More

    ಕರೊನಾ ವೈದ್ಯಕೀಯ ಪರಿಕರ ಖರೀದಿಯಲ್ಲಿ ಅವ್ಯವಹಾರ

    ರಮಾನಾಥ ರೈ, ಧ್ರುವನಾರಾಯಣ ಆರೋಪ, ಬೀದಿಗಿಳಿದು ಹೋರಾಟ ನಡೆಸಲು ನಿರ್ಧಾರ

    ಮಡಿಕೇರಿ: ಕರೊನಾ ವೈದ್ಯಕೀಯ ಪರಿಕರ ಖರೀದಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರವನ್ನು ತನಿಖೆಗೆ ಒಪ್ಪಿಸದ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ಧ್ರುವನಾರಾಯಣ ಎಚ್ಚರಿಸಿದ್ದಾರೆ.
    ಕರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಆಡಳಿತಾರೂಢ ಪಕ್ಷಕ್ಕೆ ಪ್ರಾರಂಭಿಕ ಹಂತದಲ್ಲಿ ಸಂಪೂರ್ಣ ಸಹಕಾರ ನೀಡಿತ್ತು. ಆದರೆ, ಇವರ ವ್ಯಾಪಕ ಭ್ರಷ್ಟಾಚಾರಕ್ಕೆ ಸಹಕಾರ ನೀಡುವುದಿಲ್ಲ. ವೈದ್ಯಕೀಯ ಪರಿಕರ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾಖಲೆ ಸಹಿತ ಬಹಿರಂಗ ಪಡಿಸಿದ್ದಾರೆ. ರಾಜ್ಯ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ರೋಗದ ಹೆಸರಿನಲ್ಲಿ ಬಿಜೆಪಿ ನಾಯಕರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಪ್ರಾರಂಭಿಸಿದೆ. ವೆಂಟಿಲೇಟರ್, ಪಿಪಿಐ ಕಿಟ್, ಮಾಸ್ಕ್ ಸೇರಿ ವಿವಿಧ ಸಲಕರಣೆ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಅಧಿಕಾರಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ಜನರ ಹಿತಾಸಕ್ತಿ ಇವರಿಗೆ ಮುಖ್ಯವಾಗಿಲ್ಲ ಎಂದು ಇಬ್ಬರು ಮುಖಂಡರೂ ಟೀಕಿಸಿದರು.
    ಉಸ್ತುವಾರಿ ಸಚಿವರ ಯತ್ನವೂ ವಿಫಲ:
    ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಕೇಂದ್ರ- ರಾಜ್ಯ ಸರ್ಕಾರಗಳು ವಿಫಲವಾಗಿವೆ. ಸರ್ಕಾರ ಯೋಚನೆ ಮತ್ತು ಯೋಜನೆ ಮಾಡಲಿಲ್ಲ. ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ಉಸ್ತುವಾರಿ ಸಚಿವರು ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
    ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಎಂಎಲ್ಸಿ ಸಿ.ಎಸ್.ಅರುಣ್ ಮಾಚಯ್ಯ, ಕೆಪಿಸಿಸಿ ಕಾನೂನು ವಿಭಾಗ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ರಾಜ್, ಕಾರ್ಯದರ್ಶಿ ವೆಂಕಪ್ಪಗೌಡ, ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts