More

    ಕೆಎಚ್‌ಬಿ ಕಾಲನಿಗೆ ಮೂಲ ಸೌಕರ್ಯ ಒದಗಿಸಲು ನಿವಾಸಿಗಳ ಆಗ್ರಹ

    ರಾಣೆಬೆನ್ನೂರ: ಇಲ್ಲಿಯ ಮಾಗೋಡ ರಸ್ತೆಯ ಕೆಎಚ್‌ಬಿ ಕಾಲನಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಗೃಹ ಮಂಡಳಿಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಬಡಿಗೇರ ಎಚ್ಚರಿಸಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಮೊದಲ ಹಂತದಲ್ಲಿ ಸುಮಾರು 538 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ಈವರೆಗೂ ಮೂಲ ಸೌಲಭ್ಯ ಕಂಡಿಲ್ಲ. ಆರಂಭದಲ್ಲಿ ಆದ ರಸ್ತೆಗಳು ಇಂದು ಕಿತ್ತುಹೋಗಿವೆ. ಒಳಚರಂಡಿಗಳು ಬಾಯಿಬಿಟ್ಟಿವೆ. ನೀರಿನ ಸಮಸ್ಯೆ ಹೆಚ್ಚಾಗಿದೆ. ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ಕುರಿತು ಎಲ್ಲ ಹಂತದ ಅಧಿಕಾರಿಗಳನ್ನು ಭೇಟಿಯಾದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
    15 ವರ್ಷಗಳ ಹಿಂದೆ ನಿರ್ಮಾಣವಾದ ಈ ಕಾಲನಿಯಲ್ಲಿ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಒಳಚರಂಡಿಯ ಸೌಲಭ್ಯ ಅಗತ್ಯವಾಗಿದೆ. ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸಿರುವ ಒಳಚರಂಡಿಗಳು ಒಡೆದುಕೊಂಡು ಗಬ್ಬು ವಾಸನೆ ಹೊರಡುತ್ತಿದೆ. ಇನ್ನು ನೀರಿಗಾಗಿ ಬೋರ್‌ವೆಲ್ 500ಅಡಿ ಕೊರೆದರೂ ನೀರು ದೊರಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನೀರು ಪೂರೈಕೆ ಮಾಡುವ ಉದ್ದೇಶದಿಂದ ವಾಟರ್ ಟ್ಯಾಂಕ್ ಕಟ್ಟಿದ್ದು, ಬಳಕೆಯಾಗಿಲ್ಲ. ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕಗಳು ತುಕ್ಕು ಹಿಡಿಯುವ ಹಂತಕ್ಕೆ ಬಂದು ನಿಂತಿವೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರ ಮಾಡುವುದೇ ದುರಸ್ತರವಾಗಿದೆ. ಅಲ್ಲಲ್ಲಿ ಮುಳ್ಳುಕಂಟಿಗಳು ಬೆಳೆದು ವಿಷಜಂತುಗಳ ವಾಸವಾಗಿ ನಿವಾಸಿಗಳು ಓಡಾಡಲು ಭಯಪಡುವಂತಾಗಿದೆ. ಹೀಗಾಗಿ ಇಲ್ಲಿನ ಮೂಲಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸಿದರು.
    ಪ್ರಮುಖರಾದ ವೀರುಪಾಕ್ಷಪ್ಪ ಅರವಂಟಗಿ, ಅಶೋಕ ಸೂರಗೊಂಡರ, ಲಿಂಗರಾಜ ಹನಗೋಡಿ, ಅಶೋಕ ರೆಡ್ಡಿ, ಮಹಾಲಿಂಗಯ್ಯ ಸಾಲಿಮಠ, ಎಸ್.ಬಿ. ಕುರುವತ್ತಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts