More

    ಕೋಲಾರ ಜಿಲ್ಲೆಯ ರೈತರಿಗೆ ರಸ್ತೆಯೇ ರಾಗಿ, ಹುರುಳಿ ಒಕ್ಕಣೆ ಕಣ

    ಬೂದಿಕೋಟೆ: ಸತತ ಬರಗಾಲದಿಂದ ತತ್ತರಿಸಿದ್ದ ಕೋಲಾರದಲ್ಲಿ ಈ ಬಾರಿ ರಾಗಿ ಮತ್ತು ಹುರುಳಿ ಉತ್ತಮ ಇಳುವರಿ ಬಂದಿದ್ದು, ಬಹುತೇಕ ಕಡೆ ಕಟಾವು ಕಾರ್ಯ ಮುಗಿದಿರುವುದುರಿಂದ ಇದೀಗ ಒಕ್ಕಣೆ ಕಾರ್ಯ ಬರದಿಂದ ಸಾಗುತ್ತಿದೆ.

    ಕೋಲಾರ ಜಿಲ್ಲೆಯ ಬಹುತೇಕ ಕಡೆ ಬೆಳೆ ಕಟಾವು ಮುಗಿದಿದ್ದರೂ ಒಕ್ಕಣೆ ಮಾಡಲು ಸರಿಯಾದ ಕಣ ಇಲ್ಲದೆ ಎಂದಿನಂತೆ ರಸ್ತೆಗಳಲ್ಲಿಯೇ ಒಕ್ಕಣೆ ಮಾಡಲಾಗುತ್ತಿದೆ. ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿಯ ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ರೈತರು ರಸ್ತೆಗಳಲ್ಲಿ ರಾಗಿ, ಹುರಳಿ ಸೇರಿ ಇತರ ಧಾನ್ಯಗಳ ಮೆದೆಗಳನ್ನು ತಂದು ಹಾಕಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಯಾಗುತ್ತಿದೆ.

    ಹಿಂದಿನ ಕಾಲದಲ್ಲಿ ಅಕ್ಕಪಕ್ಕದ ಜಮೀನಿನ ರೈತರು ಒಟ್ಟಾಗಿ ಸೇರಿ ಜಮೀನು ಮತ್ತು ಗದ್ದೆಗಳಲ್ಲಿ ಕಣ ಮಾಡಿ ರಾಗಿ, ಹುರಳಿ, ಭತ್ತ ಸೇರಿ ಇತ್ಯಾದಿ ಬೆಳೆಗಳನ್ನು ಒಕ್ಕಣೆ ಮಾಡುತ್ತಿದ್ದರು. ಆದರೆ ಇಂದಿನ ರೈತರಲ್ಲಿ ಒಗ್ಗಟ್ಟಿಲ್ಲದ ಕಾರಣ ಪ್ರತಿಯೊಬ್ಬರೂ ಪ್ರತ್ಯೆಕವಾಗಿ ಹೊಲಗಳಲ್ಲಿ ಒಕ್ಕಣೆ ಕಣ ಮಾಡಿಕೊಳ್ಳಲು ಸಾಧ್ಯವಾಗದೆ ರಸ್ತೆಯಲ್ಲೇ ಒಕ್ಕಣೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಈ ರೀತಿ ರಸ್ತೆಯಲ್ಲಿ ಒಕ್ಕಣೆ ಮಾಡಲು ಮುಂದಾಗಿರುವುದರಿಂದ ಸಂಚರಿಸುವ ವಾಹನಗಳಿಂದ ಸಂಜೆಯೊಳಗೆ ಧಾನ್ಯಗಳು ಬೇರ್ಪಡುತ್ತದೆ. ಹುಲ್ಲು ಪ್ರತ್ಯೇಕ ಮಾಡಿ ಧಾನ್ಯಗಳನ್ನು ಸ್ವಚ್ಛಗೊಳಿಸಿಕೊಂಡು ಅದೇ ದಿನ ಮನೆಗೆ ತೆಗೆದುಕೊಂಡು ಹೋಗುತ್ತಿರುವುದರಿಂದ ಹಣ ಮತ್ತು ಸಮಯ ಹೆಚ್ಚಾಗಿ ವ್ಯಯವಾಗುವುದಿಲ್ಲ ಅನ್ನೋದು ರೈತರ ಅಭಿಪ್ರಾಯ.

     

    ಉಪಯೋಗಕ್ಕೆ ಬಾರದ ಕಾಂಕ್ರೀಟ್ ಕಣ: ಬಂಗಾರಪೇಟೆ ತಾಲೂಕಿನಾದ್ಯಂತ ನರೇಗಾ ಯೋಜನೆಯನ್ವಯ ಸುಮಾರು 40 ಕಾಂಕ್ರೀಟ್ ಕಣ ನಿರ್ಮಿಸಲಾಗಿದೆ. ಕಣಗಳು ಬೆರಳೆಣಿಕೆಯಷ್ಟಿವೆ ಹಾಗೂ ರೈತರಿಗೆ ಅವಶ್ಯಕತೆ ಇರುವ ಸ್ಥಳಗಳಲ್ಲಿ ಇಲ್ಲದ ಕಾರಣದಿಂದ ಕಾಂಕ್ರೀಟ್ ಕಣಗಳು ಉಪಯೋಗಕ್ಕೆ ಬಾರದಂತಾಗಿವೆ.

    ರೈತರು ಒಕ್ಕಣೆ ಮಾಡಲು ರಸ್ತೆಗಳಿಗೆ ಹೋಗುವುದು ಅಪಘಾತಕ್ಕೆ ಎಡೆ ಮಾಡಿಕೊಡುವಂತಾಗಿದೆ. ಕೃಷಿ ಇಲಾಖೆಯಿಂದ ಟಾರ್ಪಲಿನ್ ವಿತರಣೆ ಮಾಡಲಾಗಿದ್ದು, ಒಕ್ಕಣೆಗಾಗಿ ಅದನ್ನು ಬಳಸಿ ಅಥವಾ ಸಮುದಾಯ ಕಣಗಳನ್ನು ನಿರ್ಮಿಸಿಕೊಳ್ಳಬೇಕು.
    ಎಚ್.ಆರ್.ಅಸೀಪುಲ್ಲಾ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ

    ರೈತರ ಬೇಡಿಕೆ ಆಧರಿಸಿ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸರ್ಕಾರಿ ಜಾಗದಲ್ಲಿ ನರೇಗಾ ಯೋಜನೆ ಮೂಲಕ ರೈತರ ಒಕ್ಕಣೆಗೆ ಅನುಕೂಲವಾಗುವಂತೆ ಕಾಂಕ್ರೀಟ್ ಕಣ ನಿರ್ಮಿಸಲಾಗುವುದು.
    ವೆಂಕಟೇಶಪ್ಪ, ತಾಪಂ ಇಒ, ಬಂಗಾರಪೇಟೆ

    ಸರ್ಕಾರದಿಂದ ನಿರ್ಮಿಸಿರುವ ಕಾಂಕ್ರೀಟ್ ಕಣಗಳು ಬಹಳ ದೂರದಲ್ಲಿದ್ದು, ಒಕ್ಕಣೆಗೆ ಬೇಕಾಗುವಷ್ಟು ಕೆಲಸಗಾರರು ಸಿಗುತ್ತಿಲ್ಲ. ಯಂತ್ರಗಳನ್ನು ಬಳಸಲು ಅಧಿಕ ಹಣ ವ್ಯಯವಾಗುತ್ತಿದ್ದು, ಹತ್ತಿರದ ರಸ್ತೆಗಳು ಒಕ್ಕಣೆಗೆ ಅನುಕೂಲವಾಗಿರುವ ಕಾರಣ ವಿಧಿ ಇಲ್ಲದೆ ರಸ್ತೆಗಳ ಮೊರೆ ಹೋಗುತ್ತಿದ್ದೇವೆ.
    ಮುನಿರಾಜು ರೈತ, ಬೂದಿಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts