More

    ಚಾರಣ ಪ್ರಿಯರ ಸೆಳೆವ ಕೊಸಳ್ಳಿ ಜಲಪಾತ

    ಬೈಂದೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಕೊಸಳ್ಳಿ ಜಲಪಾತ ತುಂಬಿ ಹರಿಯುತ್ತಿದೆ. ಮೈತುಂಬಿ ಹರಿಯುವ ಜಲಧಾರೆಗೆ ಪ್ರವಾಸಿಗರ ಮನಸ್ಸು ಪುಳಕಿತವಾದರೆ ಚಾರಣಪ್ರಿಯರು ಫುಲ್‌ಖುಷ್ ಆಗುತ್ತಿದ್ದಾರೆ.

    ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ನೈಸರ್ಗಿಕ ಸೊಬಗಿನಿಂದ ಗುರುತಿಸಿಕೊಂಡ ಬೈಂದೂರು ತಾಲೂಕಿನ ಶಿರೂರು ಸಮೀಪದ ಕೊಸಳ್ಳಿ ಜಲಪಾತ ಆಕರ್ಷಕ ಸೌಂದರ್ಯ ಹೊಂದಿದೆ. ಮಳೆಗಾಲದಲ್ಲಿ ಈ ಜಲಪಾತ ಜೋಗದ ನೆನಪು ಮಾಡಿಸುತ್ತದೆ. ದಟ್ಟ ಕಾನನದ ನಡುವಿನ ನೈಸರ್ಗಿಕ ಸೊಬಗು ಪ್ರಕ್ರತಿಯ ವಿಶಿಷ್ಟತೆ ಬಿಂಬಿಸುತ್ತದೆ. ಜಲಪಾತ ತಲುಪುವವರೆಗೆ ಸಿಗುವ ಹತ್ತಾರು ಕಿರು ತೊರೆಗಳು ಚಾರಣ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.

    ಎಲ್ಲಿದೆ ಅಬ್ಬಿ ಜಲಪಾತ: ಉಡುಪಿಯಿಂದ ಉತ್ತರಕ್ಕೆ 80 ಕಿ.ಮೀ. ದೂರದಲ್ಲಿ ಶಿರೂರು ಎಂಬ ಗ್ರಾಮ ಸಿಗುತ್ತದೆ. ಇಲ್ಲಿಂದ ತೂದಳ್ಳಿ ರಸ್ತೆಯಲ್ಲಿ 8 ಕಿ.ಮೀ ಪೂರ್ವಾಭಿಮುಖವಾಗಿ ಸಾಗಬೇಕು. ಬಳಿಕ 4 ಕಿ.ಮೀ ಕಾಲ್ನಡಿಗೆಯ ಕಾಡುದಾರಿಯಲ್ಲಿ ಸಾಗಿದಾಗ ಕೊಸಳ್ಳಿ ಜಲಪಾತ ಕಾಣಸಿಗುತ್ತದೆ. ನೀರವ ಕಾಡಿನ ನಡುವೆ ಜಲರಾಶಿಯ ಭೋರ್ಗರೆತ, ಪ್ರಾಣಿ ಪಕ್ಷಿಗಳ ಕಲರವ ಉಲ್ಲಾಸದ ಅನುಭವ ನೀಡುತ್ತದೆ. ಈ ಜಲಪಾತವನ್ನು ಅಬ್ಬಿ ಜಲಪಾತವೆಂದು ಕರೆಯುತ್ತಾರೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಆಕರ್ಷಕ ಕೇಂದ್ರವಾಗಿರುವುದರಿಂದ ಮಿನಿ ಜೋಗ ಎಂದೇ ಪ್ರಸಿದ್ಧಗೊಂಡಿದೆ. ನೂರಾರು ಅಡಿ ಎತ್ತರದಿಂದ ಧುಮುಕುವ ಕೊಸಳ್ಳಿಯ ಅಬ್ಬಿ ಜಲಪಾತ ಎರಡು ಹಂತಗಳಲ್ಲಿ ಕಾಣಸಿಗುತ್ತದೆ. ಜಲಪಾತದಿಂದ ಹರಿಯುವ ನದಿ ಸಾವಿರಾರು ಎಕರೆ ಕೃಷಿಭೂಮಿಗೆ ನೀರಾವರಿಯ ಆಸರೆ ನೀಡಿ ಸಂಕದಗುಂಡಿ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಮಳೆಯ ಅಬ್ಬರ ಕಳೆದೊಂದು ವಾರದಿಂದ ಆರಂಭಗೊಂಡಿದ್ದು, ಕೊಸಳ್ಳಿಯ ಅಬ್ಬಿ ಜಲಪಾತ ಇನ್ನಷ್ಟು ಸೌಂದರ‌್ಯ ವೃದ್ಧಿಸಿಕೊಂಡಿದೆ. ಹೀಗಾಗಿ ಪಿಕ್‌ನಿಕ್ ಕೇಂದ್ರವಾಗಿದೆ.

    ಚಾರಣ ಪ್ರಿಯರು ಜಾಗ್ರತೆ ವಹಿಸಬೇಕು
    ಮಳೆಗಾಲದಲ್ಲಿ ಜಲಪಾತದ ಸಮೀಪ ಹೋಗಲು ಸಾಧ್ಯವಿಲ್ಲ. ಆದರೆ ದೂರದಿಂದ ನೋಡಿ ಆನಂದಿಸಬಹುದಾಗಿದೆ. ಜನವರಿ- ಫೆಬ್ರವರಿಯವರೆಗೂ ಜಲಧಾರೆ ಇದ್ದರೂ ಮಳೆಗಾಲದಲ್ಲಿ ಈ ಜಲಪಾತ ನೋಡುಗರನ್ನು ಪುಳಕಿತಗೊಳಿಸುತ್ತದೆ. ಜಲಪಾತಕ್ಕೆ ಸಾಗುವಾಗ ಕಲ್ಲುಗಳು ಜಾರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ.

    ದೇಶ-ವಿದೇಶಗಳಲ್ಲಿ ಸಾವಿರ ಸಾವಿರ ಖರ್ಚು ಮಾಡಿ ಅಲ್ಲಿನ ನೈಸರ್ಗಿಕ ಮತ್ತು ಕೃತಕವಾಗಿ ನಿರ್ಮಿಸಿದ ಜಲಪಾತ ನೋಡಿಕೊಂಡು ಬಂದು ಇಲ್ಲಿ ಬೀಗುತ್ತೇವೆ. ಆದರೆ ಊರಿನ ಪಕ್ಕದಲ್ಲಿಯೇ ಇರುವ ಪ್ರಾಕೃತಿಕವಾಗಿ ಹರಿಯುತ್ತಿರುವ ಸಮೃದ್ಧ ಜಲರಾಶಿಯ ಮೂಲದತ್ತ ನಾವು ನಮ್ಮ ದೃಷ್ಟಿ ಹರಿಸುವುದಿಲ್ಲ. ಎಷ್ಟೆಂದರೂ ಹಿತ್ತಲ ಗಿಡ ಮದ್ದಲ್ಲ.
    ಯು. ಪಾಂಡುರಂಗ ಪಡಿಯಾರ್, ಉದ್ಯಮಿ ಉಪ್ಪುಂದ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts