More

    ತೆರಿಗೆದಾರ ರೈತರಿಗೂ ಕಿಸಾನ್ ಸಮ್ಮಾನ್

    ಹುಬ್ಬಳ್ಳಿ: ಇದೊಂದು ವಿಚಿತ್ರ ಮತ್ತು ವಿಶಿಷ್ಟ ಪ್ರಕರಣ. ತೆರಿಗೆ ಕಟ್ಟುವವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕೇಂದ್ರ ಸರ್ಕಾರವೇ ಇದನ್ನು ಪತ್ತೆ ಹಚ್ಚಿದ್ದು, ಮರು ಪಾವತಿಸಿಕೊಳ್ಳಲು ಸಿದ್ಧತೆ ನಡೆಸಿದೆ.

    ಧಾರವಾಡ ಜಿಲ್ಲೆಯಲ್ಲಿ ತೆರಿಗೆ ಕಟ್ಟುತ್ತಿದ್ದ 2818 ಜನರು ಕೂಡ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದಿದ್ದಾರೆ. ಅವರ ಖಾತೆಗೆ ಹಣ ವರ್ಗಾವಣೆ ಆಗಿದ್ದು, ಕೇಂದ್ರ ಸರ್ಕಾರದ ಕಣ್ಗಾವಲು ಇರುವುದರಿಂದಾಗಿ ಇದು ಬಯಲಾಗಿದೆ.

    ಹಣ ವರ್ಗಾವಣೆ ನಂತರ ಆಧಾರ್ ಮತ್ತು ಬ್ಯಾಂಕ್ ಲಿಂಕ್​ಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸಿದೆ. ತೆರಿಗೆ ಪಾವತಿ ಮಾಡುತ್ತಿದ್ದವರ ದಾಖಲಾತಿಗಳನ್ನು ವೀಕ್ಷಿಸಿದೆ. ಪರಿಣಾಮ ಇಂಥವರು ರೈತರ ಹೆಸರಿನಲ್ಲಿಯೂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದಿರುವುದನ್ನು ಗಮನಿಸಿದೆ. ಖಾತೆಗೆ ಹಣ ಹಾಕಿರುವುದನ್ನು ಮರಳಿ ಪಡೆಯಲಿದೆ.

    ಉದ್ಯಮಿಗಳು, ಸರ್ಕಾರಿ ನೌಕರರು ಹೀಗೆ ಕೆಲವರು ತಮ್ಮ ಹೆಸರಿನಲ್ಲಿ ಜಮೀನು ಹೊಂದಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ಉತ್ಸುಕರಾಗಿ ಹೆಸರು ನೋಂದಾಯಿಸಿದ್ದಾರೆ. ಹಣ ವರ್ಗಾವಣೆಯಾದಾಗ ಖುಷಿಪಟ್ಟಿದ್ದ ಇವರಿಗೆಲ್ಲ ಈಗ ಕಸಿವಿಸಿ ಶುರುವಾಗಿದೆ.

    ಈ ಯೋಜನೆ ಜಾರಿಗೆ ಮುನ್ನ ಇದ್ದ ಜಮೀನು ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರವು ಪ್ರೋತ್ಸಾಹ ಧನವನ್ನು ವರ್ಗಾಯಿಸುತ್ತಿದೆ. 2019 ಫೆಬ್ರವರಿ 1ರ ನಂತರ ಜಮೀನು ಖರೀದಿ, ಹಸ್ತಾಂತರ, ಮಾರಾಟ ಮಾಡಿದವರು ಈ ಯೋಜನೆಯಿಂದ ಹೊರಗುಳಿಯಲಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಇಂಥ ರೈತರನ್ನು ಗುರುತಿಸಲಾಗಿಲ್ಲ. ಆದರೆ, ಆಧಾರ್ ಲಿಂಕ್ ‘ಮಿಸ್​ವ್ಯಾಚ್’ ಆದವರ ಹೆಸರು ಮರು ಪರಿಶೀಲನೆ ಪ್ರಕ್ರಿಯೆ ಜಾರಿಯಲ್ಲಿರಲಿದೆ.

    ಮೊದಲ ಕಂತಿನಲ್ಲಿ 1,26,123 ರೈತರಿಗೆ ಸಿಕ್ತು ಹಣ

    ಕೃಷಿ ಇಲಾಖೆ ಅಧಿಕಾರಿಗಳು ಧಾರವಾಡ ಜಿಲ್ಲೆಯಲ್ಲಿ 1,33,886 ರೈತರಿಂದ ಈ ಯೋಜನೆಗಾಗಿ ಅರ್ಜಿ ಸ್ವೀಕರಿಸಿದ್ದಾರೆ. ಅರ್ಜಿ ಪರಿಶೀಲಿಸಿ ಅಂತಿಮವಾಗಿ 1,31,275 ರೈತರನ್ನು ಆಯ್ಕೆ ಮಾಡಿದ್ದಾರೆ. ಮೊದಲ ಕಂತಿನಲ್ಲಿ 1,26,123 ರೈತರು, ಎರಡನೇ ಕಂತಿನಲ್ಲಿ 1,24,230, ಮೂರನೇ ಕಂತಿನಲ್ಲಿ 1,21,406, ನಾಲ್ಕನೇ ಕಂತಿನಲ್ಲಿ 1,10,458, 5ನೇ ಕಂತಿನಲ್ಲಿ 85,270 ರೈತರಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಡಿ. 25ರಂದು ಅಟಲ್​ಜೀ ಸ್ಮರಣೆ ದಿನ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಅಡಿ ಜಿಲ್ಲೆಯ 19,538 ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2000 ರೂ.ನಂತೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದಾರೆ.

    ಹೆಸರು ನೋಂದಾಯಿಸಿದ 4ನೇ ತಿಂಗಳಿಗೆ ಕಂತು

    ಹೆಸರು ನೋಂದಾಯಿಸಿದ ದಿನದಿಂದ 4ನೇ ತಿಂಗಳಿಗೆ ಮೊದಲನೇ ಕಂತಿನ ಹಣ ಪಾವತಿಸಲಾಗುತ್ತಿದೆ. ಅದೂ ಒಂದೇ ಕುಟುಂಬ ವ್ಯವಸ್ಥೆಯನ್ನು ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆ ಅಡಿ ಫಲಾನುಭವಿಗಳ ಹೆಸರು ನೋಂದಾಯಿಸಿಕೊಳ್ಳುತ್ತಿವೆ. ಕೇಂದ್ರ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ 2000 ರೂ.ನಂತೆ 6000 ರೂ. ಪಾವತಿಸಿದರೆ, ರಾಜ್ಯ ಸರ್ಕಾರ 2000 ರೂ.ನಂತೆ 4000 ರೂ. ಪಾವತಿಸುತ್ತಿದೆ. ಒಬ್ಬ ರೈತನ ಖಾತೆಗೆ ಎರಡೂ ಸರ್ಕಾರಗಳಿಂದ ವಾರ್ಷಿಕ 10 ಸಾವಿರ ರೂ. ನೇರವಾಗಿ ಪಾವತಿಯಾಗುತ್ತಿದೆ.

    ಮೊದಲ ಕಂತು ಪಡೆದ ತಾಲೂಕುವಾರು ರೈತರು

    * ಧಾರವಾಡ-29620

    * ಹುಬ್ಬಳ್ಳಿ-21347

    * ಕಲಘಟಗಿ-18385

    * ಕುಂದಗೋಳ-24019

    * ನವಲಗುಂದ-32752

    ಮೊದಲ ಹಾಗೂ ಇತರ ಕಂತುಗಳ ಫಲಾನುಭವಿಗಳ ಸಂಖೆಯಲ್ಲಿ ಏರಿಳಿತ ಆಗಬಹುದು. ಫಲಾನುಭವಿ ನೋಂದಾಯಿಸಿದ ದಿನಾಂಕದಿಂದ 4ನೇ ತಿಂಗಳಿಗೆ ಕಂತಿನ ಹಣವನ್ನು ಕೇಂದ್ರ ಸರ್ಕಾರವು ಪಾವತಿಸುತ್ತಿದೆ. ನಿರ್ದಿಷ್ಟವಾಗಿ ಅಂಕಿ-ಸಂಖ್ಯೆ ಇಡಲಾಗುತ್ತಿಲ್ಲ. ಆದರೆ, ಒಟ್ಟಾರೆ ಫಲಾನುಭವಿಗಳ ಸಂಖ್ಯೆಯನ್ನು ಹೇಳಬಹುದು.

    | ರಾಜಶೇಖರ ಬಿಜಾಪುರ

    ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts