More

    9 ಕುಟುಂಬಗಳಿಗೆ 3 ಬಾರಿ ಮನೆ!

    – ಮನೋಹರ್ ಬಳಂಜ ಬೆಳ್ತಂಗಡಿ
    ಮಳೆ, ಗಾಳಿ, ಬಿಸಿಲೆನ್ನದೆ ಕಾಡಿಗೆ ತೆರಳಿ ಬೀಳು ತಂದು ಬುಟ್ಟಿ ಹೆಣೆದೇ ಸಾಗಬೇಕು ಬದುಕು.. ಶಿಕ್ಷಣ ಇಲ್ಲ, ಸರ್ಕಾರಿ ಕಚೇರಿಗೆ ಅಲೆಯಲು ತಿಳಿದಿಲ್ಲ… ಪರಾವಲಂಬಿಗಳಾಗಿ ಬದುಕುತ್ತಿರುವವರಿಗೆ ಭದ್ರವಾದ ಮನೆಯಿಲ್ಲ… ಮನೆಗೆ ಬಂದರೆ ಮಳೆಗಾಲದಲ್ಲಿ ಸೋರುವ ಮನೆಗಳು..

    – ಇದು ಉಜಿರೆ ಗ್ರಾಮದ ಬಡಕೊಟ್ಟು ಎಂಬಲ್ಲಿರುವ 9 ಕೊರಗ ಕುಟುಂಬಗಳ ಸ್ಥಿತಿ.
    ಹಾಗೆಂದು ಈ ಕುಟುಂಬಗಳಿಗೆ ಸರ್ಕಾರ ಮನೆ ಕಟ್ಟಿ ಕೊಟ್ಟಿಲ್ಲವೆಂದಲ್ಲ. ಒಂದಲ್ಲ, ಮೂರು ಬಾರಿ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಇಲಾಖೆಗಳು ನಿರ್ಮಿಸಿದ ಮನೆಗಳ ಗುಣಮಟ್ಟದ ಕೊರತೆಯಿಂದಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಪ್ರಸ್ತುತ ವಾಸಿಸುತ್ತಿರುವ ಮನೆಗಳು ನಿರ್ಮಾಣವಾಗಿ ಕೇವಲ ಒಂದು ದಶಕ ಕಳೆದಿದೆ. ಅಷ್ಟರಲ್ಲೇ ಕುಸಿದು ಬೀಳುವ ಸ್ಥಿತಿಗೆ ತಲುಪಿವೆ.
    ಮೊದಲು ಹೆಂಚಿನ ಮನೆಗಳನ್ನು ಇಲಾಖೆ ನಿರ್ಮಿಸಿ ಕೊಟ್ಟಿತ್ತು. ಅದು ಉತ್ತಮವಾಗಿಯೂ ಇತ್ತು. ಬಳಿಕ ಅನುದಾನ ಸಿಕ್ಕಿತೆಂದು ಹಳೆಯ ಮನೆ ಕೆಡವಿ ಐಟಿಡಿಪಿ ಇಲಾಖೆಯಿಂದ ಸ್ಲಾಬಿನ ಮನೆಗಳನ್ನು ನಿರ್ಮಿಸಲಾಯಿತು. ನಿರ್ಮಿತಿ ಕೇಂದ್ರ ನಿರ್ಮಿಸಿದ ಈ ಮನೆಗಳು ಕೋಳಿಗೂಡಿನಂತಿದ್ದವು. ಅದರ ಒಳಗೆ ಹೋಗುವುದಕ್ಕೂ ಭಯಪಡುವಂತಿತ್ತು. ಮನೆಗಳ ಅಂಗಳದಲ್ಲಿ ಟರ್ಪಾಲು ಹಾಕಿ ಕೆಲವು ವರ್ಷ ದೂಡಿದರು. ಅದನ್ನೂ ಕೆಡವಿ ಇಲಾಖೆ ಮತ್ತೆ ಹೆಂಚಿನ ಮನೆಗಳನ್ನು ನಿರ್ಮಿಸಿತು.
    * ಮಳೆಗಾಲ ಹೇಗೆ ಕಳೆಯಲಿ?: ಈಗ ಹೆಂಚಿನ ಎಲ್ಲ ಮನೆಗಳ ಮೇಲ್ಛಾವಣಿಗಳು ಮುರಿದಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಗೋಡೆಗಳಿಗೆ ಮಾಡಿರುವ ಪ್ಲಾಸ್ಟರಿಂಗ್ ಬಹುತೇಕ ಕಿತ್ತು ಹೋಗಿದ್ದು, ಗೋಡೆಗಳೂ ಬಿರುಕು ಬಿಟ್ಟಿವೆ. ಕಳೆದ ಮಳೆಗಾಲದಲ್ಲಿ ಮೇಲ್ಛಾವಣಿಯ ಮೇಲೆ ಪ್ಲಾಸ್ಟಿಕ್ ಹೊದೆಸಿ ಕುಟುಂಬಗಳು ರಕ್ಷಣೆ ಪಡೆದಿದ್ದವು. ಆದರೆ ಮುಂದಿನ ಮಳೆಗಾಲವನ್ನು ಕಳೆಯುವುದು ಹೇಗೆ? ಇದರಲ್ಲಿ ವಾಸಿಸಲು ಸಾಧ್ಯವಾಗದು ಎಂಬುದು ಈ ಕುಟುಂಬಗಳ ಅಳಲು.

    ಶಾಶ್ವತ ಸೂರು ಬೇಡಿಕೆ: ಅತ್ಯಂತ ಸಣ್ಣ ಬುಡಕಟ್ಟು ಸಮುದಾಯವಾಗಿರುವ ಕೊರಗರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಅವರ ಬದುಕು ಮಾತ್ರ ಇನ್ನೂ ಸಂಕಷ್ಟದಲ್ಲಿಯೇ ಇದೆ. ಉಜಿರೆ ಬಡಕೊಟ್ಟಿನ ಈ ಒಂಬತ್ತು ಕೊರಗ ಕುಟುಂಬಗಳು ಇಂದೋ ನಾಳೆಯೋ ಕುಸಿಯುವ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿವೆ. ಇವರಿಗೆ ಹೊಸ ಮನೆಗಳನ್ನು ಕಟ್ಟಲು ಇಲಾಖೆಯ ಬಳಿ ಅನುದಾನವಿದ್ದರೂ ತಾಂತ್ರಿಕ ಸಮಸ್ಯೆಗಳಿಂದಾಗಿ ಈಗ ಇರುವ ಮನೆಗಳನ್ನು ಕೆಡವಿ ಹೊಸ ಮನೆ ಕಟ್ಟುವ ಕಾರ‌್ಯ ನಡೆದಿಲ್ಲ. ಮುಂದಿನ ಮಳೆಗಾಲವನ್ನು ಕಳೆಯುವ ಶಕ್ತಿ ಈ ಮನೆಗಳಿಗೆ ಇಲ್ಲ. ಕೂಡಲೇ ತಮಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂಬುದು ಈ ಬಡಕುಟುಂಬಗಳ ಬೇಡಿಕೆ.
    ಮೂರು ದಶಕಗಳಿಂದ ಈ ಒಂಬತ್ತು ಕೊರಗ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ತಮ್ಮ ಕುಲಕಸುಬಾಗಿರುವ ಬುಟ್ಟಿ ಕಟ್ಟುವ ಕಾರ್ಯದೊಂದಿಗೆ ಕೂಲಿ ಕೆಲಸಕ್ಕೂ ಹೋಗಿ ಬದುಕು ನಡೆಸುತ್ತಿದ್ದಾರೆ. ಮನೆಗಳನ್ನು ಕಟ್ಟುವಷ್ಟು ಇವರು ಶಕ್ತರಲ್ಲ.

    ಪತ್ರ ವ್ಯವಹಾರದಲ್ಲೇ ಇಲಾಖೆ ಬ್ಯುಸಿ: ಹೊಸ ಮನೆ ನಿರ್ಮಿಸಿಕೊಡುವಂತೆ ಸಮಾಜಕಲ್ಯಾಣ ಇಲಾಖೆಗೆ ಈ ಕುಟುಂಬಗಳು ಈಗಾಗಲೇ ಅರ್ಜಿ ಸಲ್ಲಿಸಿವೆ. ಇವರಿಗೆ ಮನೆಯ ಅಡಿಯ ಜಾಗ ಮಾತ್ರವಿದ್ದು, ಹೊಸ ಮನೆ ಕಟ್ಟಬೇಕಾದರೆ ಈಗ ಇರುವ ಮನೆ ಕೆಡವಬೇಕು. ಇದಕ್ಕಾಗಿ ಇಲಾಖೆ ಈಗ ಇರುವ ಮನೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಜನವರಿ ಮೊದಲ ವಾರದಲ್ಲಿ ಪತ್ರ ಬರೆದಿದೆ. ವರದಿ ಬಂದ ಬಳಿಕವಷ್ಟೇ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಇಲಾಖೆಗಳ ಈಗಿನ ವೇಗ ನೋಡಿದರೆ ಈ ಕುಟುಂಬಗಳು ಜೀವ ಕೈಯಲ್ಲಿ ಹಿಡಿದು ಮುಂದಿನ ಮಳೆಗಾಲವನ್ನು ಇದೇ ಮನೆಗಳಲ್ಲಿ ಕಳೆಯಬೇಕಾಗಿ ಬರುವ ಸಾಧ್ಯತೆಯೇ ಹೆಚ್ಚಾಗಿದೆ.

    ನಾವೆಲ್ಲ ಕೂಲಿ ಕೆಲಸ ಮಾಡಿ ಬುಟ್ಟಿ ಕಟ್ಟಿ ಜೀವನ ಸಾಗಿಸುವವರು. ಈಗ ಕೂಲಿ ಕೆಲಸವೂ ಸರಿಯಾಗಿ ಇಲ್ಲವಾಗಿದೆ. ಮನೆಗಳನ್ನು ರಿಪೇರಿ ಮಾಡುವ, ಕಟ್ಟುವ ಶಕ್ತಿ ನಮಗಿಲ್ಲ. ಇಲಾಖೆಯವರು ಮನೆ ಕಟ್ಟಿ ಕೊಡುವಾಗ ಅದರ ಗುಣಮಟ್ಟದ ಬಗ್ಗೆ ಜಾಗೃತೆ ವಹಿಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಕುಸಿಯುವ ಸ್ಥಿತಿಯಲ್ಲಿರುವ ಮನೆಗಳಲ್ಲಿ ಇನ್ನು ವಾಸಿಸಲು ಸಾಧ್ಯವಿಲ್ಲ.
    – ರಮೇಶ, ಸ್ಥಳೀಯ ನಿವಾಸಿ

    ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ನಮ್ಮ ಕಾಲನಿಗೆ ನೀಡಿದ್ದಾರೆ. ಅದೇ ರೀತಿ ಉತ್ತಮ ಮನೆಯನ್ನೂ ನೀಡಿದ್ದರೆ ನಾವು ನೆಮ್ಮದಿಯಾಗಿ ಬದುಕಬಹುದಾಗಿತ್ತು. ಈಗ ಮನೆಗಿಂತ ರಸ್ತೆಯೇ ಚೆನ್ನಾಗಿದೆ. ಮಳೆಗಾಲಕ್ಕಿಂತ ಮೊದಲು ಮನೆ ನಿರ್ಮಿಸಿ ಕೊಡದಿದ್ದರೆ ನಾವು ಮನೆಯ ಅಂಗಳದಲ್ಲಿ ಟೆಂಟ್ ಹಾಕಿ ಬದುಕಬೇಕಾಗಿದೆ.
    – ಚೋಮು, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts