More

    ಬ್ರಿಟಿಷ್ ಸೇನೆ ಸೇರಿದ ಹಳ್ಳಿ ಹೈದ

    ವಿ.ಕೆ.ರವಿಂದ್ರ ಕೊಪ್ಪಳ

    ಬಡತನದಲ್ಲಿ ಹುಟ್ಟಿ ಬೆಳೆದು ಅಚಾನಕ್ ಆಗಿ ಇಂಗ್ಲೆಂಡ್‌ಗೆ ತೆರಳಿದ ಜಿಲ್ಲೆಯ ಯುವಕನೊಬ್ಬ ಬ್ರಿಟಿಷ್ ಸೈನ್ಯ ಸೇರಿದ್ದಾನೆ.

    ಕೊಪ್ಪಳ ತಾಲೂಕು ಶಹಾಪುರ ಗ್ರಾಮದ ಗೋಪಾಲ ವಾಕೋಡೆ ಈ ಸಾಧನೆ ಮಾಡಿದವರು. ಪಾತ್ರೆಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಇವರ ಕುಟುಂಬದವರು ಉದ್ಯೋಗ ಅರಸಿ ಗೋವಾಗೆ ಹೋಗುವುದು ಸಾಮಾನ್ಯವಾಗಿತ್ತು. 1995ರಲ್ಲಿ ತಂದೆ ತೀರಿಕೊಂಡ ಬಳಿಕ 10 ವರ್ಷದವನಾಗಿದ್ದ ಅಣ್ಣನೊಡನೆ ಗೋಪಾಲ ಸಹ ಉದ್ಯೋಗ ಅರಸಿ ಗೋವಾಕ್ಕೆ ಹೋಗಿದ್ದರು. ಗೋವಾದ ಬೆತೆಲ್ ಬಾತಿ ಬೀಚ್‌ನಲ್ಲಿ ಕಡಲೆ ಮಾರಾಟ ಮಾಡುತ್ತಿರುವಾಗ ಪ್ರವಾಸಕ್ಕೆಂದು ಬಂದಿದ್ದ ಇಂಗ್ಲೆಂಡ್‌ನ ಬ್ರಿಟ್ಸ್ ಕೊರೊಲ್ ಥಾಮಸ್, ಕೊಲಿನ್ ಹ್ಯಾನ್ಸನ್ ಹಾಗೂ ಲಿಂಡಾ ಹ್ಯಾನ್ಸನ್ ಎಂಬುವರ ಕಣ್ಣಿಗೆ ಬಿದ್ದಿದ್ದರು. ಇವರ ಕಷ್ಟ ಅರಿತ ಅವರು ಹಣಕಾಸಿನ ನೆರವು ನೀಡಿದ್ದರು. ನಂತರ ಪ್ರತಿ ವರ್ಷ ಇವರನ್ನು ಭೇಟಿಯಾಗುತ್ತಾ ನೆರವಾಗಿದ್ದರು. 19 ವರ್ಷ ತುಂಬುತ್ತಲೇ ತಮ್ಮೊಡನೆ ಇಂಗ್ಲೆಂಡ್‌ಗೆ ಕರೆದೊಯ್ದರು. ಕ್ರಿಕೆಟ್‌ನಲ್ಲಿ ಆಸಕ್ತಿ ಇದ್ದ ಕಾರಣ ಗೋಪಾಲ್‌ಗೆ ತರಬೇತಿ ಕೊಡಿಸಿದರು. ಇದರಲ್ಲಿ ಹಲವು ಪ್ರಶಸ್ತಿ ಪಡೆದ ಗೋಪಾಲ, ಬಳಿಕ ಬ್ರಿಟನ್ ಪೌರತ್ವ, ಶಿಕ್ಷಣ ಪಡೆದು, ಕಳೆದ 10 ವರ್ಷದಿಂದ ಅಲ್ಲಿಯ ಸೇನೆಯಲ್ಲೂ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ.

    ಶಹಾಪುರ ಗ್ರಾಮಕ್ಕೆ ಭೇಟಿ
    ಶಹಾಪುರ ಗ್ರಾಮದ ಯಲ್ಲಪ್ಪ ವಾಕೋಡೆ ಮತ್ತು ಫಕೀರವ್ವರ ದಂಪತಿಗೆ ಐವರು ಮಕ್ಕಳು. ಗೋಪಾಲ್‌ಗೆ ಮೂವರು ಸಹೋದರಿಯರಿದ್ದು, ಮದುವೆಯಾಗಿ ಬೇರೆಡೆ ನೆಲೆಸಿದ್ದಾರೆ. ಅಣ್ಣ ವಿಜಯ ವಾಕೋಡೆ ತೀರಿಕೊಂಡಿದ್ದು, ಇವರ ಪತ್ನಿ, ಮಕ್ಕಳು ಶಹಾಪುರ ಗ್ರಾಮದಲ್ಲೇ ನೆಲೆಸಿದೆ. ಇಂಗ್ಲೆಂಡ್‌ನಲ್ಲೇ ಜಾಸ್ಮೀನ್ ಎಂಬ ಯುವತಿಯನ್ನು ಗೋಪಾಲ ಮದುವೆಯಾಗಿದ್ದು, ಡೈಸಿ ಎಂಬ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಎರಡ್ಮೂರು ವರ್ಷಕ್ಕೊಮ್ಮೆ ಗ್ರಾಮಕ್ಕೆ ಆಗಮಿಸಿ ಸಂಬಂಧಿಗಳೊಂದಿಗೆ ಸಮಯ ಕಳೆಯುತ್ತಾರೆ. ಕೊನೆಯ ಬಾರಿ 2018ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದು, ಮುಂದಿನ ವರ್ಷ ಮರಳಿ ಬರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

    ತುಂಬ ಕಷ್ಟದಲ್ಲಿದ್ದ ಗೋಪಾಲನ ಕುಟುಂಬ ಉದ್ಯೋಗ ಅರಸಿ ಗೋವಾಕ್ಕೆ ತೆರಳಿತ್ತು. ಅಲ್ಲಿ ಗೋಪಾಲನ ಕಷ್ಟ ಕಂಡ ವಿದೇಶಿ ದಂಪತಿ, ತಮ್ಮೊಡನೆ ಕರೆದೊಯ್ದು, ಭವಿಷ್ಯ ರೂಪಿಸಿದ್ದಾರೆ. ಸದ್ಯ ಅಲ್ಲಿನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶದಲ್ಲಿ ನೆಲೆಸಿದರೂ, ತನ್ನ ಹುಟ್ಟೂರು, ದೇಶದ ಬಗ್ಗೆ ಗೋಪಾಲಗೆ ಅಭಿಮಾನವಿದೆ. ಆಗಾಗ ಗ್ರಾಮಕ್ಕೆ ಬಂದು ಹೋಗುತ್ತಾರೆ. ಸ್ನೇಹಿತರೊಡನೆ ಕರೆ ಮಾಡಿ ಮಾತನಾಡುತ್ತಾನೆ.
    | ವೀರಣ್ಣ ಜೋಷಿ ಗೋಪಾಲ ಸಂಬಂಧಿ. ಶಹಾಪುರ.

    ಬಡತನ ಕಾರಣ ಕೆಲಸ ಅರಸಿ ಗೋವಾಕ್ಕೆ ತೆರಳಿದ್ದೆ. ಪ್ರವಾಸಕ್ಕೆ ಆಗಮಿಸಿದ್ದ ಲಿಂಡಾ ಹ್ಯಾನ್ಸನ್ ನನ್ನನ್ನು ತಮ್ಮೊಡನೆ ಕರೆತಂದು ನನಗೆ ಉತ್ತಮ ಭವಿಷ್ಯ ನೀಡಿದ್ದಾರೆ. ಅವರ ಋಣ ತೀರಿಸಲೆಂದು ಇಲ್ಲಿನ ಸೇನೆ ಸೇರಿರುವೆ. ಕಾಮನ್‌ವೆಲ್ತ್ ದೇಶಗಳ ಪೈಕಿ ಯಾವ ದೇಶದವರು ಬೇಕಾದರೂ ಯುಕೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿರುವ ಕಾರಣ ಸೇನೆ ಸೇರಿರುವೆ.
    | ಗೋಪಾಲ ವಾಕೋಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts