More

    ಕೆಎಲ್‌ಇ ಆಸ್ಪತ್ರೆ ಚಿಕಿತ್ಸೆಗೆ ಬ್ರೆಜಿಲ್ ಫಿದಾ!

    ಬೆಳಗಾವಿ: ದೇಶದ ಆಯುರ್ವೇದ ಚಿಕಿತ್ಸಾ ಪದ್ಧತಿ ಕಲಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಳಗಾವಿ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ವಿದ್ಯಾಲಯದೊಂದಿಗೆ ಬ್ರೆಜಿಲ್ ದೇಶದ ಮಾಧವ ಆಯುರ್ವೇದ ಮತ್ತು ಯೋಗ ಸಂಸ್ಥೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ ಎಂದು ಪ್ರಾಂಶುಪಾಲ ಡಾ.ಸುಹಾಸಕುಮಾರ ಶೆಟ್ಟಿ ತಿಳಿಸಿದ್ದಾರೆ.

    ನಗರದ ಶಹಾಪುರ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ವಿದ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರೆಜಿಲ್ ದೇಶದ ಮಾಧವ ಆಯುರ್ವೇದ ಮತ್ತು ಯೋಗ ಸಂಸ್ಥೆಯೊಂದಿಗೆ 2020ರಲ್ಲಿ ಮೂರು ವರ್ಷಗಳ ಕಾಲ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದೀಗ ಮತ್ತೆ ಮೂರು ವರ್ಷಗಳ ಕಾಲ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಆಯುರ್ವೇದ ಕಲಿಕೆ, ಚಿಕಿತ್ಸಾ ಪದ್ಧತಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ ಎಂದರು.

    ಈಗಾಗಲೇ ಬ್ರೆಜಿಲ್‌ನ ಮಾಧವ ಆಯುರ್ವೇದ ಮತ್ತು ಯೋಗ ಸಂಸ್ಥೆಯು ಏಳು ಜನ ಕಲಿಕಾ ವಿದ್ಯಾರ್ಥಿಗಳು ಮೂರು ವಾರಗಳ ಕಾಲ ಆಯುರ್ವೇದ ಬೆಳವಣಿಗೆ, ಸಂಶೋಧನಾ ಕ್ರಮ, ಚಿಕಿತ್ಸಾ ಪದ್ಧತಿ, ಔಷಧಗಳ ಉಪಯೋಗ, ಔಷಧ ತಯಾರಿಕೆ ಕುರಿತು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ನರರೋಗ, ಕಂಪತಾ ರೋಗ, ಸಂಧಿವಾತ ಸೇರಿ ವಿವಿಧ ರೋಗಗಳಿಂದ ಬಳಲುತ್ತಿರುವ ಆರು ಜನ ರೋಗಿಗಳು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಇದು ನಮ್ಮ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ವಿದ್ಯಾಲಯದ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.

    ನಾಲ್ಕೈದು ವರ್ಷಗಳಿಂದ ಬ್ರೆಜಿಲ್ ದೇಶದ ಮಾಧವ ಆಯುರ್ವೇದ ಮತ್ತು ಯೋಗ ಸಂಸ್ಥೆ ನಮ್ಮೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತಿರುವುದರಿಂದ ಬ್ರೆಜಿಲ್ ದೇಶದಲ್ಲಿ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ವಿದ್ಯಾಲಯದಲ್ಲಿನ ಕಲಿಕಾ ಪದ್ಧತಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರತಿ ವರ್ಷ ಕಲಿಕಾ ವಿದ್ಯಾರ್ಥಿಗಳ ಜತೆಗೆ 8 ರಿಂದ 10 ರೋಗಿಗಳು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಅವರು ಸಂಪೂರ್ಣ ಗುಣಮುಖವಾಗಿದ್ದಾರೆ ಎಂದರು.

    ಬ್ರೆಜಿಲ್ ದೇಶದ ಮಾಧವ ಆಯುರ್ವೇದ ಮತ್ತು ಯೋಗ ಸಂಸ್ಥೆ ನಿರ್ದೇಶಕ ಆಡ್ರೀನಾ ಮಾಕರ್ ಮಾತನಾಡಿ, 2005ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಆಯುರ್ವೇದದಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ 2007ರಲ್ಲಿ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದೆ. ನಂತರ 2019ರಲ್ಲಿ ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೇದ ವಿದ್ಯಾಲಯದ ಜತೆಗೆ ಪರಸ್ಪರ ಒಡಂಬಡಿಕೆ ಮಾಡಿಕೊಂಡು ಪ್ರತಿ ವರ್ಷ ನಮ್ಮ ದೇಶದಿಂದ 6 ರಿಂದ 7 ಜನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಮೂರು ವಾರ ಕಲಿತು ಹೋಗುತ್ತಿದ್ದಾರೆ. ಬ್ರೆಜಿಲ್‌ನಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಕೆಎಲ್‌ಇ ಆಸ್ಪತ್ರೆ ಚಿಕಿತ್ಸೆಯಿಂದ ಸಾಕಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಇಲ್ಲಿಂದಲೇ ಔಷಧಗಳು ನಮಗೂ ತಲುಪುತ್ತಿವೆ ಎಂದು ಹೇಳಿದರು. ಡಾ.ಮಹಾಂತೇಶ ರಾಮಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts