More

    ದ.ಕ.ದಲ್ಲೂ ಕರೊನಾ ಹೈ ಅಲರ್ಟ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜತೆ ಗಡಿ ಹಂಚಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಕರೊನಾ ಸೋಂಕು ಮೊದಲ ಬಾರಿ ಪತ್ತೆಯಾಗಿದ್ದು, ನೆರೆಯ ಕೇರಳದಲ್ಲಿ ಕರೊನಾ ಶಂಕಿತರ ಸಂಖ್ಯೆ ಮೂರಕ್ಕೇರಿದೆ. ಇದರೊಂದಿಗೆ ರಾಜ್ಯ ಆರೋಗ್ಯ ಇಲಾಖೆ ಚುರುಕಾಗಿದ್ದು, ದಕ್ಷಿಣ ಕನ್ನಡ ಸಹಿತ ನಾಲ್ಕು ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಿದೆ.
    ಚೀನಾದಿಂದ ನೇರವಾಗಿ ಮಂಗಳೂರಿಗೆ ಸಮುದ್ರ ಮಾರ್ಗದಲ್ಲಿ ಸಾಧ್ಯತೆಗಳಿರುವುದರಿಂದ ನವಮಂಗಳೂರು ಬಂದರಿನ ಮೇಲೆಯೂ ನಿಗಾ ಇರಿಸಲಾಗಿದೆ. ಹಲವಾರು ಚೀನೀಯರು ಸರಕು ಹಡಗುಗಳಲ್ಲಿ ಬಂದರಿಗೆ ಬರುತ್ತಿದ್ದು, ಅವರಲ್ಲಿ ರೋಗ ಲಕ್ಷಣಗಳಿದ್ದರೆ ತಕ್ಷಣ ಮಾಹಿತಿ ನೀಡುವಂತೆ ಬಂದರಿನ ಸಾರ್ವಜನಿಕ ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ.
    ಚಾಮರಾಜನಗರ, ಕೊಡಗು, ಮೈಸೂರು ಹೈ ಅಲರ್ಟ್ ಸೂಚನೆ ನೀಡಿದ ಇತರ ಮೂರು ಜಿಲ್ಲೆಗಳು.
    ದಕ್ಷಿಣ ಕನ್ನಡಕ್ಕೆ ಕೇರಳದಿಂದ ಬರುವವರ ಸಂಖ್ಯೆ ಹೆಚ್ಚಿರುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯೂ ಸರ್ವೇಕ್ಷಣೆ ಚುರುಕುಗೊಳಿಸಿದೆ. ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ರೋಗ ಸೋಂಕು ತಗುಲಿದ ಲಕ್ಷಣಗಳಿದ್ದರೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
    ಮಂಗಳೂರು ವಿಮಾನ ನಿಲ್ದಾಣದಲ್ಲೂ ಕರೊನಾ ಕುರಿತ ಮಾಹಿತಿ ಫಲಕಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೆ ಆಗಮಿಸುವವರ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ರೋಗ ಲಕ್ಷಣಗಳಿದ್ದರೆ ಮಾಹಿತಿ ಪಡೆದು ಅವರನ್ನು ಪ್ರತ್ಯೇಕ ಸೆಲ್‌ಗೆ ವರ್ಗಾಯಿಸಲು ಯೋಜನೆ ರೂಪಿಸಲಾಗಿದೆ.
    ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ತುರ್ತು ಸಂದರ್ಭ ಬಳಸಲು ಸಾಧ್ಯವಾಗುವಂತೆ ಇತರ ವಾರ್ಡ್‌ಗಳಿಂದ ಪ್ರತ್ಯೇಕಿಸಿ 10 ಬೆಡ್‌ಗಳನ್ನು ಕಾದಿರಿಸಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೂ ಅವರು ವಹಿಸಬೇಕಾದ ಪಾತ್ರಗಳ ಬಗ್ಗೆ ನಿಖರ ಮಾಹಿತಿ ಒದಗಿಸಲಾಗಿದೆ.

    28 ದಿನಗಳ ಕಡ್ಡಾಯ ಮನೆವಾಸ
    ಕರೊನಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರು ರೋಗ ಲಕ್ಷಣ ಇರಲಿ, ಇಲ್ಲದಿರಲಿ, 28 ದಿನಗಳ ಕಾಲ ಮನೆಯಲ್ಲೇ ಇರಬೇಕಾದ್ದು ಕಡ್ಡಾಯ. ಜನರು ಸೀನುವಾಗ ಕೆಮ್ಮುವಾಗ ಬಾಯಿ, ಮೂಗಿಗೆ ಕರವಸ್ತ್ರ ಅಡ್ಡ ಹಿಡಿಯುವಂತಹ ಕನಿಷ್ಠ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಸೂಚನೆ ನೀಡಿದೆ.

    ಹೈಅಲರ್ಟ್ ಹಿನ್ನೆಲೆಯಲ್ಲಿ ಎನ್‌ಎಂಪಿಟಿ, ಏರ್‌ಪೋರ್ಟ್, ಎಲ್ಲ ಬಸ್ ನಿಲ್ದಾಣಗಳು, ಖಾಸಗಿ-ಸರ್ಕಾರಿ ಆಸ್ಪತ್ರೆಗಳಿಗೆ ಈ ಬಗ್ಗೆ ನಿಗಾ ಇರಿಸುವಂತೆ ಸೂಚಿಸಲಾಗಿದೆ. ಜನರು ಯಾವುದೇ ರೋಗ ಲಕ್ಷಣ ಇದ್ದಲ್ಲಿ ಅದನ್ನು ಬಚ್ಚಿಡದೆ ಮಾಹಿತಿ ನೀಡಬೇಕಾಗಿ ಕೋರುತ್ತೇವೆ.
    – ಡಾ.ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

    ಪರಿಸ್ಥಿತಿ ಎದುರಿಸಲು ಕಾಸರಗೋಡು ಸಜ್ಜು
    ಮುಳ್ಳೇರಿಯಾ: ಚೀನಾದ ವುಹಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಓದುತ್ತಿದ್ದ ಕಾಸರಗೋಡು ಜಿಲ್ಲೆಯ ಕಾಞಂಗಾಡು ನಿವಾಸಿ ವಿದ್ಯಾರ್ಥಿಗೆ ಕರೊನಾ ಬಾಧಿಸಿರುವುದು ಖಚಿತವಾಗುತ್ತಿದ್ದಂತೆ ಜಿಲ್ಲಾಡಳಿತ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ, ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚಿಸಿದೆ.
    ತ್ರಿಶ್ಯೂರ್ ಮತ್ತು ಆಲಪ್ಪುಳ ಜಿಲ್ಲೆಗಳ ಇಬ್ಬರು ವಿದ್ಯಾರ್ಥಿಗಳಿಗೆ ಕೆಲದಿನಗಳ ಹಿಂದೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಅವರ ಸಹಪಾಠಿಯಾಗಿರುವ ಕಾಸರಗೋಡು ವಿದ್ಯಾರ್ಥಿಯನ್ನು ಈಗ ಕಾಞಂಗಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಈ ಮೂವರೂ ವಿದ್ಯಾರ್ಥಿಗಳು ಜ.24ರಂದು ಒಂದೇ ವಿಮಾನದಲ್ಲಿ ಜತೆಯಾಗಿ ಕೇರಳಕ್ಕೆ ವಾಪಸ್ಸಾಗಿದ್ದರು.

    ಉಪಸಮಿತಿ ರಚನೆ: ಜಿಲ್ಲೆಯಲ್ಲಿ 15 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿದಿನ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ತುರ್ತು ಸಂದರ್ಭ ಎದುರಿಸಲು ಜಿಲ್ಲಾ ಆಸ್ಪತ್ರೆ ಹಾಗೂ ಜನರಲ್ ಆಸ್ಪತ್ರೆಗಳಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 18, ಜನರಲ್ ಆಸ್ಪತ್ರೆಯಲ್ಲಿ 12 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 4 ಐಸೋಲೇಶನ್ ವಾರ್ಡ್ ಸಜ್ಜುಗೊಳಿಸಲಾಗಿದೆ.
    ಕೇರಳದಲ್ಲೇ ತಪಾಸಣೆಗೆ ಲ್ಯಾಬ್: ಇದುವರೆಗೆ ಕರೊನಾ ವೈರಸ್ ಪತ್ತೆಗೆ ಪುಣೆಯ ವೈರಾಲಜಿ ಪ್ರಯೋಗಾಲಯದ ವರದಿಗೆ ಕಾಯಬೇಕಿತ್ತು. ಆದರೆ ಕೇರಳ ಸರ್ಕಾರದ ವಿಶೇಷ ಬೇಡಿಕೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಆಲಪ್ಪುಳ ಜಿಲ್ಲಾಸ್ಪತ್ರೆಗೆ ಕರೊನಾ ಸೋಂಕು ಪತ್ತೆ ಲ್ಯಾಬ್ ತೆರೆಯಲು ಸೋಮವಾರ ಅನುಮತಿ ನೀಡಿದೆ. ಇದರಿಂದ 4-5 ಗಂಟೆಗಳಲ್ಲಿ ಸೋಂಕಿನ ಪತ್ತೆ ಸಾಧ್ಯವಾಗಲಿದೆ. ಇದಕ್ಕಾಗಿ ವಿಶೇಷ ಲ್ಯಾಬ್ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಕೇಂದ್ರ ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    ಕಂಟ್ರೋಲ್ ರೂಂ ಆರಂಭ: ಜ.1ರ ಬಳಿಕ ಚೀನಾದಿಂದ ಕೇರಳಕ್ಕೆ ಆಗಮಿಸಿದ ಹಲವರು ಆರೋಗ್ಯ ಇಲಾಖೆಯನ್ನು ಸಂಪರ್ಕಿಸದೆ, ಯಾವುದೇ ಮಾಹಿತಿ ನೀಡದೆ ಮನೆಯಲ್ಲಿ ಇದ್ದಾರೆ. ಅಂಥವರು ತಕ್ಷಣ ಸಂಪರ್ಕಿಸಬೇಕು. ಬಾಧಿತರು, ಶಂಕಿತರು ಸಾರ್ವಜನಿಕ ಆರೋಗ್ಯ ಮತ್ತು ವೈಯಕ್ತಿಕ ಸುರಕ್ಷತೆಗಾಗಿ ಸಾರ್ವಜನಿಕ ಚಟುವಟಿಕೆಗಳಿಂದ ದೂರವಿರಬೇಕು ಎಂದು ಕೇರಳ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ತುರ್ತು ಪರಿಸ್ಥಿತಿ ಎದುರಿಸಲು ಕಾಞಂಗಾಡು ಡಿಎಂಒ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. 9946000493, 0467 2217777, ಟೋಲ್ ರಹಿತ ಸಂಖ್ಯೆ 0471 2552056 ಸಂಪರ್ಕಿಸಬಹುದು.

    ಕಾಸರಗೋಡಿನಲ್ಲಿ 85 ಮಂದಿ
    ಜಿಲ್ಲೆಯಲ್ಲಿ 85ರಷ್ಟು ಮಂದಿ ಚೀನಾದಿಂದ ವಾಪಸ್ಸಾಗಿದ್ದು, ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಯಿತು. ಸೋಂಕು ಹರಡುವುದನ್ನು ತಡೆಯಲು ಸಂಪೂರ್ಣ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಪುಣೆಯ ವೈರಾಲಾಜಿ ಇನ್‌ಸ್ಟಿಟ್ಯೂಟ್‌ಗೆ ಶಂಕಿತರ ರಕ್ತ ಮಾದರಿ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ 85 ಮಂದಿ ತಮ್ಮ ಮನೆಗಳಲ್ಲಿ ವಿಶೇಷ ನಿಗಾದಲ್ಲಿದ್ದಾರೆ. ಈಗ ಸೋಂಕು ಖಚಿತಗೊಂಡು ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಆರೋಗ್ಯ ತೃಪ್ತಿಕರವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts