More

    ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ, ಧೋನಿಗೂ ಐಸಿಸಿ ಗೌರವ

    ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿಯ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದೊಂದು ದಶಕದಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಗಾಗಿ ಕೊಹ್ಲಿ, ಪ್ರತಿಷ್ಠಿತ ಗ್ಯಾರಿ ಸೋಬರ್ಸ್‌ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಜತೆಗೆ ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನೂ ಅವರು ಬಾಚಿಕೊಂಡಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿ ಐಸಿಸಿಯ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿ ಸಂಪಾದಿಸಿದ್ದಾರೆ.

    ಐಸಿಸಿ ಸೋಮವಾರ ಟ್ವಿಟರ್‌ನಲ್ಲಿ ದಶಕದ ಕ್ರಿಕೆಟ್ ಗೌರವಗಳನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ದಶಕದ ಟೆಸ್ಟ್ ಮತ್ತು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ದಶಕದ ಟಿ20 ಕ್ರಿಕೆಟಿಗ ಗೌರವ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ ದಶಕದ ಆಟಗಾರ್ತಿ, ಟಿ20 ಮತ್ತು ಏಕದಿನ ಆಟಗಾರ್ತಿ ಈ ಮೂರೂ ಪ್ರಶಸ್ತಿಗಳನ್ನು ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿದ್ದಾರೆ.

    ಇದನ್ನೂ ಓದಿ: 199 ರನ್‌ಗೆ ಔಟಾಗಿ ಚೊಚ್ಚಲ ದ್ವಿಶತಕದಿಂದ ವಂಚಿತರಾದ ಫಾಫ್​ ಡು ಪ್ಲೆಸಿಸ್

    ಐಸಿಸಿ ದಶಕದ ಪ್ರಶಸ್ತಿಗಳು: ದಶಕದ ಕ್ರಿಕೆಟಿಗ: ವಿರಾಟ್ ಕೊಹ್ಲಿ, ಏಕದಿನ: ವಿರಾಟ್ ಕೊಹ್ಲಿ, ಟಿ20: ರಶೀದ್ ಖಾನ್, ಟೆಸ್ಟ್: ಸ್ಟೀವನ್ ಸ್ಮಿತ್, ಕ್ರಿಕೆಟ್ ಸ್ಫೂರ್ತಿ: ಎಂಎಸ್ ಧೋನಿ.
    ಮಹಿಳಾ ವಿಭಾಗ: ದಶಕದ ಮಹಿಳಾ ಕ್ರಿಕೆಟರ್, ಟಿ20, ಏಕದಿನ: ಎಲ್ಲಿಸ್ ಪೆರ‌್ರಿ (ಆಸ್ಟ್ರೇಲಿಯಾ).

    ಕೊಹ್ಲಿ 66 ಶತಕ ಸಿಡಿಸಿದ ದಶಕ
    ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಇದುವರೆಗೆ ಸಿಡಿಸಿರುವ 70 ಶತಕಗಳ ಪೈಕಿ 66 ಶತಕಗಳು ಕಳೆದೊಂದು ದಶಕದಲ್ಲೇ ದಾಖಲಾಗಿವೆ. ಅಲ್ಲದೆ ಕಳೆದೊಂದು ದಶಕದಲ್ಲಿ ಅತ್ಯಧಿಕ ಅರ್ಧಶತಕ (94) ಮತ್ತು ರನ್ (20,396) ಬಾರಿಸಿದ ಆಟಗಾರರೂ ಅವರಾಗಿದ್ದಾರೆ. ಜತೆಗೆ ಗರಿಷ್ಠ ಸರಾಸರಿಯೂ (56.97) ಅವರದಾಗಿದೆ. 32 ವರ್ಷದ ಕೊಹ್ಲಿ ಕಳೆದೊಂದು ದಶಕದಲ್ಲಿ ಏಕದಿನದಲ್ಲಿ 12,040, ಟೆಸ್ಟ್‌ನಲ್ಲಿ 7,318 ಮತ್ತು ಟಿ20ಯಲ್ಲಿ 2,928 ರನ್ ಬಾರಿಸಿದ್ದು, ಎಲ್ಲ 3 ಪ್ರಕಾರದಲ್ಲೂ 50ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ. ಜತೆಗೆ 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ ಭಾರತ ತಂಡದ ಭಾಗವೂ ಆಗಿದ್ದರು.

    ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಫಾಲೋಆನ್ ತಪ್ಪಿಸಿಕೊಂಡ ಪಾಕಿಸ್ತಾನ

    ಧೋನಿಗೆ ಕ್ರಿಕೆಟ್ ಸ್ಫೂರ್ತಿ ಗರಿ
    2011ರ ಇಂಗ್ಲೆಂಡ್ ಪ್ರವಾಸದಲ್ಲಿ ನಾಟಿಂಗ್‌ಹ್ಯಾಂ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಇಯಾನ್ ಬೆಲ್ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದರು. ಆಗ ತೃತೀಯ ಅಂಪೈರ್ ’ಔಟ್’ ತೀರ್ಪು ನೀಡಿದ್ದರೂ, ಟೀಮ್ ಇಂಡಿಯಾದ ಆಗಿನ ನಾಯಕ ಎಂಎಸ್ ಧೋನಿ, ಭೋಜನ ವಿರಾಮದ ಬಳಿಕ ಬೆಲ್‌ಗೆ ಮರಳಿ ಬ್ಯಾಟಿಂಗ್‌ಗೆ ಇಳಿಯಲು ಅವಕಾಶ ನೀಡಿದ್ದರು. ಧೋನಿ ಅವರ ಈ ಕ್ರೀಡಾಸ್ಫೂರ್ತಿಯ ನಡೆಗೆ ದಶಕದ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿ ಒಲಿದಿದೆ.

    *ದಶಕದ ಕ್ರಿಕೆಟಿಗ ಪ್ರಶಸ್ತಿ ಪಡೆಯುತ್ತಿರುವುದು ನನಗೆ ಶ್ರೇಷ್ಠ ಗೌರವವಾಗಿದೆ. 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಮತ್ತು 2018ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿದ್ದು ಖಂಡಿತವಾಗಿಯೂ ಕಳೆದ ದಶಕದಲ್ಲಿ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಕ್ಷಣಗಳು. ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಯೂ ವಿಶೇಷವಾದುದು. ಯಾಕೆಂದರೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲು ಆಡಿದ್ದು ಏಕದಿನ ಪಂದ್ಯ. ಹೀಗಾಗಿ ಅದನ್ನು ಬೇಗನೆ ಅರ್ಥಮಾಡಿಕೊಂಡೆ. ತಂಡದ ಗೆಲುವಿಗೆ ಕೊಡುಗೆ ನೀಡುವುದು ಯಾವಾಗಲೂ ನನ್ನ ಧ್ಯೇಯವಾಗಿತ್ತು. ನಾನಾಡಿದ ಪ್ರತಿ ಪಂದ್ಯದಲ್ಲೂ ಅದನ್ನೇ ಪ್ರಯತ್ನಿಸಿರುವೆ. ಅಂಕಿ-ಅಂಶಗಳ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ.
    ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ

    ಐಪಿಎಲ್ ಆಡಿದಲ್ಲಿಗೆ ಹನಿಮೂನ್‌ಗೆ ಹೋದ ಯಜುವೇಂದ್ರ ಚಾಹಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts