More

    ಮತ್ತೆ ಮುಂದೋಯ್ತಾ ಕೆಜಿಎಫ್? ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು ಗೊಂದಲದಲ್ಲಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕಳೆದ ವರ್ಷ ಅಕ್ಟೋಬರ್ 23ಕ್ಕೆ ‘ಕೆಜಿಎಫ್ 2’ ಬಿಡುಗಡೆ ಎಂದು ಘೋಷಿಸಲಾಗಿತ್ತು. ಆದರೆ, ಲಾಕ್​ಡೌನ್​ನಿಂದ ಅಷ್ಟರಲ್ಲಿ ಚಿತ್ರೀಕರಣ ಮುಗಿಯದ ಕಾರಣ, ಚಿತ್ರದ ಬಿಡುಗಡೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಕೊನೆಗೆ ಈ ವರ್ಷ ಜುಲೈ 16ಕ್ಕೆ ಬಿಡುಗಡೆ ಎಂದು ಘೋಷಿಸಲಾಯಿತು.

    ಕುತೂಹಲ ಮತ್ತು ನಿರೀಕ್ಷೆಯಿಂದ ಚಿತ್ರ ಬಿಡುಗಡೆಗೆ ಕಾದಿರುವ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಚಿತ್ರದ ಬಿಡುಗಡೆಯನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆಯಂತೆ. ಹೌದು, ಜುಲೈ 16ಕ್ಕೆ ಬಿಡುಗಡೆಯಾಗಬೇಕಿದ್ದ ‘ಕೆಜಿಎಫ್ 2’ ಮತ್ತೆ ಮುಂದಕ್ಕೆ ಹೋಗಿದೆ ಎಂಬ ಸುದ್ದಿಯೊಂದು ಬಂದಿದೆ. ಆದರೆ, ಚಿತ್ರತಂಡದವರು ಮಾತ್ರ ಇದುವರೆಗೂ ಅಧಿಕೃತ ಘೋಷಣೆ ಹೊರಡಿಸಿಲ್ಲ.

    ಈ ತರಹದ್ದೊಂದು ಸುದ್ದಿ ಕೇಳಿಬರುವುದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, ಚಿತ್ರದ ಬಿಡುಗಡೆಗೆ ಇನ್ನು 70 ದಿನಗಳಷ್ಟೇ ಇದೆ. ಈ 70 ದಿನಗಳಲ್ಲಿ ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿ, ಪ್ರಮೋಷನ್ ಮಾಡುವುದು ಕಷ್ಟ ಎಂದು ಹೇಳಲಾಗುತ್ತಿದೆ. ಒಂದು ಪಕ್ಷ, ಕೆಲಸಗಳೆಲ್ಲ ಮುಗಿದರೂ ಚಿತ್ರದ ಬಿಡುಗಡೆ ಆಗುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ, ಕಳೆದೊಂದು ತಿಂಗಳಿನಿಂದ ಚಿತ್ರಪ್ರದರ್ಶನ ನಿಂತಿದ್ದು, ಯಾವಾಗ ಪ್ರಾರಂಭವಾಗುತ್ತದೆ ಎಂಬ ಅನಿಶ್ಚಿತತೆ ಇದ್ದೇ ಇದೆ. ಮುಂದಿನ ಎರಡು ತಿಂಗಳೊಳಗೆ ಚಿತ್ರ ಪ್ರದರ್ಶನ ಶುರುವಾದರೂ, ಶೇ. 100 ರಷ್ಟು ಹಾಜರಾತಿಗೆ ಸರ್ಕಾರ ಅನುಮತಿ ಕೊಡುವುದು ಸಂಶಯವಿದೆ.

    ಇದನ್ನೆಲ್ಲ ಗಣನೆಗೆ ತೆಗೆದುಕೊಂಡಿರುವ ಚಿತ್ರತಂಡದವರು, ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿರುವ ಸುದ್ದಿ ಇದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ನೋಡಿಕೊಂಡು, ದಸರಾ ಅಥವಾ ದೀಪಾವಳಿ ಹಬ್ಬದ ಸಮಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ ಎನ್ನಲಾಗುತ್ತಿದೆ.

    ಆರ್​ಆರ್​ಆರ್, ಪುಷ್ಪ ಮುಂದಕ್ಕೆ

    ಬರೀ ಕನ್ನಡದ ‘ಕೆಜಿಎಫ್ 2’ ಮಾತ್ರವಲ್ಲ, ತೆಲುಗಿನ ‘ಪುಷ್ಪ’ ಮತ್ತು ‘ಆರ್​ಆರ್​ಆರ್’ ಚಿತ್ರಗಳ ಬಿಡುಗಡೆ ಸಹ ಮುಂದಕ್ಕೆ ಹೋಗಲಿದೆ. ಈ ಹಿಂದೆ ‘ಪುಷ್ಪ’ ಚಿತ್ರವು ಆಗಸ್ಟ್ 13ಕ್ಕೆ ಮತ್ತು ‘ಆರ್​ಆರ್​ಆರ್’ ಚಿತ್ರವು ಅಕ್ಟೋಬರ್ 13ಕ್ಕೆ ಬಿಡುಗಡೆಯಾಗುವುದಾಗಿ ಹೇಳಿಕೊಂಡಿತ್ತು. ಮೊದಲಿಗೆ, ಎರಡೂ ಚಿತ್ರಗಳ ಚಿತ್ರೀಕರಣ ಮುಗಿದಿಲ್ಲ. ಚಿತ್ರೀಕರಣ ಮುಗಿದರೂ, ಹೇಳಿದ ದಿನಾಂಕದಂದು ತರಾತುರಿಯಿಂದ ಚಿತ್ರ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುವುದು ಕಷ್ಟ. ಹಾಗಾಗಿ, ‘ಪುಷ್ಪ’ ಚಿತ್ರವನ್ನು ಅಕ್ಟೋಬರ್​ಗೆ ಮತ್ತು ‘ಆರ್​ಆರ್​ಆರ್’ ಚಿತ್ರವನ್ನು ಮುಂದಿನ ವರ್ಷದ ಸಂಕ್ರಾಂತಿಗೆ ಮುಂದೂಡುವುದಕ್ಕೆ ಎರಡೂ ಚಿತ್ರತಂಡಗಳು ಯೋಚಿಸಿವೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts