More

    ಸೋಂಕಿತರ ಮುಂದೆ ಮಂಡಿಯೂರಿದ ತಾಲೂಕಾಡಳಿತ

    ಮುಂಡರಗಿ: ಕೋವಿಡ್ ಕೇರ್ ಸೆಂಟರ್​ಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಪಾಸಿಟಿವ್ ಬಂದವರ ಮನೆ ಮುಂದೆ ತಾಲೂಕಾಡಳಿತವೇ ಮಂಡಿಯೂರಿ ಕೈ ಮುಗಿದು ವಿನಂತಿಸಿದ ಘಟನೆ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.
    ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕರೊನಾ ಪಾಸಿಟಿವ್ ದೃಢವಾಗಿತ್ತು. ಹೀಗಾಗಿ, ಪಟ್ಟಣದ ಕೋವಿಡ್ ಕೇರ್ ಸೆಂಟರ್​ಗೆ ಬಂದು ಚಿಕಿತ್ಸೆ ಪಡೆಯುವಂತೆ ಗ್ರಾಪಂ ಪಿಡಿಒ ಮನವಿ ಮಾಡಿಕೊಂಡಿದ್ದರು. ಆದರೆ, ಪಾಸಿಟಿವ್ ಬಂದವರು ನಿರಾಕರಿಸಿದ್ದರು. ತಹಸೀಲ್ದಾರ್ ಆಶಪ್ಪ ಪೂಜಾರಿ, ತಾಪಂ ಇಒ ಎಸ್.ಎಸ್. ಕಲ್ಮನಿ, ಗ್ರಾಪಂ ಅಧ್ಯಕ್ಷ ರವಿ ಜವಿ, ಕಂದಾಯ ನಿರೀಕ್ಷಕ ಎಂ.ಎ. ನದಾಫ್, ನೋಡಲ್ ಅಧಿಕಾರಿ ಮಲ್ಲೇಶ ಹಾರೋಗೇರಿ, ಪಿಡಿಒ ಮಹೇಶ ಅಲ್ಲಿಪೂರ, ಪೊಲೀಸ್ ಸಿಬ್ಬಂದಿ ಕೋವಿಡ್ ಪಾಸಿಟಿವ್ ದೃಢಪಟ್ಟವರ ಮನೆಗೆ ಹೋಗಿ ಕೋವಿಡ್ ಕೇರ್ ಸೆಂಟರ್​ಗೆ ಬರುವಂತೆ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೂ ಒಪ್ಪದಿದ್ದಾಗ ಮನೆ ಮುಂದಿನ ರಸ್ತೆಯಲ್ಲಿ ಮಂಡಿಯೂರಿ ಕುಳಿತು ಕೈ ಮುಗಿದು ವಿನಂತಿಸಿಕೊಂಡರು. ಆಗ ಕುಟುಂಬದ ನಾಲ್ವರು ಒಪ್ಪಿಕೊಂಡು ಕೋವಿಡ್ ಕೇರ್ ಸೆಂಟರ್​ಗೆ ಆಗಮಿಸಿದ್ದಾರೆ.
    ರೋಗಿಗಳನ್ನು ಸಿಸಿಸಿಗೆ ದಾಖಲಿಸಲು ಹರಸಾಹಸ: ಲಕ್ಷ್ಮೇಶ್ವರ ತಾಲೂಕಿನ ಕರೊನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗೆ ಸ್ಥಳಾಂತರಿಸಲು ತಾಲೂಕಾಡಳಿತ, ಪುರಸಭೆ ಮತ್ತು ಗ್ರಾಪಂ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
    ಕೋವಿಡ್ ಪಾಸಿಟಿವ್ ವರದಿ ಬಂದವರು ಹೋಂ ಐಸೋಲೇಷನ್ ಆಗುತ್ತೇವೆ ಎಂದು ಅಧಿಕಾರಿಗಳಲ್ಲಿ ಗೋಗರೆದು ಬೇಡಿಕೊಳ್ಳುತ್ತಿದ್ದಾರೆ. ಆದರೆ, ಹೋಂ ಐಸೋಲೇಷನ್​ನಲ್ಲಿ ಇರುವವರು ಮನೆಯ ಇತರ ಸದಸ್ಯರೊಂದಿಗೆ ಸಂಪರ್ಕ ಹೊಂದುತ್ತಿದ್ದಾರೆ ಮತ್ತು ಹೊರಗೆ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ತಾಲೂಕಿನಲ್ಲಿ ಒಟ್ಟು 202 ಕರೊನಾ ಸಕ್ರಿಯ ಪ್ರಕರಣಗಳಿದ್ದರೂ 45 ಸೋಂಕಿತರು ಮಾತ್ರ ಕೋವಿಡ್ ಸೆಂಟರ್​ನಲ್ಲಿದ್ದಾರೆ. ಉಳಿದ ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. ಸೋಮೇಶ್ವರ ದೇವಸ್ಥಾನ ಹತ್ತಿರದ ಮನೆಯೊಂದರ ಐವರು ಸದಸ್ಯರಲ್ಲಿ ಮೂವರಿಗೆ ಪಾಸಿಟಿವ್ ವರದಿ ಬಂದಿತ್ತು. ಆದರೆ, ಸೋಂಕಿತರು ಸಿಸಿಸಿಗೆ ಹೋಗಲು ನಿರಾಕರಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್​ನಲ್ಲಿರುವ ಸೌಲಭ್ಯಗಳನ್ನು ತಿಳಿಸಿಕೊಟ್ಟರು. ಪರಿಪರಿಯಾಗಿ ಮನವಿ ಮಾಡಿಕೊಂಡು ಸೋಂಕಿತರನ್ನು ಒಡೆಯರ್ ಮಲ್ಲಾಪುರ ಮುರಾರ್ಜಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್​ಗೆ ಸ್ಥಳಾಂತರಿಸಲು ಯಶಸ್ವಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts