More

    ಅಜ್ಜರಕಾಡು ಮೈದಾನದಲ್ಲಿ ಕೊರಗ ಸಮುದಾಯದ ಕರ ಕೌಶಲ ಅನಾವರಣ

    ಉಡುಪಿ: ಪರಿಸರದಲ್ಲಿನ ವಸ್ತುಗಳನ್ನೇ ಬಳಸಿ ತಮ್ಮ ಅಪ್ರತಿಮ ಕೌಶಲದ ಮೂಲಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಕೊರಗರ ಕುಲಕಸುಬು ಈ ನೆಲದ ಮೂಲ ನಿವಾಸಿಗಳ ಕಲಾತ್ಮಕತೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತದೆ. ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಕೊರಗರ ಸಾಂಪ್ರದಾಯಿಕ ಕುಲ ಕಸುಬು ಪ್ರದರ್ಶನದಲ್ಲಿ ಬುಟ್ಟಿ ಹೆಣೆಯುವುದು, ತಡ್ಪೆ(ಗೆರಸೆ) ಕಟ್ಟುವುದು ಮೊದಲಾದ ಚಟುವಟಿಕೆ ಗಮನ ಸೆಳೆಯಿತು.

    ಕೊರಗರ ಕುಲಕಸುಬು ಮುಂದಿನ ಪೀಳಿಗೆ ಉಳಿಸಿಕೊಳ್ಳುವುದು. ಆಧುನಿಕ ಯುಗದಲ್ಲಿ ಆರೋಗ್ಯ, ಪರಿಸರಸ್ನೇಹಿ ಗೃಹೋಪಯೋಗಿ ವಸ್ತುಗಳ ಬಳಕೆ ಪ್ರೇರೇಪಿಸುವ ಆಶಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಇಲಾಖೆ, ಕೊರಗ ಸಂಘಟನೆಗಳ ಆಶ್ರಯದಲ್ಲಿ ಕೊರಗರ ಸಾಂಸ್ಕೃತಿಕ ಉತ್ಸವ, ಕ್ರೀಡಾಕೂಟದ ಅಂಗವಾವಾಗಿ ಈ ಪ್ರದರ್ಶನ ನಡೆಯಿತು.

    53 ಮಂದಿ ಭಾಗಿ: ಕೋಟ, ಕಾವಡಿ, ಬ್ರಹ್ಮಾವರ, ಸಾಲಿಗ್ರಾಮ, ಪಾಂಗಳ, ಹಕ್ಲಾಡಿ, ನಾಡ, ಗುಡ್ಡೆಯಂಗಡಿ, ವಾರಂಬಳ್ಳಿ ಮೊದಲಾದ ಕಡೆಗಳಿಂದ 53 ಮಂದಿ ಕೊರಗ ಸಮುದಾಯದವರು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಬುಟ್ಟಿ, ದವಸ ಧಾನ್ಯಗಳನ್ನು ಕೇರುವ ಗೆರಸೆ, ಅನ್ನ ಬಸಿಯುವ ಕುಡ್ಪು, ಸಣ್ಣ, ದೊಡ್ಡದಾದ ಹೂವಿನ ಬುಟ್ಟಿ, ಕೊರಗಜ್ಜನ ಬುಟ್ಟಿ ಮೊದಲಾದ ಪರಿಕರಗಳನ್ನು ವಿವಿಧ ವಿನ್ಯಾಸದಲ್ಲಿ ಸ್ಥಳದಲ್ಲೆ ತಯಾರಿಸಿ, ಪ್ರದರ್ಶಿಸಿ ಗಮನ ಸೆಳೆದರು. ಒಬ್ಬೊಬ್ಬರು ನಾಲ್ಕೈದು ಬಗೆಯ ಪರಿಕರಗಳನ್ನು ತಯಾರಿಸಿದರು.

    ಸ್ಥಳೀಯ ಮಾರುಕಟ್ಟೆಯೇ ಆಧಾರ: ಕನ್ನಡದಲ್ಲಿ ತೆಮೆ, ತುಳುವಲ್ಲಿ ಸಿಮೆ ಎಂದು ಕರೆಯುವ ಬಿದಿರಿನ ಮಾದರಿಯಲ್ಲಿರುವ ಉತ್ಪನ್ನ ಮತ್ತು ಕಾಡಿನಲ್ಲಿ ಸಿಗುವ ಬೀಳು, ಬೇರು ಮೊದಲಾದವುಗಳನ್ನು ಬಳಸಿ ಈ ಪರಿಕರಗಳನ್ನು ತಯಾರಿಸಲಾಗುತ್ತದೆ. ಹಿಂದೆಲ್ಲಾ ತೆಮೆ ಉಚಿತವಾಗಿ ನಮ್ಮ ಪರಿಸರದಲ್ಲಿಯೇ ಸಿಗುತ್ತಿತ್ತು. ಇತ್ತೀಚೆಗೆ ಹಣ ಕೊಟ್ಟು ಖರಿದೀಸಬೇಕಾಗಿದೆ. ಈ ಪರಿಕರಗಳನ್ನು ಸ್ಥಳೀಯ ಅಂಗಡಿ, ಸಂತೆ ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಮಾರುಕಟ್ಟೆಯೇ ಇವರಿಗೆ ಆಧಾರವಾಗಿದೆ. ಹೊರ ಜಿಲ್ಲೆಗಳಿಂದ ಹೂವು, ಹಣ್ಣು ಮಾರಾಟಗಾರರು ದೊಡ್ಡ, ಸಣ್ಣಗಾತ್ರದ ಬುಟ್ಟಿಗೆ ಆಗಾಗ ಬೇಡಿಕೆ ಇಡುತ್ತಾರೆ. ನಾವು ಇವರನ್ನು ಸಂಪರ್ಕಿಸಿ ಸಂಘದ ಮೂಲಕ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಕೊರಗ ಶ್ರೇಯೋಭಿವೃದ್ಧಿ ಸಂಘದ ಕಾರ್ಯದರ್ಶಿ ಶೇಖರ ಮರವಂತೆ. ಪ್ರದರ್ಶದಲ್ಲಿ ಭಾಗಿಯಾದವರಿಗೆ ಸರ್ಕಾರದಿಂದ 2,000 ಸಾವಿರ ರೂ. ಗೌರವಧನ ನೀಡಲಾಗುವುದು. ಅವರು ತಯಾರಿಸಿದ ಅಂದಾಜು 20 ಸಾವಿರ ರೂ. ಮೌಲ್ಯದ ಪರಿಕರವನ್ನು ಐಟಿಡಿಪಿ ಇಲಾಖೆ ಖರೀದಿಸುತ್ತದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ತಿಳಿಸಿದರು.

    80ರ ಅಜ್ಜಿಯ ಕಸುಬಿನ ಪ್ರೀತಿ
    ಪ್ರದರ್ಶನದಲ್ಲಿ 50 ವರ್ಷಕ್ಕೂ ಮೇಲ್ಪಟ್ಟ ಹಿರಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ ವಿಶೇಷ ಗಮನ ಸೆಳೆದಿದ್ದು 80 ವರ್ಷದ ವೃದ್ದೆ, ಪಡುಬಿದ್ರಿಯ ಸೀಗೆ. ಇವರಿಗೆ ಬಾಲ್ಯದಿಂದಲೂ ಎಡಭಾಗದ ಒಂದು ಕಣ್ಣು ಕಾಣುವುದಿಲ್ಲ. ಒಂದೇ ಕಣ್ಣಿನಲ್ಲಿ ಈ ಇಳಿವಯಸ್ಸಿನಲ್ಲಿಯೂ ತಮ್ಮ ಕೌಶಲಜ್ಞಾನದಿಂದ ಬುಟ್ಟಿ, ಹೂವಿನ ಬುಟ್ಟಿ, ಗೆರಸೆಯನ್ನು ಅಚ್ಚುಕಟ್ಟಾಗಿ ಸುಂದರವಾಗಿ ಹೆಣೆಯುತ್ತಾರೆ. ತಮ್ಮ ವೃತ್ತಿಯೇ ಇದಾಗಿದ್ದು, ಸಾಕಷ್ಟು ವರ್ಷಗಳಿಂದ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಸೀಗೆ ಅಜ್ಜಿ.

    ಕೊರಗ ಸಮುದಾಯದ ಕುಲಕಸುಬು ನಶಿಸಿ ಹೋಗುತ್ತಿರುವ ಹೊತ್ತಿನಲ್ಲಿ. ಮುಂದಿನ ಪೀಳಿಗೆ ಇದನ್ನು ಪರಿಚಯಿಸುವುದು. ಈ ಕಸುಬು ಕಲೆಯನ್ನು ಉಳಿಸಿ, ಬೆಳಸಬೇಕು ಎಂಬ ನಿಟ್ಟಿನಲ್ಲಿ ಸಾಂಸ್ಕೃತಿಕ, ಕ್ರೀಡಾಕೂಟ ಕಾರ್ಯಕ್ರಮದದ ಭಾಗವಾಗಿ ಕಸುಬು ಪ್ರದರ್ಶನವನ್ನು ಆಯೋಜಿಸಲಾಗಿದೆ.
    ಗಣೇಶ್, ಅಧ್ಯಕ್ಷರು, ಕೊರಗ ಶ್ರೇಯೋಭಿವೃದ್ಧಿ ಸಂಘ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts