More

    8 ಶ್ರೀಗಂಧ ಮರಗಳ ಕಡಿತ

    ಕೂಡಲಸಂಗಮ: ನಾಲ್ಕು ದಿನಗಳ ಹಿಂದೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಪೂಜಾವನದಲ್ಲಿಯ 8 ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ 7 ಗಿಡಗಳನ್ನು ಒಯ್ದು ಒಂದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವುದು ಭಾನುವಾರ ತಡವಾಗಿ ಬೆಳಕಿಗೆ ಬಂದಿದೆ.

    ಪೂಜಾವನ ಹಿಂಭಾಗದ ಸಿಬ್ಬಂದಿ ವಸತಿಗೃಹದ ಹಿಂಬದಿ ಹಾಗೂ ಹೂವುಗಳ ವನದ ಬಳಿಯ ಶ್ರೀಗಂಧದ ಮರಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಕಳವು ಮಾಡಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ 7 ಜನರ ತಂಡ ಶ್ರೀಗಂಧದ ಮರಗಳನ್ನು ಕತ್ತರಿಸಿದೆ. ಭದ್ರತೆಗೆ ಇದ್ದ ಮೂರು ಸಿಬ್ಬಂದಿ ಕಳ್ಳರನ್ನು ನೋಡಿ ಕೂಡಲಸಂಗಮ ಮಂಡಳಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಲು ದೂರವಾಣಿ ಕರೆ ಮಾಡಿದರೂ ಯಾರು ಸ್ವೀಕರಿಸಿಲ್ಲ. ಕಳ್ಳರು ಬಂದಿದ್ದಾರೆ ಬನ್ನಿ ಎಂದು ಭದ್ರತಾ ಸಿಬ್ಬಂದಿ ವಸತಿ ಗೃಹದ ಸಿಬ್ಬಂದಿಗೆ ಕೂಗಿದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಕಾವಲು ಸಿಬ್ಬಂದಿ ತಿಳಿಸಿದ್ದಾರೆ.

    ಹಿಂದಿನ ಆಯುಕ್ತರು ಕೂಡಲಸಂಗಮದಲ್ಲಿ ವಾಸ್ತವ್ಯ ಇದ್ದು, ರಾತ್ರಿ ಪರಿಶೀಲನೆಗೆ ಹೋಗುತ್ತಿದ್ದರಿಂದ ಎರಡು ವರ್ಷದಿಂದ ಶ್ರೀಗಂಧ ಮರಗಳ ಕಳವು ಆಗಿರಲಿಲ್ಲ. ಎರಡು ವರ್ಷಕ್ಕೂ ಪೂರ್ವದಲ್ಲಿ ನೂರಾರು ಶ್ರೀಗಂಧದ ಮರಗಳನ್ನು ಕಡಿಯಲಾಗಿದೆ. ಕಳೆದ ಮೂರು ತಿಂಗಳಿನಿಂದ ಆಯುಕ್ತರು ಕೂಡಲಸಂಗಮದಲ್ಲಿ ವಾರದಲ್ಲಿ ಕನಿಷ್ಠ ಒಂದು ದಿನವೂ ಇರದ ಪರಿಣಾಮ ಮಂಡಳಿಯ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮಂಡಳಿ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಶ್ರೀಗಂಧದ ಮರ ಮಾತ್ರವಲ್ಲದೆ, ಕಳಸದ ಮಾರ್ಗದಲ್ಲಿ ಬೆಳೆದ ಅಪಾರ ಗಿಡಗಳನ್ನು ಅನಾಮಧೇಯ ವ್ಯಕ್ತಿಗಳು ಕಳ್ಳತನ ಮಾಡುತ್ತಿದ್ದಾರೆ. ಈ ದುಷ್ಕೃತ್ಯ ತಡೆಯುವ ಕಾರ್ಯವನ್ನು ಮಂಡಳಿ ಮಾಡಬೇಕು. ಆಗದಿದ್ದರೆ ಮಂಡಳಿ ವ್ಯಾಪ್ತಿಯ 528 ಎಕರೆ ಪ್ರದೇಶದಲ್ಲಿ ಬೆಳೆದ ಮರಗಳ ಸಂರಕ್ಷಣೆ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವಹಿಸಬೇಕು ಎಂದು ಪರಿಸರ ಪ್ರೇಮಿ ಪ್ರಶಾಂತ ದೇಸಾಯಿ ಒತ್ತಾಯಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts