More

    ಇಂಗ್ಲೆಂಡ್ ವಿರುದ್ಧ ದಾಖಲೆಗಳ ನಿರೀಕ್ಷೆಯಲ್ಲಿ ಕೊಹ್ಲಿ, ಅಶ್ವಿನ್

    ಬೆಂಗಳೂರು: ಕರೊನಾ ಕಾಲದ ಮೊದಲ ಕ್ರಿಕೆಟ್ ಸರಣಿಯ ಆತಿಥ್ಯಕ್ಕೆ ಭಾರತ ಸಜ್ಜಾಗಿದೆ. ಈ ಮೂಲಕ ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭವನ್ನೂ ಕಾಣುತ್ತಿದೆ. ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ 4 ಟೆಸ್ಟ್ ಪಂದ್ಯಗಳ ಸರಣಿಗೆ ಶುಕ್ರವಾರ ಚೆನ್ನೈನಲ್ಲಿ ಚಾಲನೆ ಸಿಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್, ಟೆಸ್ಟ್ ರ‌್ಯಾಂಕಿಂಗ್ ಮತ್ತಿತರ ಲೆಕ್ಕಾಚಾರಗಳಿಂದಾಗಿ ಮಹತ್ವ ಪಡೆದಿರುವ ಈ ಸರಣಿಯಲ್ಲಿ ಜಿದ್ದಾಜಿದ್ದಿನ ಕಾದಾಟ ಏರ್ಪಡುವ ನಿರೀಕ್ಷೆ ಇದೆ. ಜತೆಗೆ ಉಭಯ ತಂಡಗಳ ಆಟಗಾರರಿಂದ ಹಲವಾರು ದಾಖಲೆಗಳೂ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ.

    400 ವಿಕೆಟ್‌ಗಳತ್ತ ಅಶ್ವಿನ್
    ಸ್ಪಿನ್ನರ್ ಆರ್. ಅಶ್ವಿನ್ ಈಗ ಆಡಿದ 74 ಟೆಸ್ಟ್‌ಗಳಿಂದ 377 ವಿಕೆಟ್ ಕಬಳಿಸಿದ್ದು, ಇನ್ನು 23 ವಿಕೆಟ್ ಕಬಳಿಸಿದರೆ 400 ವಿಕೆಟ್ ಕಬಳಿಸಿದ ವಿಶ್ವದ 16ನೇ ಮತ್ತು ಭಾರತದ 4ನೇ ಬೌಲರ್ ಎನಿಸಲಿದ್ದಾರೆ. ತವರಿನಲ್ಲಿ ಅಶ್ವಿನ್ ಹೊಂದಿರುವ ಬಲಿಷ್ಠ ದಾಖಲೆಯನ್ನು ಗಮನಿಸಿದರೆ ಅವರು ಇದೇ ಸರಣಿಯಲ್ಲಿ ಈ ಮೈಲಿಗಲ್ಲು ನೆಡುವ ನಿರೀಕ್ಷೆ ಹೆಚ್ಚಿದೆ. ಸರಣಿಯ 4 ಪಂದ್ಯಗಳಲ್ಲೇ ಅವರು ಈ ಸಾಧನೆ ಮಾಡಿದರೆ ಅತಿವೇಗದ ಭಾರತೀಯ ಸಾಧಕ ಎನಿಸಲಿದ್ದಾರೆ. ಅನಿಲ್ ಕುಂಬ್ಳೆ 85 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಹರ್ಭಜನ್ ಸಿಂಗ್ 96 ಮತ್ತು ಕಪಿಲ್ ದೇವ್ 115 ಟೆಸ್ಟ್‌ಗಳಲ್ಲಿ ಮಾಡಿದ್ದರು.

    ಇದನ್ನೂ ಓದಿ: ಐಸಿಸಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ರಿಷಭ್ ಪಂತ್, ನೀವೂ ಮತ ಹಾಕಿ…

    ಹರ್ಭಜನ್ ಸನಿಹ ಅಶ್ವಿನ್
    ಅಶ್ವಿನ್ ಸದ್ಯ ತವರಿನಲ್ಲಿ ಆಡಿರುವ 43 ಟೆಸ್ಟ್‌ಗಳಲ್ಲಿ 254 ವಿಕೆಟ್ ಕಬಳಿಸಿದ್ದಾರೆ. ಇನ್ನು 12 ವಿಕೆಟ್ ಗಳಿಸಿದರೆ ಅವರು, ಭಾರತದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಸಾಧಕರ ಪಟ್ಟಿಯಲ್ಲಿ ಹರ್ಭಜನ್ ಸಿಂಗ್‌ರನ್ನು (265) ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ. ಅನಿಲ್ ಕುಂಬ್ಳೆ ಗರಿಷ್ಠ 350 ವಿಕೆಟ್ ಕಬಳಿಸಿದ ದಾಖಲೆ ಹೊಂದಿದ್ದಾರೆ.

    ಅಶ್ವಿನ್‌ಗೆ ಅವಳಿ ಸಾಧನೆ ಅವಕಾಶ
    ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಮತ್ತು 2,500 ರನ್‌ಗಳ ಅವಳಿ ಸಾಧನೆ ಮಾಡಿದ 3ನೇ ಭಾರತೀಯರೆನಿಸುವ ಅವಕಾಶವನ್ನೂ ಹೊಂದಿದ್ದಾರೆ. ಸದ್ಯ 2,467 ರನ್ ಗಳಿಸಿರುವ ಅಶ್ವಿನ್, ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಲಿದ್ದಾರೆ.

    ಆಂಗ್ಲರೆದುರು 50ರ ಸನಿಹ ಅಶ್ವಿನ್​
    ಅಶ್ವಿನ್ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ಇದುವರೆಗೆ 42 ವಿಕೆಟ್ ಕಬಳಿಸಿದ್ದು, 50 ವಿಕೆಟ್ ಪೂರೈಸಿದ 4ನೇ ಭಾರತೀಯ ಎನಿಸುವ ಸನಿಹದಲ್ಲಿದ್ದಾರೆ. ಬಿಎಸ್ ಚಂದ್ರಶೇಖರ್ (64), ಅನಿಲ್ ಕುಂಬ್ಳೆ (56) ಮತ್ತು ಬಿಷನ್ ಸಿಂಗ್ ಬೇಡಿ (50) ಆಂಗ್ಲರೆದುರು ತವರಿನಲ್ಲಿ ಈ ಸಾಧನೆ ಮಾಡಿರುವ ಭಾರತೀಯರಾಗಿದ್ದಾರೆ.

    ದ್ರಾವಿಡ್ ದಾಖಲೆಯತ್ತ ಕೊಹ್ಲಿ
    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯರಲ್ಲಿ 3ನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್‌ರನ್ನು ಹಿಂದಿಕ್ಕುವ ಅವಕಾಶ ಕೊಹ್ಲಿ ಮುಂದಿದೆ. ಇದಕ್ಕಾಗಿ ಅವರು ಸರಣಿಯಲ್ಲಿ 381 ರನ್ ಗಳಿಸಬೇಕಿದೆ. ದ್ರಾವಿಡ್ 21 ಟೆಸ್ಟ್‌ಗಳಲ್ಲಿ 1950 ರನ್ ಗಳಿಸಿದ್ದರೆ, ಕೊಹ್ಲಿ 19 ಟೆಸ್ಟ್‌ಗಳಲ್ಲಿ 1570 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ (2,535) ಮತ್ತು ಸುನೀಲ್ ಗಾವಸ್ಕರ್ (2483) ಬಳಿಕ ಇಂಗ್ಲೆಂಡ್ ವಿರುದ್ಧ 2 ಸಾವಿರ ರನ್ ಪೂರೈಸಿದ 3ನೇ ಭಾರತೀಯರೆನಿಸುವ ಅವಕಾಶವೂ ಕೊಹ್ಲಿ ಮುಂದಿದೆ. ಕೊಹ್ಲಿ (843) 157 ರನ್ ಗಳಿಸಿದರೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸಾವಿರ ರನ್ ಬಾರಿಸಿದ 3ನೇ ಭಾರತೀಯ ಎನಿಸಲಿದ್ದಾರೆ. ಸುನೀಲ್ ಗಾವಸ್ಕರ್ (1331), ಜಿಆರ್ ವಿಶ್ವನಾಥ್ (1022) ಮೊದಲಿಬ್ಬರು.

    ಇದನ್ನೂ ಓದಿ: ಟೀಮ್ ಇಂಡಿಯಾ, ಆರ್‌ಸಿಬಿ ಮಾಜಿ ವೇಗಿ ಅಶೋಕ್ ದಿಂಡಾ ವಿದಾಯ

    ಕೊಹ್ಲಿ ಶತಕಗಳ ದಾಖಲೆ
    ವಿರಾಟ್ ಕೊಹ್ಲಿ (70) ಇನ್ನೊಂದು ಶತಕ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ (100) ಬಳಿಕ ಗರಿಷ್ಠ ಶತಕ ಸಿಡಿಸಿದ ಸಾಧಕರಲ್ಲಿ ರಿಕಿ ಪಾಂಟಿಂಗ್ (71) ಸಾಧನೆ ಸರಿಗಟ್ಟಲಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ ಗರಿಷ್ಠ ಶತಕ ಸಿಡಿಸಿದ ದಾಖಲೆಯನ್ನೂ ನಿರ್ಮಿಸಲಿದ್ದಾರೆ. ಸದ್ಯ ಕೊಹ್ಲಿ 41 ಶತಕದೊಂದಿಗೆ ರಿಕಿ ಪಾಂಟಿಂಗ್ ಜತೆಗೆ ದಾಖಲೆ ಹಂಚಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ 27 ಶತಕ ಸಿಡಿಸಿರುವ ಕೊಹ್ಲಿ, ಇನ್ನೆರಡು ಶತಕ ಸಿಡಿಸಿದರೆ ಡಾನ್ ಬ್ರಾಡ್ಮನ್‌ರ (29) ಶತಕದ ದಾಖಲೆ ಸರಿಗಟ್ಟಲಿದ್ದಾರೆ. ಕೊಹ್ಲಿ ಸರಣಿಯಲ್ಲಿ 3 ಶತಕ ಸಿಡಿಸಿದರೆ ಇಂಗ್ಲೆಂಡ್ ವಿರುದ್ಧ ಅತ್ಯಧಿಕ ಶತಕ ಬಾರಿಸಿದ ಭಾರತೀಯರೆನಿಸಲಿದ್ದಾರೆ. ಸದ್ಯ ತಲಾ 7 ಶತಕ ಸಿಡಿಸಿರುವ ಸಚಿನ್ ಮತ್ತು ದ್ರಾವಿಡ್ ಈ ದಾಖಲೆ ಹಂಚಿಕೊಂಡಿದ್ದರೆ, ಕೊಹ್ಲಿ ಇದುವರೆಗೆ 5 ಶತಕ ಸಿಡಿಸಿದ್ದಾರೆ.

    ಲಾರಾ ಹಿಂದಿಕ್ಕುವತ್ತ ಕೊಹ್ಲಿ
    ಕೊಹ್ಲಿ ಇನ್ನು 73 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾರನ್ನು ಹಿಂದಿಕ್ಕಲಿದ್ದಾರೆ. ಲಾರಾ 22,358 ರನ್ ಗಳಿಸಿದ್ದರೆ, ಕೊಹ್ಲಿ 22,286 ರನ್ ಗಳಿಸಿದ್ದಾರೆ. ಇದಲ್ಲದೆ 87 ಟೆಸ್ಟ್‌ಗಳಲ್ಲಿ 7,318 ರನ್ ಗಳಿಸಿರುವ ಕೊಹ್ಲಿ, ಸರಣಿಯ ವೇಳೆ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿರುವ ರಾಸ್ ಟೇಲರ್ (7,379), ಡೇವಿಡ್ ಬೂನ್ (7,422), ಕ್ಲೈವ್ ಲಾಯ್ಡ (7,515), ಮೊಹಮದ್ ಯೂಸುಫ್​ (7,530), ಸ್ಟೀವನ್ ಸ್ಮಿತ್ (7,540) ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.

    ಧೋನಿ ಸರಿಗಟ್ಟುವತ್ತ ಕೊಹ್ಲಿ
    ವಿರಾಟ್ ಕೊಹ್ಲಿ ಇನ್ನೊಂದು ಗೆಲುವು ಕಂಡರೆ, ಭಾರತದ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದಿರುವ ಎಂಎಸ್ ಧೋನಿ ದಾಖಲೆ ಸರಿಗಟ್ಟಲಿದ್ದಾರೆ. ಧೋನಿ ಭಾರತದಲ್ಲಿ 21 ಟೆಸ್ಟ್ ಗೆದ್ದಿದ್ದರೆ, ಕೊಹ್ಲಿ 20 ಗೆಲುವು ಕಂಡಿದ್ದಾರೆ. ಇದಲ್ಲದೆ ಸರಣಿಯ ಎಲ್ಲ 4 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದಾಗ ಕೊಹ್ಲಿ (56), ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಗರಿಷ್ಠ 60 ಪಂದ್ಯಗಳಲ್ಲಿ ಮುನ್ನಡೆಸಿದ ಧೋನಿ ದಾಖಲೆಯನ್ನೂ ಸರಿಗಟ್ಟಲಿದ್ದಾರೆ.

    ಕಪಿಲ್ ಸಾಧನೆಯತ್ತ ಇಶಾಂತ್
    ಇಶಾಂತ್ ಶರ್ಮ ಸರಣಿಯಲ್ಲಿ 3 ಪಂದ್ಯ ಆಡಿದರೆ ಭಾರತ ಪರ 100 ಟೆಸ್ಟ್ ಆಡಿದ 11ನೇ ಆಟಗಾರ ಮತ್ತು 2ನೇ ವೇಗದ ಬೌಲರ್ ಎನಿಸಲಿದ್ದಾರೆ. ಕಪಿಲ್ ದೇವ್ (131) ಈ ಸಾಧನೆ ಮಾಡಿರುವ ಮೊದಲ ವೇಗಿ. 32 ವರ್ಷದ ಇಶಾಂತ್ ಭಾರತ ಪರ ಇದುವರೆಗೆ 97 ಟೆಸ್ಟ್ ಆಡಿದ್ದು, ಇನ್ನು 3 ವಿಕೆಟ್ ಪಡೆದರೆ 300 ವಿಕೆಟ್ ಕೂಡ ಪೂರೈಸಲಿದ್ದಾರೆ. ಕಪಿಲ್ ದೇವ್ (434) ಮತ್ತು ಜಹೀರ್ ಖಾನ್ (311) ಬಳಿಕ ಈ ಸಾಧನೆ ಮಾಡಿದ 3ನೇ ಭಾರತೀಯ ವೇಗಿ ಮತ್ತು 6ನೇ ಭಾರತೀಯ ಬೌಲರ್ ಎನಿಸಲಿದ್ದಾರೆ. ಇನ್ನೆರಡು ವಿಕೆಟ್ ಪಡೆದರೆ ಅವರು, ಭಾರತದಲ್ಲಿ 100 ವಿಕೆಟ್ ಕಬಳಿಸಿದ 4ನೇ ವೇಗಿ ಎನಿಸಲಿದ್ದಾರೆ. ಕಪಿಲ್ ದೇವ್ (219), ಜಾವಗಲ್ ಶ್ರೀನಾಥ್ (108) ಮತ್ತು ಜಹೀರ್ ಖಾನ್ (104) ಮೊದಲ ಮೂವರು.

    ಇದನ್ನೂ ಓದಿ: ಚೆನ್ನೈ ಟೆಸ್ಟ್‌ಗೆ ಆಯ್ಕೆ ಗೊಂದಲದಲ್ಲಿ ಟೀಮ್ ಇಂಡಿಯಾ; 2ನೇ ವೇಗಿ, ಆಲ್ರೌಂಡರ್ ಯಾರು?

    ಜೋ ರೂಟ್‌ಗೆ 100ನೇ ಟೆಸ್ಟ್
    ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿದಾಗ 100 ಟೆಸ್ಟ್ ಆಡಿದ 15ನೇ ಆಂಗ್ಲ ಕ್ರಿಕೆಟಿಗ ಎನಿಸಲಿದ್ದಾರೆ. 99 ಟೆಸ್ಟ್‌ಗಳಲ್ಲಿ 8249 ರನ್ ಗಳಿಸಿರುವ ಅವರು, ಇಂಗ್ಲೆಂಡ್ ಪರ 10ನೇ ಗರಿಷ್ಠ ರನ್‌ಸ್ಕೋರರ್ ಎನಿಸಿದ್ದಾರೆ.

    ಕುಂಬ್ಳೆ ದಾಖಲೆ ಮೇಲೆ ಆಂಡರ್‌ಸನ್ ಕಣ್ಣು
    157 ಟೆಸ್ಟ್‌ಗಳಲ್ಲಿ 606 ವಿಕೆಟ್ ಕಬಳಿಸಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ ಸರಣಿಯಲ್ಲಿ 13 ವಿಕೆಟ್ ಕಬಳಿಸಿದರೆ, ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಭಾರತದ ಅನಿಲ್ ಕುಂಬ್ಳೆ (619) ಅವರನ್ನು ಸರಿಗಟ್ಟಲಿದ್ದಾರೆ. ಭಾರತ ವಿರುದ್ಧ ಗರಿಷ್ಠ (110) ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆ ಈಗಾಗಲೆ ಆಂಡರ್‌ಸನ್ ಹೆಸರಿನಲ್ಲಿದೆ. ಆಂಡರ್‌ಸನ್ ಸರಣಿಯ ಎಲ್ಲ 4 ಟೆಸ್ಟ್ ಆಡಿದರೆ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಆಡಿರುವ ಅಲಸ್ಟೈರ್ ಕುಕ್ (161) ದಾಖಲೆ ಸರಿಗಟ್ಟಲಿದ್ದಾರೆ.

    VIDEO | ಟಿ10 ಪಂದ್ಯದಲ್ಲಿ 22 ಎಸೆತಗಳಲ್ಲಿ 84 ರನ್ ಸಿಡಿಸಿದ ಕ್ರಿಸ್ ಗೇಲ್!

    ವಕೀಲೆಯನ್ನು ವಿವಾಹವಾದ ಕ್ರಿಕೆಟಿಗ ಜೈದೇವ್ ಉನಾದ್ಕತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts