More

    ಇಂದು ಕಿಂಗ್ಸ್ ಇಲೆವೆನ್ ಪಂಜಾಬ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

    ದುಬೈ: ದಿಗ್ಗಜ ಕೋಚ್‌ಗಳನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್-13ರ ಪಂದ್ಯದಲ್ಲಿ ಎದುರಾಗಲಿವೆ. ಐವರು ಕನ್ನಡಿಗರಿಂದ ಕೂಡಿರುವ ಕೆಎಲ್ ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬಹುತೇಕ ಕರ್ನಾಟಕದ ಕಂಪನ್ನೇ ಹೊಂದಿದೆ. ಯುವ ಆಟಗಾರರಿಂದ ತುಂಬಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಶುಭಾರಂಭದ ನಿರೀಕ್ಷೆಯಲ್ಲಿದೆ.
    ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ರಿಕಿ ಪಾಂಟಿಂಗ್ ಹಾಗೂ ಅನಿಲ್ ಕುಂಬ್ಳೆ ಮಾರ್ಗದರ್ಶನದಿಂದಲೂ ಈ ಮುಖಾಮುಖಿ ಕುತೂಹಲ ಮೂಡಿಸಿದೆ. ಜತೆಗೆ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್‌ಗೆ ವೈಯಕ್ತಿಕವಾಗಿ ನಾಯಕತ್ವ ಗುಣ ತೋರಿಸಲು ಈ ಲೀಗ್ ಉತ್ತಮ ವೇದಿಕೆಯಾಗಿದೆ.
    ಕಳೆದ 5 ಮುಖಾಮುಖಿಯಲ್ಲಿ 4ರಲ್ಲಿ ಕಿಂಗ್ಸ್ ಇಲೆವೆನ್ ತಂಡ ಜಯ ದಾಖಲಿಸಿದರೆ, 2019ರ ಕಡೇ ಮುಖಾಮುಖಿಯಲ್ಲಿ ಡೆಲ್ಲಿ ತಂಡ ಜಯ ದಾಖಲಿಸಿತ್ತು. ಇತಿಹಾಸ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಇದ್ದರೂ ಉಭಯ ತಂಡಗಳು ಬಹುತೇಕ ಹೊಸ ತಂಡವನ್ನೇ ಕಟ್ಟಿರುವುದರಿಂದ ಈ ಪಂದ್ಯದ ಫೇವರಿಟ್ ಹೇಳುವುದು ಕಷ್ಟಕರ. ಅರಬ್ ನಾಡಿನಲ್ಲಿ ಸ್ಪಿನ್ ಬೌಲರ್‌ಗಳು ಪ್ರಮುಖ ಪಾತ್ರವಹಿಸುವ ಸಾಧ್ಯತೆಗಳಿದ್ದು, ಈ ವಿಭಾಗಕ್ಕೆ ಎಲ್ಲ ತಂಡಗಳು ಹೆಚ್ಚಿನ ಒತ್ತು ನೀಡುತ್ತಿವೆ.

    ಮುಖಾಮುಖಿ: 24
    ಡೆಲ್ಲಿ: 14
    ಪಂಜಾಬ್: 10
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಟೀಮ್ ನ್ಯೂಸ್:
    ಕಿಂಗ್ಸ್ ಇಲೆವೆನ್ ಪಂಜಾಬ್: ಹೊಸ ನಾಯಕ, ಹೊಸ ಕೋಚ್ ಮಾರ್ಗದರ್ಶನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್ನದ್ಧವಾಗಿದೆ. ಆರಂಭಿಕರಾಗಿ ರಾಹುಲ್ ಸ್ವಾಭಾವಿಕ ಆಯ್ಕೆಯಾಗಿದ್ದು, ಇವರೊಂದಿಗೆ ಕ್ರಿಸ್ ಗೇಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ಕ್ವಾರಂಟೈನ್‌ನಲ್ಲಿರುವುದರಿಂದ ನಿಕೋಲಸ್ ಪೂರನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಮ್ಯಾಕ್ಸ್‌ವೆಲ್ ಆಯ್ಕೆಗೆ ಲಭ್ಯರಾದರೆ, ಪೂರನ್ ಅಥವಾ ಗೇಲ್ ಇಬ್ಬರಲ್ಲಿ ಒಬ್ಬರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರಬ್ ನಾಡಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆಗಳಿರುವುದರಿಂದ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ತಂಡದಲ್ಲಿರುವ ಪಂಚ ಕನ್ನಡಿಗರ ಪೈಕಿ ರಾಹುಲ್, ಮಯಾಂಕ್, ಗೌತಮ್ ಆಡುವುದು ಖಚಿತವಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ಸರ್ಫಾಜ್ ಖಾನ್ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕಲಾಗುತ್ತದೆ. ಮತ್ತೋರ್ವ ಕನ್ನಡಿಗ ಜೆ.ಸುಚಿತ್‌ಗೆ ಅವಕಾಶ ಲಭಿಸುವ ಸಾಧ್ಯತೆ ಕಡಿಮೆ ಇದೆ.
    ಸಂಭಾವ್ಯ ತಂಡ: ಕೆಎಲ್ ರಾಹುಲ್ (ವಿ.ಕೀ), ಕ್ರಿಸ್ ಗೇಲ್/ನಿಕೋಲಸ್ ಪೂರನ್, ಮಯಾಂಕ್ ಅಗರ್ವಾಲ್, ಗ್ಲೆನ್ ಮ್ಯಾಕ್ಸ್‌ವೆಲ್, ರ್ಸ್ರಾಜ್ ಖಾನ್/ಕರುಣ್ ನಾಯರ್, ಮಂದೀಪ್ ಸಿಂಗ್, ಕ್ರಿಸ್ ಜೋರ್ಡನ್, ಕೆ.ಗೌತಮ್, ಮೊಹಮದ್ ಶಮಿ, ಮುಜೀಬ್ ಉರ್ ರೆಹಮಾನ್, ರವಿ ಬಿಷ್ಣೋಯಿ.

    *ಡೆಲ್ಲಿ ಕ್ಯಾಪಿಟಲ್ಸ್: ತಂಡದಲ್ಲಿ ಭಾರತದ 7 ಅಂತಾರಾಷ್ಟ್ರೀಯ ಆಟಗಾರರಿರುವುದು ಪ್ಲಸ್ ಪಾಯಿಂಟ್. ಭಾರತೀಯ ಆಟಗಾರರೇ ತಂಡಕ್ಕೆ ಗಟ್ಟಿಯಾಗಿದ್ದು, ವಿದೇಶಿ ಆಟಗಾರರ ಪೈಕಿ ರಬಾಡ ಹೊರತುಪಡಿಸಿ ಉಳಿದ 3 ಸ್ಥಾನಕ್ಕೆ ಪ್ರಯೋಗ ಮಾಡಬಹುದು. ಶಿಖರ್ ಧವನ್ ಜತೆಗೆ ಪೃಥ್ವಿ ಷಾ ಅಥವಾ ಅಜಿಂಕ್ಯ ರಹಾನೆ ನಡುವೆ ಇನಿಂಗ್ಸ್ ಆರಂಭಿಸಲು ಪೈಪೋಟಿ ಇದೆ. ವೇಗದ ಬೌಲಿಂಗ್‌ನಲ್ಲಿ ಇಶಾಂತ್, ರಬಾಡ ಚೆಂಡು ಹಂಚಿಕೊಂಡರೆ, ಕೀಮೊ ಪೌಲ್, ಅನ್ರಿಚ್ ನೋರ್ಜೆ, ಡೇನಿಯಲ್ ಸ್ಯಾಮ್ಸ್ ಮೂವರಲ್ಲಿ ಒಬ್ಬರು ಕಣಕ್ಕಿಳಿಯಲಿದ್ದಾರೆ. ಬಿಗ್‌ಬಾಷ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಸ್ಯಾಮ್ಸ್‌ಗೆ ಮಣೆ ಹಾಕಬಹುದು. ಅಶ್ವಿನ್, ಅಮಿತ್ ಮಿಶ್ರಾ ಹಾಗೂ ಅಕ್ಷರ್ ಪಟೇಲ್ ಒಳಗೊಂಡ ಬಲಿಷ್ಠ ಸ್ಪಿನ್ ವಿಭಾಗದ ಹೊಂದಿದೆ. ಅಶ್ವಿನ್, ಅಕ್ಷರ್ ಪಟೇಲ್ ಜೋಡಿ ತಂಡದ ಮೊದಲ ಆಯ್ಕೆಯಾಗಿದ್ದು, ಮಿಶ್ರಾಗೆ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ.
    ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಷಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಶಿಮ್ರೋನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿನಿಸ್, ಅಕ್ಷರ್ ಪಟೇಲ್, ಆರ್.ಅಶ್ವಿನ್, ಡೇನಿಯಲ್ ಸ್ಯಾಮ್ಸ್, ಇಶಾಂತ್ ಶರ್ಮ, ಕಗಿಸೊ ರಬಾಡ.

    3: ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ತಂಡವೊಂದಕ್ಕೆ ನಾಯಕತ್ವ ವಹಿಸುತ್ತಿರುವ ಕರ್ನಾಟಕದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಆರ್‌ಸಿಬಿ ತಂಡಕ್ಕೆ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ (ರಾಜಸ್ಥಾನಕ್ಕೂ) ನಾಯಕರಾಗಿದ್ದರು.

    *ಪಿಚ್ ಹೇಗಿದೆ?
    ಮಂದಗತಿಯ ಪಿಚ್ ಇದಾಗಿದ್ದು, ರನ್ ಗಳಿಸುವುದು ಸ್ವಲ್ಪ ಕಷ್ಟಕರ. ಅದರಲ್ಲೂ ಚೇಸಿಂಗ್ ಮಾಡುವ ತಂಡಕ್ಕೆ ಬ್ಯಾಟಿಂಗ್ ಸುಲಭವಲ್ಲ. ಪಂದ್ಯ ಸಾಗುತ್ತಿದ್ದಂತೆ ಪಿಚ್ ಮೇಲೆ ತೇವಾಂಶ ಕೂಡ ಅಧಿಕಗೊಳ್ಳುತ್ತದೆ. ಇದು ಎರಡನೇ ಇನಿಂಗ್ಸ್ ಬ್ಯಾಟಿಂಗ್‌ಗೆ ಕೊಂಚ ಹಿನ್ನಡೆಯುಂಟು ಮಾಡಲಿದೆ.

    *138: ದುಬೈನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಸರಾಸರಿ ಮೊತ್ತ 138 (ಕಳೆದ 4 ಪಂದ್ಯಗಳಲ್ಲಿ).

    *3: ಕಳೆದ 4 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೂರು ಬಾರಿ ಜಯಿಸಿದ್ದು, ಒಮ್ಮೆ ಮಾತ್ರ ಚೇಸಿಂಗ್ ಮಾಡಿದ ತಂಡ ಗೆದ್ದಿದೆ.

    *ಕಳೆದ ಬಾರಿ ನಾಯಕರ ಸಾಧನೆ
    ಕೆಎಲ್ ರಾಹುಲ್: ಕಳೆದ ಬಾರಿ ಆಡಿದ 13 ಇನಿಂಗ್ಸ್‌ಗಳಿಂದ ರಾಹುಲ್ ಸರಾಸರಿ 51 ರಂತೆ 562 ರನ್ ಪೇರಿಸಿದ್ದರು. ಜತೆಗೆ 6 ಅರ್ಧಶತಕಗಳು ಸೇರಿದ್ದವು.
    ಶ್ರೇಯಸ್ ಅಯ್ಯರ್: 16 ಪಂದ್ಯಗಳಿಂದ 3 ಅರ್ಧಶತಕ ಸೇರಿದಂತೆ 463 ರನ್ ಪೇರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts