More

    ವರುಣಾರ್ಭಟಕ್ಕೆ ರೈತ ಸಮುದಾಯ ತತ್ತರ: ಕೊಳೆಯುತ್ತಿರುವ ಮೆಣಸಿನಕಾಯಿ, ಉಳ್ಳಾಗಡ್ಡಿ

    ಕೊಪ್ಪಳ/ಕುಕನೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ರೈತ ಸಮುದಾಯ ತತ್ತರಿಸಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಮೆಣಸಿನಕಾಯಿ, ಉಳ್ಳಾಗಡ್ಡಿ ಸೇರಿದಂತೆ ಇತರ ಬೆಳೆಗಳು ಕೈಗೆ ಬಂದರೂ ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲಾದ್ಯಂತ ಕಳೆದ ಅ.1 ರಿಂದ 14 ವರೆಗೆ ವಾಡಿಕೆ (71.1ಮಿಮೀ) ಗಿಂತ ಹೆಚ್ಚು ಅಂದರೆ 103 ಮಿಲಿ ಮೀಟರ್ ಮಳೆಯಾಗಿದೆ. ಆ ಪೈಕಿ ಗಂಗಾವತಿ 83.5, ಕೊಪ್ಪಳ 124.8, ಕುಷ್ಟಗಿ 98.1, ಯಲಬುರ್ಗಾ 95.4, ಕಾರಟಗಿ 87.4, ಕುಕನೂರು 130.9 ಹಾಗೂ ಕನಕಗಿರಿ ತಾಲೂಕಿನಲ್ಲಿ 66.6 ಮಿಮೀ ಮಳೆ ಸುರಿದಿದೆ. ಜಿಲ್ಲೆಯಲ್ಲೇ ಕುಕನೂರು ತಾಲೂಕಿನಲ್ಲಿ (ವಾಡಿಕೆ 83.0ಮಿಮೀ )ಅತಿ ಹೆಚ್ಚು (130.9 ಮಿಮೀ) ಮಳೆಯಾಗಿದೆ. ಆದರೆ, ಕನಕಗಿರಿಯಲ್ಲಿ ವಾಡಿಕೆಯ 68.ಮಿಮೀಗಿಂತ ಕಡಿಮೆ ಅಂದರೆ 66.6 ಮಿಮೀ ಮಳೆ ಬಿದ್ದಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಯರಿ ಜಮೀನುಗಳಲ್ಲಿ ಬೆಳೆದ ಉಳ್ಳಾಗಡ್ಡಿ, ಮೆಣಸಿನಕಾಯಿ ಸಂಪೂರ್ಣ ಹಾಳಾಗಿದೆ. ಜಮೀನುಗಳು ಜಲಾವೃತ ಆಗಿದ್ದರಿಂದ ಗಿಡದಲ್ಲೇ ಕೊಳೆಯುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಮೆಕ್ಕೆಜೋಳ ಕೂಡ ಮೊಳಕೆ ಒಡೆಯುವ ಹಂತಕ್ಕೆ ತಲುಪಿದೆ. ವರುಣನ ಆರ್ಭಟ ಮುಂದುವರಿದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ.

    ಈ ಭಾಗದಲ್ಲಿ ಬರ ಎನ್ನುವುದು ಸಾಮಾನ್ಯವಾಗಿದೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲಾದ್ಯಂತ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಎಲ್ಲಿ ನೋಡಿದರೂ ಹಳ್ಳ-ಕೊಳ್ಳ, ಬಾವಿಗಳು ಭರ್ತಿಯಾಗಿದ್ದು, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಎಷ್ಟೋ ವರ್ಷಗಳಿಂದ ತುಂಬದ ಕೆರೆಗಳು ಮೈದುಂಬಿಕೊಂಡು ನಿಂತಿವೆ. ಆದರೆ, ನಿರಂತರ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.

    ಹನುಮನಹಳ್ಳಿಯಲ್ಲಿ ಖಾಸಗಿ ವ್ಯಕ್ತಿ ನಿರ್ಮಿಸಿದ್ದ ಚೆಕ್ ಡ್ಯಾಂ ಒಡೆದು ಅಪಾರ ಬೆಳೆ ನಷ್ಟ
    ಕೊಪ್ಪಳ: ಹನುಮನಹಳ್ಳಿಯ ಮೇಲ್ಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದ ಚೆಕ್ ಡ್ಯಾಂ ಭರ್ತಿಯಾಗಿ ಒಡೆದ ಪರಿಣಾಮ ಗುರುವಾರ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಅಲ್ಲದೆ ಟಣಕನಕಲ್ ಗ್ರಾಮದ ಬಳಿಯಿಂದ ಬರುವ ಹಳ್ಳವೂ ತುಂಬಿ ಹರಿಯುತ್ತಿದೆ. ಇದರಿಂದ ಹನುಮನಹಳ್ಳಿಯಲ್ಲಿ ಮೆಕ್ಕೆಜೋಳ, ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಸಂಪೂರ್ಣವಾಗಿ ಹಾಳಾಗಿದೆ. ಕೃಷಿ ಭೂಮಿಯೂ ಕೊಚ್ಚಿಕೊಂಡು ಹೋಗಿದೆ. ಎಕರೆಗೆ 25 ಸಾವಿರ ರೂ. ಖರ್ಚು ಮಾಡಿದ್ದು, ಬೆಳೆ ಸಂಪೂರ್ಣ ನೀರು ಪಾಲಾಗಿದೆ. ಜಿಲ್ಲಾಡಳಿತ ತಕ್ಷಣ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಪಂ ಸದಸ್ಯ ಶಿವಕುಮಾರ, ರೈತರಾದ ಸಣ್ಣ ದೇವಪ್ಪ, ಶಿವಕುಮಾರ ಮುರಡಿ ಇತರರು ಒತ್ತಾಯಿಸಿದ್ದಾರೆ.

    ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿತ್ತು. ಆದರೆ, ಉತ್ತರಿ ಮಳೆ 14 ದಿನ ಬರಲಿಲ್ಲ. ಹಸ್ತ, ಚಿತ್ತಿ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಇದರಿಂದ ಉಳ್ಳಾಗಡ್ಡಿ, ಮೆಣಸಿನಕಾಯಿ ಸಂಪೂರ್ಣ ಹಾಳಾಗಿವೆ. ಎಷ್ಟೋ ವರ್ಷಗಳ ನಂತರ ವರ್ಷಧಾರೆ ಆಗುತ್ತಿದೆ.
    | ವಿರೂಪಾಕ್ಷಪ್ಪ ಅಂಗಡಿ, ರೈತ, ಭಾನಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts