More

    ನಕಲಿ ಪ್ರಮಾಣಪತ್ರ ಬಳಸಿ ನೇಮಕಾತಿ ಪಡೆದುಕೊಂಡಿದ್ದ ಸಂಚುಕೋರ

    ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಬಹಿರಂಗಗೊಂಡಿದ್ದ ಅನಾಮಿಕಾ ಶುಕ್ಲಾ ನೇಮಕಾತಿ ಹಗರಣದ ಪ್ರಮುಖ ಸಂಚುಕೋರ, ಮಧ್ಯವರ್ತಿ ಪುಷ್ಪೇಂದ್ರ ಹಾಗೂ ಆತನ ಇಬ್ಬರು ಸಹಚರರನ್ನು ವಿಶೇಷ ತನಿಖಾ ದಳದ (ಎಸ್​ಟಿಎಫ್​) ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

    ಪುಷ್ಪೇಂದ್ರ ಅಲ್ಲದೆ, ಈ ಹಗರಣಕ್ಕೆ ನೆರವಾದ ಜಸ್ವಂತ್​ ಹಾಗೂ ಮತ್ತೊಬ್ಬ ಬಂಧಿತರು. ಉತ್ತರ ಪ್ರದೇಶದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅನಾಮಿಕಾ ಶುಕ್ಲಾ ಎಂಬಾಕೆಯ ಪ್ರಮಾಣಪತ್ರವನ್ನು ನಕಲು ಮಾಡಿ ಆಕೆಯ ಹೆಸರಿನಲ್ಲೇ 25ಕ್ಕೂ ಹೆಚ್ಚು ಜನರಿಗೆ ಪುಷ್ಪೇಂದ್ರ ಕೆಲಸ ಕೊಡಿಸಿದ್ದ. ಇದಕ್ಕಾಗಿ ಆತ ಪ್ರತಿಯೊಬ್ಬರಿಂದಲೂ 2 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ.

    ಇಷ್ಟೇ ಅಲ್ಲ, ಸುಶಿಲ್​ ಎಂಬುವರ ಪ್ರಮಾಣಪತ್ರವನ್ನು ನಕಲು ಮಾಡಿದ್ದ ಪುಷ್ಪೇಂದ್ರ ಫರುಕ್ಕಾಬಾದ್​ ಕಾಲೇಜೊಂದರಲ್ಲಿ ಶಿಕ್ಷಕನಾಗಿ ನೇಮಕಾತಿ ಪಡೆದುಕೊಂಡಿದ್ದ. ಈತ 2010ರಿಂದಲೂ ಈ ಕೆಲಸದಲ್ಲಿ ತೊಡಗಿದ್ದ ಎಂದು ಎಸ್​ಟಿಎಫ್​ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

    ಪತ್ತೆಯಾಗಿದ್ದು ಹೇಗೆ?: ಅನಾಮಿಕಾ ಶುಕ್ಲಾ ನೇಮಕಾತಿ ಹಗರಣ ಬಯಲಾದ ನಂತರದಲ್ಲಿ ಪತ್ತೆಯಾಗಿದ್ದ ಮೂವರು ನಕಲಿ ಅನಾಮಿಕಾ ಶುಕ್ಲಾ ಹೆಸರಿನ ಶಿಕ್ಷಕರು ಪುಷ್ಪೇಂದ್ರ ನೆರವಿನಿಂದ ತಾವು ನೇಮಕಾತಿ ಪಡೆದುಕೊಂಡಿದ್ದಾಗಿ ಹೇಳಿದ್ದರು. ಇದಕ್ಕಾಗಿ 2 ಲಕ್ಷ ರೂ. ಕೊಟ್ಟಿದ್ದಾಗಿಯೂ ತಿಳಿಸಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸ್​ಟಿಎಫ್​ ಅಧಿಕಾರಿಗಳು ಪುಷ್ಪೇಂದ್ರನನ್ನು ಪತ್ತೆ ಮಾಡಿ ಹಿಡಿಯುವಲ್ಲಿ ಯಶಸ್ವಿಯಾದರು.

    ನೇಮಕಾತಿ ಪ್ರಕ್ರಿಯೆ ಹೇಗೆ?: ಶಿಕ್ಷಕರ ನೇಮಕಾತಿಯಲ್ಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ, ಅರ್ಹತೆ ಇದ್ದಾಗ್ಯೂ ಕೌನ್ಸೆಲಿಂಗ್​ ಬಾರದ ಅಭ್ಯರ್ಥಿಗಳ ಪ್ರಮಾಣಪತ್ರಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪುಷ್ಪೇಂದ್ರನಿಗೆ ದಾಟಿಸುತ್ತಿದ್ದರು. ಈ ಪ್ರಮಾಣಪತ್ರಗಳನ್ನು ನಕಲು ಮಾಡುತ್ತಿದ್ದ ಪುಷ್ಪೇಂದ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೆರವಿನಿಂದ ನೇಮಕಾತಿಗಳನ್ನು ಕೊಡಿಸುತ್ತಿದ್ದ.

    2017ರಲ್ಲಿ ನಿಜವಾದ ಅನಾಮಿಕಾ ಶುಕ್ಲಾ ಸುಲ್ತಾನಪುರ, ಬಸ್ತಿ, ಲಖನೌ, ಮಿರ್ಜಾಪುರ ಮತ್ತು ಜೌನ್​ಪುರ್​ನಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಕೆಜಿಬಿವಿಯಲ್ಲಿ ಶಿಕ್ಷಕಿಯಾಗಿ ನೇಮಕಾತಿ ಬಯಸಿ 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅನಾರೋಗ್ಯದ ಕಾರಣ ಅವರು ಕೌನ್ಸೆಲಿಂಗ್​ಗೆ ಹಾಜರಾಗಿರಲಿಲ್ಲ. ಇದನ್ನು ತಿಳಿದಿದ್ದ ಹರ್ದೋಯಿಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಗುಮಾಸ್ತರಾಗಿರುವ ರಾಮನಾಥ್​ ಪ್ರಧಾನ್​ ಮತ್ತು ಜೌನ್​ಪುರದ ಜಿಲ್ಲಾ ಸಂಚಾಲಕ ಅಧಿಕಾರಿಯಾಗಿರುವ ಆನಂದ್​ ಸಿಂಗ್​ ನೆರವಿನಿಂದ ಅನಾಮಿಕಾ ಸಿಂಗ್​ ಅವರ ಪ್ರಮಾಣಪತ್ರಗಳ ನಕಲು ಪುಷ್ಪೇಂದ್ರನ ಕೈಗೆ ತಲುಪಿದ್ದವು.

    ಇವನ್ನು ನಕಲು ಮಾಡಿದ ಆತ ಹಲವರಿಗೆ ಶಿಕ್ಷಕರಾಗಿ ನೇಮಕಾತಿ ಕೊಡಿಸಿದ್ದ. ಕೆಲದಿನಗಳ ಹಿಂದೆ ಆತ ಕಾನ್ಪುರ್​ ದೆಹಾತ್​ನಲ್ಲಿ ಬಬ್ಲಿ, ಅಲಿಗಢ ಕೆಜಿಬಿವಿಯಲ್ಲಿ ಮತ್ತೊಬ್ಬ ಯುವತಿ ಹಾಗೂ ಪ್ರಯಾಗ್​ರಾಜ್​ ಕೆಜಿಬಿವಿಯಲ್ಲಿ ಈ ಯುವತಿಯ ನಾದಿನಿ ಸರಿತಾ ಎಂಬುವರಿಗೆ ಕೆಲಸ ಕೊಡಿಸಿದ್ದ.

    ವಾರಾಣಸಿ, ಕಸ್​ಗಂಜ್​ ಮತ್ತು ಹರ್ದೊಯಿ ಕೆಜಿಬಿವಿಗಳಲ್ಲಿ ದೀಪ್ತಿ, ಸುಪ್ರಿಯಾ ಮತ್ತು ಅನಿತಾದೇವಿಯವರಿಗೆ ನೇಮಕಾತಿ ದೊರಕಿಸಿಕೊಟ್ಟಿದ್ದ.
    ಸುಶಿಲ್​ ಎಂಬುವರ ಪ್ರಮಾಣಪತ್ರ ನಕಲು ಮಾಡಿ ಪುಷ್ಪೇಂದ್ರ ಫರುಕ್ಕಾಬಾದ್​ ಕಾಲೇಜಿನಲ್ಲಿ ಶಿಕ್ಷಕನಾಗಿ ನೇಮಕಾತಿ ಪಡೆದುಕೊಂಡ ನಂತರದಲ್ಲಿ ರಾಮನಾಥ್​ ಪ್ರಧಾನ್​ ಪರಿಚಯವಾಗಿತ್ತು. ಈತನನ್ನು ಬಳಸಿಕೊಂಡು ರಾಮನಾಥ್​ ಪ್ರಧಾನ್​ ತನ್ನ ತಮ್ಮ ಜಸ್ವಂತ್​ಗೆ ಕನೌಜ್​ ಕಾಲೇಜಿನಲ್ಲಿ ವಿಭವ್​ಕುಮಾರ್​ ಹೆಸರಿನಲ್ಲಿ ಶಿಕ್ಷಕರಾಗಿ ನೇಮಕಾತಿ ಪಡೆದುಕೊಂಡಿದ್ದ.

    ರಾಮನಾಥ್​ ಪ್ರಧಾನ್​ 2019ರಲ್ಲಿ ಆನಂದ್​ ಸಿಂಗ್​ನನ್ನು ಪರಿಚಯಿಸಿದ್ದ. ಅಂದಿನಿಂದ ಮೂವರು ಸೇರಿ ಅಕ್ರಮ ನೇಮಕಾತಿಗಳಲ್ಲಿ ತೊಡಗಿಕೊಂಡಿದ್ದರು.

    ಚೀನಿ ದಾಳಿಯಲ್ಲಿ ಭಾರತದ ಸೇನಾಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts