More

    ಅಭಿವೃದ್ಧಿ ಕಾಣದ ಕೂಡ್ಲಿಗಿ ತಾಲೂಕು ಮಟ್ಟದ ಸ್ಟೇಡಿಯಂ

    ವೀರೇಶ ಅಂಗಡಿ ಕೂಡ್ಲಿಗಿ
    ಪಟ್ಟಣದ ಹೃದಯ ಭಾಗದ ಎಂಟು ಎಕರೆ ಪ್ರದೇಶದಲ್ಲಿ ಸ್ಟೇಡಿಯಂ ಇದ್ದು, ತಾಲೂಕಿನ ಕ್ರೀಡಾಪಟುಗಳಿಗೆ ಈ ಮೈದಾನ ಜೀವಾಳವಾಗಿದೆ.

    ಪಟ್ಟಣದ ಅನೇಕ ರೈತರು ಮುಂದಿನ ಪೀಳಿಗೆಗೆ ಆಟದ ಮೈದಾನ ಇರಲಿ ಎನ್ನುವ ಉದ್ದೇಶದಿಂದ ಭೂದಾನ ಮಾಡಿದ್ದು ವಿಶೇಷ. 78 ವಷರ್ಗಳಿಂದಲೂ ಈ ಸ್ಟೇಡಿಯಂ ಅಭಿವೃದ್ಧಿ ಕಾಣದೇ ಅರೆಬರೆಯಾಗಿ ಉಳಿದಿದೆ. ತಾಲೂಕು ಮಟ್ಟದ ಕ್ರೀಡೆಗಳು ಹಾಗೂ ಯಾವುದೇ ಬೃಹತ್ ಸಭೆ, ಸಮಾರಂಭಗಳು ಇಲ್ಲಿಯೇ ನಡೆಯುತ್ತವೆ. ಆದರೆ, ಮೈದಾನದ ಅಭಿವೃದ್ಧಿಗೆ ಯತ್ನ ನಡೆದಿಲ್ಲ.

    ಅಭಿವೃದ್ಧಿ ಕಾಣದ ಕೂಡ್ಲಿಗಿ ತಾಲೂಕು ಮಟ್ಟದ ಸ್ಟೇಡಿಯಂ
    ಕೂಡ್ಲಿಗಿಯ ಮಹಾದೇವ ಮೈಲಾರ ಸ್ಟೇಡಿಯಂನಲ್ಲಿ ಅವೈಜ್ಞಾನಿಕವಾಗಿ ರನ್ನಿಂಗ್ ಟ್ರ್ಯಾಕ್ ಹಾಕಿರುವುದು.

    2021ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಇತ್ತೀಚೆಗೆ 3 ಕೋಟಿ ರೂ. ಮಂಜೂರು ಮಾಡಿ ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಿದ್ದಾರೆ. ಪ್ರೇಕ್ಷಕರು ಕೂಡಲು ಆಸನ ವ್ಯವಸ್ಥೆ ಹಾಗೂ ಮೇಲೆ ನೆರಳಿಗೆ ಶೀಟ್ ವ್ಯವಸ್ಥೆ, ಜತೆಗೆ ಬಾಸ್ಕೆಟ್‌ಬಾಲ್ ಕೋರ್ಟ್ ಮಾಡಿದ್ದು, ಅದು ಕೂಡ ಅಪೂರ್ಣಗೊಂಡಿದೆ.

    ಇದನ್ನೂ ಓದಿ: ನಿರ್ಮಾಣ ಹಂತದಲ್ಲಿ ಕೊಟ್ಟೂರು ಕ್ರೀಡಾಂಗಣ

    ಕೂಡ್ಲಿಗಿ ತಾಲೂಕಿನಾದ್ಯಂತ ಈ ಹಿಂದಿನಿಂದಲೂ ಕಬ್ಬಡಿ, ಖೋಖೋ ಸೇರಿ ಅನೇಕ ಕ್ರೀಡೆಗಳಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಆದರೆ, ಆ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ. ಯುವ ಪೀಳಿಗೆ ಮೈದಾನಕ್ಕೆ ಬರಲು ಯಾವುದೇ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಒದಗಿಸಲು ಮುಂದಾಗುತ್ತಿಲ್ಲ.

    8 ಎಕರೆ ಆಟದ ಮೈದಾನ ಇದ್ದರೂ ಇಲ್ಲಿಯವರೆಗೂ ಯುವಜನ ಸೇವೆ ಕ್ರೀಡಾ ಇಲಾಖೆಯಿಂದ ಬಿಡಿಗಾಸು ಹಣ ನೀಡಿಲ್ಲ. ಕ್ರೀಡೆಗೂ ಸೌಲಭ್ಯ ನೀಡಿಲ್ಲ. ಇನ್ನ್ಯಾವ ಪುರುಷಾರ್ಥಕ್ಕೆ ಬೇಕು ಈ ಇಲಾಖೆ ಎನ್ನುತ್ತಾರೆ ಇಲ್ಲಿನ ಕ್ರೀಡಾಸಕ್ತರು.

    ಅಭಿವೃದ್ಧಿ ಕಾಣದ ಕೂಡ್ಲಿಗಿ ತಾಲೂಕು ಮಟ್ಟದ ಸ್ಟೇಡಿಯಂ
    ಕೂಡ್ಲಿಗಿಯ ಮಹಾದೇವ ಮೈಲಾರ ಸ್ಟೇಡಿಯಂ ಮಧ್ಯ ಭಾಗದಲ್ಲೇ ಕಟ್ಟಡ ಕಾಮಾಗಾರಿಯ ಕಲ್ಲು, ಮಣ್ಣನ್ನು ತಗೆಯದೆ ಬಿಟ್ಟಿರುವುದು

    ಸ್ಟೇಡಿಯಂನಲ್ಲಿಲ್ಲ ಕೊಠಡಿಗಳು

    ಕೂಡ್ಲಿಗಿ ಸ್ಟೇಡಿಯಂನಲ್ಲಿ ಕ್ರೀಡಾಳುಗಳು ಬಟ್ಟೆ ಬದಲಾಯಿಸಲು ಕೊಠಡಿಗಳಿಲ್ಲ. ಮಹಿಳಾ ಕ್ರೀಡಾಳುಗಳಿಗೆ ಪ್ರತ್ಯೇಕ ಕೊಠಡಿ ಇಲ್ಲ. ಶೌಚಗೃಹ ವ್ಯವಸ್ಥೆ ಇಲ್ಲಿಲ್ಲ. ಕೊನೆ ಪಕ್ಷ ದಾಹವಾದವರು ಕುಡಿಯಲು ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಖೋಖೋ, ಉದ್ದ ಜಿಗಿತ, ಎತ್ತರ ಜಿಗಿತ, ವಾಲಿಬಾಲ್ ಕೋರ್ಟ್‌ಗಳು ಇಲ್ಲ.

    ಟೇಬಲ್ ಟೆನ್ನಿಸ್, ಷಟಲ್, ಈಜುಕೊಳ ಇಲ್ಲಿಲ್ಲ. ಈ ಹಿಂದೆ ಇಲ್ಲಿನ ಹೈಸ್ಕೂಲ್ ಆವರಣದಲ್ಲಿ ದೈಹಿಕ ಶಿಕ್ಷಕ ಬಿಂದು ಮಾಧವ ಅವರ ಆಸಕ್ತಿಯಿಂದ ವ್ಯಾಯಾಮ ಶಾಲೆ ನಿರ್ಮಾಣ ಮಾಡಲಾಗಿತ್ತು. ದೈಹಿಕ ಕಸರತ್ತು ಮಾಡಲು ಪರಿಕರಗಳು ಇದ್ದವು.

    ಇದರ ಸೌಲಭ್ಯಗಳನ್ನು ಅಂದಿನ ಯುವಕರು ಪಡೆದು ಉತ್ತಮ ದೇಹದಾರ್ಢ್ಯ ಹೊಂದಿದ್ದರು. ಆದರೆ, ವಷರ್ಗಳು ಉಳಿದಂತೆ ಹಳೆಯದಾದ ಪರಿಕರಗಳು ಹಾಳಾದವು. ಮಲ್ಲಕಂಬ ಮೂಲೆ ಸೇರಿತು. ಇತ್ತೀಚೆಗೆ ಅತ್ಯಾಧುನಿಕ ಜಿಮ್ ಪರಿಕರಗಳ ಅವಶ್ಯವಿದೆ.

    ಅಂತಹ ವಸ್ತುಗಳು ಇಲ್ಲಿನ ಯುವಕರು, ಕ್ರೀಡಾಸಕ್ತರಿಗೆ ಬೇಕಿದೆ. ಈ ಹಿಂದೆ ಕೂಡ್ಲಿಗಿ ಕುಸ್ತಿ ಆಟಕ್ಕೆ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿತ್ತು. ಗರಡಿ ಮನೆಗಳು ಇಲ್ಲಿದ್ದವು. ಈಗಲೂ ಇಲ್ಲಿನ ಕೆಲ ಯುವಕರು ಕುಸ್ತಿಯಲ್ಲಿ ಮಿಂಚುತ್ತಿದ್ದಾರೆ.

    ಆದರೆ, ಅವರಿಗೆ ಸೂಕ್ತ ತರಬೇತಿದಾರರು ಹಾಗೂ ಜಿಮ್ ಇಲ್ಲದೆ ಪ್ರತಿಭೆಗಳು ಮಂಕಾಗುತ್ತಿವೆ ಎನ್ನುತ್ತಾರೆ ಮಾಜಿ ಕುಸ್ತಿ ಪಟು ಸೋಮಯ್ಯನವರ ನಾಗರಾಜ. ಜಿಲ್ಲಾ ಖನಿಜ ನಿಧಿಯಿಂದ ಎಳು ಲಕ್ಷ ರೂ.ಅನುದಾನ ಜಿಮ್‌ಗಾಗಿ ಬಿಡುಗಡೆಯಾಗಿದೆ.

    ಈ ಕಾಮಗಾರಿ ಕೆಆರ್ ಐಡಿಎಲ್‌ಗೆ ವಹಿಸಲಾಗಿದೆ. ಆದರೂ ಕಾಮಾಗಾರಿ ಆರಂಭಿಸಲು ಮೀನ-ಮೇಷ ಎಣಿಸುತ್ತಿದ್ದಾರೆ ಅಧಿಕಾರಿಗಳು ಎಂದು ಹೆಸರೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದರು.

    ಸ್ಟೇಡಿಯಂಗೆ ಬಂದ ಅನುದಾನ ವಾಪಸ್

    ವಿಜಯನಗರ ಡಿಸಿ ಅನಿರುದ್ಧ ಶ್ರವಣ್ 2 ಲಕ್ಷ ರೂ. ಅನುದಾನ ನೀಡಿ ರನ್ನಿಂಗ್ ಸ್ಟೇಡಿಯಂನಲ್ಲಿ ಟ್ರ್ಯಾಕ್ ಹಾಕಿಸಿದ್ದರು. ಅದು ಅವೈಜ್ಞಾನಿಕವಾಗಿದ್ದರಿಂದ ಬೇರೆ ಆಟಗಳನ್ನು ಆಡಲು ಅಡೆತಡೆ ಉಂಟಾಗುತ್ತಿದೆ.

    ಮಹಾದೇವ ಮೈಲಾರ ಕ್ರೀಡಾಂಗಣ ವಿಶಾಲವಾಗಿದ್ದರೂ ಈ ಹಿಂದೆ ಒಳಾಂಗಣ ಕ್ರೀಡಾಂಗಣ ಕಲ್ಪಿಸಲು 15 ಲಕ್ಷ ರೂ. ಮಂಜೂರಾಗಿತ್ತು. ಜಾಗ ಗುರುತಿಸಿದರೂ ಅದು ನನೆಗುದಿಗೆ ಬಿದ್ದು ಹಣ ವಾಪಸ್ ಹೋಯಿತು ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ವೆಂಕಟೇಶ್.

    ಸ್ಟೇಡಿಯಂ ಕಬಳಿಕೆಗೆ ನಡೆದಿದೆ ಹುನ್ನಾರ

    ಸ್ವಾತಂತ್ರ್ಯ ಹೋರಾಟಗಾರ ಮಹಾದೇವ ಮೈಲಾರ ಅವರ ಹೆಸರಿಟ್ಟಿರುವ ಸ್ಟೇಡಿಯಂಗೆ ಅನೇಕ ರೈತರ ಭೂದಾನ ನೀಡಿದ್ದರಿಂದ ಇಂದು ಉತ್ತಮ ಮೈದಾನವಿದೆ. ಈ ಪೈಕಿ 3.80 ಎಕರೆ ಶಾಲೆ ಹೆಸರಿನಲ್ಲಿ ದಾಖಲೆಗಳು ವರ್ಗಾವಣೆ ಆಗದ ಹಿನ್ನೆಲೆಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕೈ ಜೋಡಿಸಿ ಬೆಲೆ ಬಾಳುವ ಭೂಮಿಯನ್ನು ಹೇಗಾದರೂ ಮಾಡಿ ಪಡೆಯಬೇಕು ಎಂದು ಸಂಚು ರೂಪಿಸಿದ್ದಾರೆ.

    ಈ ವಿಷಯದಲ್ಲಿ ಇಡೀ ಊರೇ ಒಗ್ಗಟ್ಟು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಮೈದಾನ ಪಡೆಯುವಲ್ಲಿ ಸಫಲರಾಗಿಲ್ಲ. ಕ್ರೀಡಾಂಗಣ ಸುತ್ತ ಅಂದಿನ ಶಾಸಕ ನಾಗೇಂದ್ರ ಹಾಗೂ ಈಗಿನ ಶಾಸಕ ಎನ್.ವೈ.ಗೋಪಾಲಕೃಷ್ಣ ಕಾಂಪೌಂಡ್ ನಿರ್ಮಾಣ ಮಾಡಿ ಭದ್ರತೆ ಒದಗಿಸಿದ್ದಾರೆ.

    ಇಲ್ಲಿಯವರೆಗೂ ಕಾಲೇಜು ಸುಪರ್ದಿಯಲ್ಲಿದ್ದರೂ, ಕೆಲವರು ಮೈದಾನದ ಜಾಗ ಕಬಳಿಸಲು ಹವಣಿಸುತ್ತಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಈ ಬಗ್ಗೆ ಗಮನ ಹರಿಸಿ ಕ್ರೀಡಾಂಗಣ ಉಳಿಸಿ ಕೊಡಬೇಕಿದೆ. ಪಟ್ಟಣದ ವೃದ್ಧರು, ಯುವಕರಿಗೆ ಪ್ರತಿ ನಿತ್ಯ ವಾಯುವಿಹಾರ ಮಾಡಲು ಇದೊಂದೇ ದೊಡ್ಡ ಮೈದಾನವಿದೆ.

    ಇದನ್ನು ಸಕಲ ರೀತಿಯಲ್ಲಿ ಅಭಿವೃದ್ಧಿಪಡಿಸಿ ಕ್ರೀಡಾಸಕ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸ್ಥಳೀಯ ನಾಗರಿಕರ ಒತ್ತಾಯವಾಗಿದೆ.

    ಅಭಿವೃದ್ಧಿ ಕಾಣದ ಕೂಡ್ಲಿಗಿ ತಾಲೂಕು ಮಟ್ಟದ ಸ್ಟೇಡಿಯಂ
    ಕೂಡ್ಲಿಗಿಯ ಮಹಾದೇವ ಮೈಲಾರ ಸ್ಟೇಡಿಯಂನಲ್ಲಿ ಜಿಮ್ ವ್ಯವಸ್ಥೆ ಇರದ ಕಾರಣ ದೈಹಿಕ ಕಸರತ್ತು ಮಾಡಲು ಬಯಲಲ್ಲೇ ಡಬಲ್‌ಬಾರ್ ಅಳವಡಿಸಿರುವ ಕ್ರೀಡಾ ಪ್ರೇಮಿಗಳು.

    ಕೂಡ್ಲಿಗಿಯಲ್ಲಿ ಮಹಾದೇವ ಮೈಲಾರ ಕ್ರೀಡಾಂಗಣವಿದ್ದು, ಒಂದೇ ಮೈದಾನದಲ್ಲಿ ನಾನಾ ಕ್ರೀಡೆಗಳಿಗೆ ಅವಕಾಶ ಕಲ್ಪಿಸುವುದು ಕಷ್ಟವಾಗಲಿದೆ. ಈ ಕಾರಣಕ್ಕೆ ಐದು ಏಕರೆ ಭೂಮಿಯನ್ನು ಹುಡುಕಿ ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಗಳಿಗೆ ಅವಕಾಶ ಮಾಡಿದರೆ ಭವಿಷ್ಯದಲ್ಲಿ ಅನುಕೂಲವಾಗಲಿದೆ.
    ಬಿ.ಮಂಜುನಾಥ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಕೂಡ್ಲಿಗಿ

    ಕಾಲೇಜು ಮೈದಾನ ಹಲವು ಭೂದಾನಿಗಳ ಫಲವಾಗಿ ಇಂದು ತಾಲೂಕಿನ ಎಲ್ಲಾ ಕ್ರೀಡಾಪಟುಗಳಿಗೆ ಸಹಕಾರಿಯಾಗಿದೆ. ಕೆಲವು ದುಷ್ಟ್ಟ ಶಕ್ತಿಗಳು ಇಲ್ಲದ ನೆಪವೊಡ್ಡಿ ಕಬಳಿಸಲು ಯತ್ನಿಸುತ್ತಿದ್ದಾರೆ. ಇದನ್ನ ಪಟ್ಟಣದ ಪ್ರತಿ ನಾಗರಿಕರು ಖಂಡಿಸಿದ್ದಾರೆ. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇದನ್ನು ಕಾಲೇಜಿನ ಖಾತೆಗೆ ಮಾಡಿಸಿ ಕೊಟ್ಟು, ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ ಮಾಡಬೇಕು.
    ಎಂ.ವೆಂಕಟೇಶ್, ವಿಜಯನಗರ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts