ಸಸಿಗಳು ಪಾಲನೆ-ಪೋಷಣೆ, ನೀರಿಲ್ಲದೆ ಬಾಡುತ್ತಿವೆ. ಮತ್ತೊಂದೆಡೆ ಸಸಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯು ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸಲು ಪರದಾಡುತ್ತಿದೆ.

    ರಾಜ್ಯಾದ್ಯಂತ ಕೋಟಿವೃಕ್ಷ ಅಭಿಯಾನದ ಯೋಜನೆಯಡಿ ಜಿಪಂ, ತೋಟಗಾರಿಕೆ, ಅರಣ್ಯ, ಸಾಮಾಜಿಕ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ರಸ್ತೆಯ ಎರಡು ಬದಿ, ಸರ್ಕಾರದ ಖಾಲಿ ಪ್ರದೇಶ, ಗಾಯರಾಣ ಪ್ರದೇಶಳಲ್ಲಿ ನೇರಳೆ, ಸೀಬೆ, ಮಾವು, ಸಪೋಟ, ಚಿಕ್ಕು, ದಾಳಿಂಬೆ, ನಿಂಬೆ , ಹೆಬ್ಬೇವು, ತೇಗ, ಹೊನ್ನೆ, ಹುಣಸೆ, ಆಲದ ಮರ ಸೇರಿ ಇತರ ಸಸಿಗಳನ್ನು ನೆಡುತೋಪು ಮಾಡಿದೆ. ಆದರೆ, ಮಳೆಕೊರತೆಯಿಂದಾಗಿ ನೆಟ್ಟಿರುವ ಸಸಿಗಳು ಒಣಗಿ ಹೋಗುತ್ತಿವೆ. ಅವುಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಕೋಟಿವೃಕ್ಷ ಅಭಿಯಾನದ ಯೋಜನೆಯಡಿ ಸುಮಾರು 2.40 ಕೋಟಿ ಸಸಿ ನೆಡಲಾಗಿದೆ. ಅದರಲ್ಲಿ ಶೇ.18 ಸಸಿಗಳು ನೀರಿನ ಅಭಾವ, ನಿರ್ವಹಣೆ ಇಲ್ಲದೆ ಹಾಳಾಗಿಹೋಗಿವೆ.

    ಶೇ.12 ಸಸಿಗಳು ನಾಟಿಯ ಆರಂಭದಲ್ಲಿ ಒಣಗಿ ಹೋಗಿವೆ. ಇನ್ನುಳಿದ ಸಸಿಗಳು ಇದೀಗ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಎದುರಿಸುತ್ತಿವೆ.
    ಸಸಿ ನೆಟ್ಟ ದಿನದಿಂದ ವರ್ಷದೊಳಗೆ ನಾಲ್ಕೈದು ಬಾರಿ ಮಾತ್ರ ನೀರು ಹಾಕಲು ಅವಕಾಶವಿದೆ. ಒಂದು ಸಸಿಗೆ ಸುಮಾರು 50 ರಿಂದ 75 ಲೀಟರ್ ನೀರು ಹಾಕಬೇಕು. ಒಂದು ಸಸಿಗೆ ವರ್ಷಕ್ಕೆ 130 ರಿಂದ 150 ರೂ. ಅನುದಾನ ಸರ್ಕಾರ ನೀಡುತ್ತದೆ. ಆದರೆ, ಸಸಿ ನೆಡುವುದಕ್ಕೆ ದೊಡ್ಡ ತಗ್ಗು ತೆಗೆಯಲಾಗಿದ್ದರಿಂದ ತಗ್ಗು ತುಂಬಿಸಲು 100 ಲೀಟರ್‌ವರೆಗೆ ನೀರು ಬೇಕಾಗುತ್ತಿದೆ. ಹಾಗಾಗಿ, 3,000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರು ಸುಮಾರು 30 ರಿಂದ 35 ಸಸಿಗಳಿಗೆ ಸಾಕಾಗುತ್ತದೆ. ಸರ್ಕಾರ ನೀಡುವ ಕಡಿಮೆ ಅನುದಾನದಲ್ಲಿ ಸಸಿಗಳು ಸಂರಕ್ಷಣೆ ಮಾಡುವುದು ಕಷ್ಟವಾಗುತ್ತಿದೆ. ಕೆರೆ, ಹಳ್ಳ ಹಾಗೂ ನದಿಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಸಸಿಗಳಿಗೆ ನೀರು ಹಾಕಲು ಸಾಧ್ಯವಾಗುತ್ತಿಲ್ಲ. ಖಾಸಗಿ ಕೊಳವೆ ಬಾವಿ ಅವರ ಕಡೆಯಿಂದ ಒಂದು ಟ್ಯಾಂಕರ್ ನೀರಿಗೆ 150 ರಿಂದ 200 ರೂ. ವೆಚ್ಚ ಮಾಡಿ ಖರೀದಿಸಬೇಕಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈಗಾಗಲೇ ನರೇಗಾ ಯೋಜನೆಯಡಿ ಸಸಿ ನೆಡುವ ಉದ್ದೇಶದಿಂದ ರಾಜ್ಯದ 6 ಸಾವಿರ ಗ್ರಾಪಂ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯು ಸುಮಾರು 3.60 ಕೋಟಿಗೂ ಅಧಿಕ ಗುಂಡಿ ತೋಡಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಸಸಿ ನೆಡದಿರುವುದರಿಂದ ಗುಂಡಿಗಳು ಮುಚ್ಚಿ ಹೋಗಿವೆ. ಕೆಲವೆಡೆ ಗುಂಡಿಗಳಿದ್ದರೂ ನೆಡಲು ಸಸಿಗಳು ಸಿಗುತ್ತಿಲ್ಲ. ನೆಟ್ಟಿರುವ ಸಸಿಗಳು ಕೂಡ ನೀರಿಲ್ಲದೆ ಬಾಡುತ್ತಿವೆ. ಮಳೆ ಕೊರೆಯಿಂದಾಗಿ ನರೇಗಾ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗುಂಡಿಗಳು, ನೆಟ್ಟಿರುವ ಸಸಿಗಳು ಹಾಳಾಗಿವೆ ಎಂದು ಜಿಪಂ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಾರಿ ತೀವ್ರ ಬಿಸಿಲು, ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ನೆಟ್ಟಿರುವ ಲಕ್ಷಾಂತರ ಸಸಿಗಳನ್ನು ಉಳಿಸಿ, ಬೆಳೆಸುವುದು ಕಷ್ಟವಾಗುತ್ತಿದೆ. ಬಹುತೇಕ ಕಡೆ ಟ್ಯಾಂಕರ್‌ಗಳ ಮೂಲಕ ಸಸಿಗಳಿಗೆ ನೀರು ಹಾಕಲಾಗುತ್ತಿದೆ. ಆದರೂ, ನೀರಿನ ಅಭಾವದಿಂದಾಗಿ ಸಸಿಗಳು ಬಾಡುತ್ತಿವೆ.
    | ಕೆ.ಎಸ್.ಗೊರವರ ಡಿಎಫ್‌ಒ, ಸಾಮಾಜಿಕ ಅರಣ್ಯ ಇಲಾಖೆ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts