More

    ಬೊಮ್ಮನಗುಡ್ಡ ಶಾಲಾ ಮಕ್ಕಳಿಗಿಲ್ಲ ಶೌಚಗೃಹ

    ಕೊಡೇಕಲ್: ಸರ್ಕಾರ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ೧೯೯ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿರುವ ಬೊಮ್ಮನಗುಡ್ಡ ಶಾಲೆಯಲ್ಲಿ ಶೌಚಗೃಹ ನಿರ್ವಹಣೆ ಇಲ್ಲದೆ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಶಿಕ್ಷಕಿಯರು ತೀವ್ರ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಕೊಡೇಕಲ್ ಹೋಬಳಿ ವಲಯದ ಬೈಲಕುಂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಗುಡ್ಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಹಳೇ ಶೌಚಗೃಹ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಸುತ್ತಲು ಮುಳ್ಳು ಕಂಟಿ ಬೆಳೆದು ಯಾರೂ ಹೋಗದಂತಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುವ ೪೨೬ ಮಕ್ಕಳು ಮತ್ತು ಶಿಕ್ಷಕ ಸಿಬ್ಬಂದಿಗೆ ಬಯಲೇ ಆಶ್ರಯಿಸುವಂತಾಗಿದೆ.

    ೧ ರಿಂದ ೮ನೇ ತರಗತಿವರೆಗೆ ಹಿರಿಯ ಪ್ರಾಥಮಿಕ ಶಾಲೆ ಹೊಂದಿದ್ದು, ಪ್ರೌಢಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಳವಾದ ಕಾರಣ ಈ ವರ್ಷ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾಗಿದೆ. ಆದರೆ ಪ್ರೌಢಶಾಲಾ ಕಟ್ಟಡ ನಿರ್ಮಾಣವಾಗದ ಕಾರಣ ಈ ಮೊದಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ತರಗತಿ ನಡೆಯುತ್ತಿವೆ.

    ಪ್ರಾಥಮಿಕ ೩೦೩ ಮತ್ತು ಪ್ರೌಢಶಾಲೆಯಲ್ಲಿ ೧೨೩ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳಲ್ಲಿ ೧೯೯ ವಿದ್ಯಾರ್ಥಿನಿಯರು ಹಾಗೂ ೯ ಜನ ಮಹಿಳಾ ಅತಿಥಿ ಶಿಕ್ಷಕಿಯರು ನಿರ್ವಹಣೆ ಇಲ್ಲದ ಶೌಚಗೃಹದಿಂದ ನಿತ್ಯ ತೀವ್ರ ಮುಜುಗರ ಅನುಭವಿಸುವಂತಾಗಿದೆ.

    ಶೌಚಗೃಹ ಇಲ್ಲದ ಕಾರಣ ಪದೇ ಪದೆ ಮನೆಗೆ ಹೋಗಿ ಬರಲು ಆಗದ ಕಾರಣ ಸ್ವಲ್ಪವೇ ನೀರು ಕುಡಿದು ಬರುತ್ತೇವೆ. ಇದರಿಂದ ಆರೋಗ್ಯದ ಸಮಸ್ಯೆ ಕೂಡ ಕಾಡುತ್ತಿದೆ. ಹೀಗಾಗಿ ನಮಗೆ ಶೀಘ್ರ ಶೌಚಗೃಹದ ಸೌಲಭ್ಯ ಒದಗಿಸಿಕೊಡುಬೇಕು ಎಂಬುದು ವಿದ್ಯಾರ್ಥಿನಿಯರ ಒತ್ತಾಯವಾಗಿದೆ.

    ಮಕ್ಕಳ ಸಮಸ್ಯೆ ಕಂಡು ಮುಖ್ಯಗುರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಖಾತ್ರಿ ಯೋಜನೆಯಡಿ ಶಾಲೆಯಲ್ಲಿ ಶೌಚಗೃಹ ನಿರ್ಮಾಣಕ್ಕೆ ಅವಕಾಶವಿದ್ದು ಮತ್ತು ಶೌಚಗೃಹಗಳಿದ್ದ ಶಾಲೆಯಲ್ಲಿಯೂ ಕೂಡ ನರೇಗಾ ಯೋಜನೆಯಡಿ ಹೊಸದೊಂದು ನಿರ್ಮಾಣ ಮಾಡುವ ಅವಕಾಶ ಇದೆ. ಆದರೆ ಗ್ರಾಮ ಪಂಚಾಯಿತಿ ಈವರೆಗೆ ಶಾಲೆಯ ಸಮಸ್ಯೆಯತ್ತ ಗಮನಹರಿಸದೇ ಇರುವುದು ದುರದೃಷ್ಟಕರವಾಗಿದೆ.
    ಒಟ್ಟಿನಲ್ಲಿ ಶೌಚಗೃಹದಿಂದ ಮಕ್ಕಳು ಮತ್ತು ಶಾಲಾ ಸಿಬ್ಬಂದಿ ಅನುಭವಿಸುತ್ತಿರುವ ಸಮಸ್ಯೆಗೆ ಗ್ರಾಪಂ ಸ್ಪಂದಿಸುವುದೇ ಕಾದು ನೋಡಬೇಕಾಗಿದೆ.

    ಸಮಸ್ಯೆ ಕುರಿತು ಈಗಾಗಲೇ ಶಾಲಾ ಮುಖ್ಯಗುರು ಹಾಗೂ ಕರವೇಯಿಂದ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಶಾಲಾ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕು.
    | ಅಂಬ್ರೇಶ ಅಗ್ನಿ ಕರವೇ ತಾಲೂಕು ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts