More

    ಸ್ತ್ರೀ ಸ್ವಾವಲಂಬಿ ಜೀವನಕ್ಕೆ ಸರ್ಕಾರ ನೆರವು

    ಕೊಪ್ಪಳ: ಕಾಂಗ್ರೆಸ್ 65 ವರ್ಷ ಕುಟುಂಬ ರಾಜಕಾರಣದಿಂದ ದೇಶವನ್ನು ಅಭಿವೃದ್ಧಿ ವಂಚಿತ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಇಡೀ ವಿಶ್ವ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕ ಏರ್ಪಡಿಸಿದ್ದ ಮಹಿಳಾ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಈಗ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿ ಮುನ್ನುಗ್ಗುತ್ತಿದೆ. ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸ್ವಾವಲಂಬಿ ಬದುಕಿಗೆ ನೆರವಾಗಿದೆ. ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಬಡ ಮಹಿಳೆಯರ ಕಣ್ಣೀರು ಒರೆಸುವ ಕೆಲಸಗಳಾಗಿವೆ ಎಂದರು.

    ಕಾಂಗ್ರೆಸ್‌ನವರಿಗೆ ಭೂಮಿಪೂಜೆ ಮಾಡುವುದಷ್ಟೇ ಗೊತ್ತು. ಅವರಿಗೆ ಬಡವರ ಕಷ್ಟ ತಿಳಿಯುವುದಿಲ್ಲ. ಆದರೆ ಈಗ ಗ್ಯಾರಂಟಿ ಕಾರ್ಡ್ ಹಿಡಿದು ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ನಡಿಗೆ-ಕೃಷ್ಣೆ ಕಡೆಗೆ ಎನ್ನುವ ಪಾದಯಾತ್ರೆ ಕೇವಲ ಪೂಜೆಗೆ ಸೀಮಿತವಾಯ್ತು. ಅವರ ಸುಳ್ಳು ಭರವಸೆಗಳು, ಮೋಸ ಉತ್ತರ ಕರ್ನಾಟಕದ ಮತದಾರರು ಮರೆತಿಲ್ಲ ಎಂದು ಹರಿಹಾಯ್ದರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ಮಹಿಳೆಯರಿಗೆ ಆರ್ಥಿಕ ನಿರ್ವಹಣೆ ಬಗ್ಗೆ ತಿಳಿವಳಿಕೆ ಇರುತ್ತದೆ. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಸಾಕ್ಷಿ. ಸ್ವತಃ ಇಂದಿರಾಗಾಂಧಿ ಪ್ರಧಾನಿಯಾಗಿದ್ದರೂ ಮಹಿಳೆಯರ ಪರ ಕಾಳಜಿ ಹೊಂದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವಿಲ್ಲ. ಈ ಮೂಲಕ ಕಾಂಗ್ರೆಸ್ ಎಲ್ಲಿಗೆ ಬಂದು ತಲುಪಿದೆ ಎಂಬುದು ತಿಳಿಯುತ್ತಿದೆೆ. ಮಂತ್ರಿಮಂಡಲದ ಹಗರಣ ಬಯಲಿಗೆ ಬರುವ ಭೀತಿಯಿಂದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದರು ಎಂದು ಆರೋಪಿಸಿದರು.

    ಎಂಎಲ್ಸಿ ಹೇಮಲತಾ ನಾಯಕ ಮಾತನಾಡಿದರು. ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶರಣಮ್ಮ ತಾಮರಡ್ಡಿ, ಕಾರ್ಯದರ್ಶಿ ಶೋಭಾ ನಗರಿ, ಜಿಲ್ಲಾ ಪ್ರಭಾರ ಭಾಗೀರಥಿ ಪಾಟೀಲ್, ಜಿಲ್ಲಾಧ್ಯಕ್ಷೆ ವಾಣಿಶ್ರೀ ಮಠದ, ನಗರ ಅಧ್ಯಕ್ಷೆ ಗೀತಾ ಮುತ್ತಿಗಿ ಇತರರಿದ್ದರು.

    ಕೆಕೆಎನ್‌ಆರ್19ಫೋಟೋ01
    ಕೊಪ್ಪಳದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕ ಏರ್ಪಡಿಸಿದ್ದ ಮಹಿಳಾ ಸಮಾವೇಶವನ್ನು ಸಚಿವ ಹಾಲಪ್ಪ ಆಚಾರ್ ಭಾನುವಾರ ಉದ್ಘಾಟಿಸಿದರು. ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶರಣಮ್ಮ ತಾಮರಡ್ಡಿ, ಕಾರ್ಯದರ್ಶಿ ಶೋಭಾ ನಗರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts