More

    ಕೊಪ್ಪಳದಲ್ಲಿ ಕೈಗಾರಿಕಾ ಸಮ್ಮೇಳನ ಆಯೋಜನೆ

    ಕೊಪ್ಪಳ: ಜಿಲ್ಲೆಯ ಆರೋಗ್ಯ ವೃದ್ಧಿಗೆ ಬೇಕಿದ್ದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಕೈಗಾರಿಕೆಗಳಿಗೆ ಪೂರಕ ವಾತಾವರಣವಿದ್ದು, ಮುಂದೆ ಕೊಪ್ಪಳದಲ್ಲೇ ಕೈಗಾರಿಕಾ ಸಮ್ಮೇಳನ ಹಮ್ಮಿಕೊಳ್ಳಲಾಗುವುದೆಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಮೂಡಿಸಿದರು.

    ಜನೋತ್ಸವ ಕಾರ್ಯಕ್ರಮ ರದ್ದತಿಯಿಂದ ಜನತೆಗೆ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಒಪ್ಪಿಸಲು ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮದ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು.

    ರಾಜ್ಯದ ಅಭಿವೃದ್ಧಿಯಲ್ಲಿ ತಾಯಿ-ಮಕ್ಕಳ ಆರೋಗ್ಯ ಬಹುಮುಖ್ಯ. ಕಲ್ಯಾಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಶಿಶು ಮರಣ ಅಧಿಕವಾಗಿದೆ. ಅದನ್ನು ತಪ್ಪಿಸಲು ಕೊಪ್ಪಳದಲ್ಲಿ 100 ಹಾಸಿಗೆ ತಾಯಿ-ಮಕ್ಕಳ ಆಸ್ಪತ್ರೆ ಲೋಕಾರ್ಪಣೆ ಮಾಡಿದ್ದೇವೆ. ಜಿಲ್ಲೆಯ ಆರೋಗ್ಯ ಕ್ಷೇತ್ರ ಸುಧಾರಣೆಗೆ ಬೇಕಾದ ಸೌಲಭ್ಯ ಕಲ್ಪಿಸಲಾಗುವುದು. ಮುಂದೆ 120 ಕೋಟಿ ರೂ. ಅನುದಾನ ನೀಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬದ್ಧನಿದ್ದೇನೆ. ಕೈಗಾರಿಕೆ ಅಭಿವೃದ್ಧಿಗೆ ಜಿಲ್ಲೆ ಪೂರಕವಾಗಿದೆ. ಮುಂದೆ ಕೊಪ್ಪದಲ್ಲೇ ಕೈಗಾರಿಕಾ ಸಮ್ಮೇಳನ ನಡೆಸುತ್ತೇವೆ. ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಭಾಗಗಳು ಒಣ ಬೇಸಾಯ ಆಧರಿಸಿದ್ದು ನೀರಾವರಿ ಕಲ್ಪಿಸಲಾಗುವುದು. ಕೊಪ್ಪಳದೊಂದಿಗೆ ನನಗೆ ವಿಶೇಷ ನಂಟಿದೆ. ಮಳೆ ಬಂದರೆ ಕೇಡಲ್ಲ. ಮನೆ ಮಗ ಉಂಡರೆ ಕೇಡಲ್ಲ. ನಾನು ನಿಮ್ಮ ಮನೆ ಮಗನಾಗಿ ಬಂದಿರುವೆ. ಮುಖ್ಯಮಂತ್ರಿಯಾಗಿ ಅಲ್ಲ. ನಿಮ್ಮ ಆಶಿರ್ವಾದ ಬೇಕು. ನೀವು ನೀಡುವ ಅಭಯ ಸ್ವಾರ್ಥಕ್ಕೆ ಬಳಸಲ್ಲವೆಂದು ಅಭಿವೃದ್ಧಿ ಮಂತ್ರ ಪಠಿಸುತ್ತಲೇ ಭಾವನಾತ್ಮಕವಾಗಿ ಪ್ರಚಾರದ ದಾಳ ಉರುಳಿಸಿದರು.

    ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೊಪ್ಪಳ, ಸಿಂಗಟಾಲೂರು ಏತ ನೀರಾವರಿಗೆ ಚಾಲನೆ ದೊರೆತಿದೆ. ಹಿಂದಿನ ಸರ್ಕಾರ ಅನುದಾನ ನೀಡದ ಕಾರಣ ಅನುಷ್ಠಾನವಾಗಿಲ್ಲ. ಅವುಗಳನ್ನು ಆದಷ್ಟು ಬೇಗ ಮುಗಿಸಲಾಗುವುದು. ತಳಕಲ್ ಇಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಕೊಪ್ಪಳ ವಿಮಾನ ನಿಲ್ದಾಣಕ್ಕೆ ಡಿಪಿಆರ್ ರಚಿಸಲು ಸೂಚಿಸಿದ್ದು, 40 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಆರ್ಥಿಕತೆ ಅಂದರೆ ದುಡ್ಡಲ್ಲ. ಜನರ ದುಡಿಮೆ. ದುಡಿಮೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಮಹಿಳಾ ಸಬಲೀಕರಣಕ್ಕಾಗಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ಒಂದು ಲಕ್ಷ ರೂ. ಇಡಿಗಂಟು ನೀಡಿದ್ದೇವೆ. ಗ್ರಾಪಂಗೊಂದು ಸ್ವಾಮಿ ವಿವೇಕಾನಂದ ಸಂಘ ರಚಿಸಿ ಅವುಗಳ ಮೂಲಕ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಲಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಅಭಿವೃದ್ಧಿ ಮಂತ್ರ ಜಪಿಸಿದರು.

    ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕಳೆದೊಂದು ಶತಮಾನದಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ರೋಗವನ್ನು ಯಾವೊಂದು ಸರ್ಕಾರ ಎದುರಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸಿದೆ. ಅಮೃತ ಮಹೋತ್ಸವ ಅಂಗವಾಗಿ 750 ಪ್ರಾಥಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಕಕ ಭಾಗದ ಜಿಲ್ಲೆಗಳಿಗೆ ಆದ್ಯತೆ ನೀಡಿದ್ದೇವೆ. 25 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಐದು ಹೊಸ ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ಕೊಪ್ಪಳಕ್ಕೆ ಮತ್ತಷ್ಟು ಯೋಜನೆ ಘೋಷಿಸಲಾಗುವುದು ಎಂದರು.

    ಸಚಿವರಾದ ಬೈರತಿ ಬಸವರಾಜ, ಸಿ.ಸಿ.ಪಾಟೀಲ್, ಶಾಸಕರಾದ ಅಮರೇಗೌಡ ಬಯ್ಯಪುರ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ವಿಪ ಸದಸ್ಯರಾದ ಶಶೀಲ್ ನಮೋಶಿ, ಶರಣೇಗೌಡ ಬಯ್ಯಪುರ, ಹೇಮಲತಾ ನಾಯಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿಪಂ ಸಿಇಒ ಫೌಜಿಯಾ ತರನ್ನುಮ್ ಇತರರಿದ್ದರು.

    ಗವಿಮಠಕ್ಕೆ ಭೇಟಿ
    ಕಾರ್ಯಕ್ರಮ ಬಳಿಕ ಗವಿಮಠಕ್ಕೆ ಭೇಟಿ ನೀಡಿದ ಸಿಎಂ, ಪ್ರಸಾದ ನಿಲಯಕ್ಕೆ ಘೋಷಿಸಿದ್ದ 10 ಕೋಟಿ ರೂ. ಅನುದಾನ ಬಿಡುಗಡೆ ಆದೇಶ ಪತ್ರವನ್ನು ಗವಿಶ್ರೀಗಳಿಗೆ ಹಸ್ತಾಂತರಿಸಿ ಆಶೀರ್ವಾದ ಪಡೆದರು. ನಂತರ ಮಾತನಾಡಿ, ಪೂಜ್ಯರು ಬಹುವರ್ಷದಿಂದ ವಿದ್ಯೆ, ಅನ್ನ ದಾಸೋಹ ಮಾಡುತ್ತಿದ್ದಾರೆ. ಈ ಭಾಗದ ಬಡ ಮಕ್ಕಳಿಗೆ ನಂದಾ ದೀಪವಾಗಿದ್ದಾರೆ. ಅಂಥವರಿರುವುದು ನಾಡಿನ ಸೌಭಾಗ್ಯ. ಮಠದಲ್ಲಿ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆಲ್ಲ ವಸತಿ ಕಲ್ಪಿಸಬೇಕೆಂಬುದು ಶ್ರೀಗಳ ಸಂಕಲ್ಪ. ಭಕ್ತರಿಂದ ದೇಣಿಗೆ ಪಡೆದು ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಶಾಸಕರು, ಸಂಸದರು, ಸಚಿವರ ಒತ್ತಾಸೆ ಮೇರೆಗೆ ಮಠಕ್ಕೆ 10 ಕೋಟಿ ರೂ. ಅನುದಾನ ನೀಡಿದ್ದೇವೆ. ಸರ್ಕಾರ ಮಾಡುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರ ಆಸೆ ಈಡೇರಲಿ. ಭಕ್ತರು ಇದಕ್ಕೆ ಸಹಕಾರ ನೀಡಲಿ. ನಮ್ಮ ಮೇಲೆ ಶ್ರೀಗಳ ಆಶೀರ್ವಾದ ಇರಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts