More

    ಶಿರಾ ಉಪಸಮರದಲ್ಲಿ ಮೊಳಗಿದ ಕಾಂಗ್ರೆಸ್ ಕಹಳೆ

    ಶಿರಾ: ಶಿರಾ ಉಪಸಮರದಲ್ಲಿ ಕಾಂಗ್ರೆಸ್ ಕಹಳೆ ಮೊಳಗಿದೆ. ಬೈ ಎಲೆಕ್ಷನ್‌ನಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಡಾ.ಜಿ.ಪರಮೇಶ್ವರ್ ಹಾಗೂ ಉಪ ಉಸ್ತುವಾರಿ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ.

    ಕ್ಷೇತ್ರದಲ್ಲಿ ನಿರ್ಣಾಯಕರೆನಿಸಿರುವ ‘ಕಾಡುಗೊಲ್ಲರ’ ಮತಬ್ಯಾಂಕ್‌ಗೆ ಬಿಜೆಪಿ ಲಗ್ಗೆಯಿಟ್ಟಿದ್ದು, ಕಾಂಗ್ರೆಸ್ ಆರಂಭದಲ್ಲೇ ಆ ಸಮುದಾಯದ ಮತಗಳತ್ತ ಟಾರ್ಗೆಟ್ ಮಾಡಿರುವುದು ವಿಶೇಷವೆನಿಸಿದೆ.

    ನಗರದ ಕಾಡುಗೊಲ್ಲ ಸಮುದಾಯದ ಮುದ್ದುಕೃಷ್ಣ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕಾಡುಗೊಲ್ಲ ಸಮಾಜದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಪರಮೇಶ್ವರ್, ಉಪಚುನಾವಣೆಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿ ತಂತ್ರಗಾರಿಕೆ ಮಾಡಿರುವ ಬಿಜೆಪಿ ಸರ್ಕಾರವು ನಿಗಮಕ್ಕೆ ನಯಾಪೈಸೆ ನೀಡಿಲ್ಲ. ಕಾಂಗ್ರೆಸ್ ಎಂದಿಗೂ ಕಾಡಗೊಲ್ಲ ಸಮಾಜದ ಜತೆ ಇರಲಿದೆ ಎಂಬು ಭರವಸೆಯಿತ್ತರು.

    ಜಿಲ್ಲೆಯಲ್ಲಿ ಕಾಡುಗೊಲ್ಲ ಸಮಾಜಕ್ಕೆ ಎರಡು ಬಾರಿ ಜಿಪಂ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ವಿಧಾನಪರಿಷತ್‌ಗೆ ಚಿತ್ರದುರ್ಗದ ಜಯಮ್ಮ ಎನ್ನುವ ಸಾಮಾನ್ಯ ಮಹಿಳೆಯನ್ನು ಆಯ್ಕೆ ಮಾಡಿದ ಹೆಗ್ಗಳಿಗೆ ನಮ್ಮದು. ಜಯಚಂದ್ರ ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಈ ಸಮುದಾಯಕ್ಕೆ ಹಾಸ್ಟೆಲ್ ನಿರ್ಮಿಸಲು ನಗರದ ಪ್ರಮುಖ ಸ್ಥಳದಲ್ಲಿ ಜಮೀನು ನೀಡಿದ್ದಲ್ಲದೆ ಅನುದಾನ ನೀಡಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಕಾಡುಗೊಲ್ಲ ಸಮುದಾಯ ಮಾತು ನೀಡಿದ್ದೇ ಆದರೆ, ಕೊಟ್ಟ ಮಾತು ಉಳಿಸಿಕೊಳ್ಳುವ ನಿಷ್ಠಾವಂತ ಸಮುದಾಯ. ಹಾಗಾಗಿ, ಪಕ್ಷವನ್ನು ಬೆಂಬಲಿಸುವ ನಂಬಿಕೆ ಇದೆ ಎಂದು ತಿಳಿಸಿದರು.

    ಕೆಳಸ್ತರದ ಸಮುದಾಯ ಹಾಗೂ ಶೋಷಿತ ಸಮುದಾಯಗಳಿಗೆ ಧ್ವನಿಯನ್ನು ಕೊಟ್ಟ ಹಾಗೂ ಸಾಮಾಜಿಕ ಶಕ್ತಿಯನ್ನು ದಿ.ದೇವರಾಜ್ ಅರಸು ನೀಡಿದರು. ತದನಂತರ ಅಹಿಂದಾ ವರ್ಗಕ್ಕೆ ಶಕ್ತಿ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ಪರಮೇಶ್ವರ್ ಬಣ್ಣಿಸಿದರು. ಕಾಂಗ್ರೆಸ್ ತಳಸಮುದಾಯಕ್ಕೆ ಮೀಸಲಾತಿ ನೀಡಿದರೆ, ಈ ಬಿಜೆಪಿ ಸರ್ಕಾರ ಮೀಸಲಾತಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹರಿಹಾಯ್ದರು.

    ರಾಜ್ಯದ ಬಹುದೊಡ್ಡ ಅನ್ನಭಾಗ್ಯ ಯೋಜನೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರ. ಕೋವಿಡ್ ಸಂಕಷ್ಟದಲ್ಲಿ ಇಂತಹ ಯೋಜನೆ ಇರದಿದ್ದರೆ ಜನಸಾಮಾನ್ಯರ ಕಷ್ಟವನ್ನು ಊಹಿಸಲು ಅಸಾಧ್ಯವಾಗಿತ್ತು. ಕಳೆದ ಬಾರಿ ಜಯಚಂದ್ರ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದ ಕಲ್ಕೆರೆ ರವಿಕುಮಾರ್, ಕುಂಚಿಟಗ ಸಂಘದ ಅಧ್ಯಕ್ಷ ತ್ಯಾಗರಾಜು ಸೇರಿದಂತೆ ಅನೇಕರು ಪಕ್ಷವನ್ನು ಸೇರಿರುವುದು ಗೆಲುವಿನ ಶುಭಸೂಚನೆ ಎಂದರು.

    ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಸಂಘರ್ಷ ತಂದಿಟ್ಟು ಮತಕೇಳುವ ಅಭ್ಯಾಸ ಬಿಜೆಪಿಯದ್ದು. ಆದರೆ, ಕಾಂಗ್ರೆಸ್ ಯಾವತ್ತೂ ಅಭಿವೃದ್ಧಿಯ ಪರ ಎಂದು ಮಾಜಿ ಸಂಸದ ಚಂದ್ರಪ್ಪ ಹೇಳಿದರು.
    ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಪಾವಗಡ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಷಫೀ ಅಹಮದ್, ಹೊಳಲ್ಕೆರೆ ಮಾಜಿ ಶಾಸಕ ಉಮಾಪತಿ, ಜಿಲ್ಲಾ ಕಾರ್ಯಾಧ್ಯಕ್ಷ ಸಾಸಲು ಸತೀಶ್, ಜಿಲ್ಲಾ ಕಾಡುಗೊಲ್ಲ ಸಂಘದ ಅಧ್ಯಕ್ಷ ಚಂದ್ರಶೇಖರ್ ಗೌಡ, ಕಲ್ಕೆರೆ ರವಿಕುಮಾರ್, ಕುಂಚಿಟಿಗರ ಸಂಘದ ಅಧ್ಯಕ್ಷ ತ್ಯಾಗರಾಜು, ಕಾರ್ಯದರ್ಶಿ ಗುಳಿಗೇನಹಳ್ಳಿ ನಾಗರಾಜು, ಹಾರೋಗೆರೆ ಮಹೇಶ್, ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಶ್ರೀನಿವಾಸ್‌ಬಾಬು, ಮುಖಂಡರಾದ ಸೋರೆಕುಂಟೆ ಸತ್ಯನಾರಾಯಣ್, ಎನ್.ಸಿ.ದೊಡ್ಡಯ್ಯ, ಜಿಪಂ ಸದಸ್ಯ ಬೊಮ್ಮಣ್ಣ, ತಾಪಂ ಸದಸ್ಯರಾದ ಮಂಜುಳಾಬಾಯಿ, ಮಂಜುನಾಥ್, ಪುಟ್ಟರಾಜು, ಮುಸುಗಲೋಟಿ ತಿಪ್ಪೇಸ್ವಾಮಿ, ಚನ್ನನಕುಂಟೆ ನಾಗರಾಜು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ, ಲಕ್ಷ್ಮೀದೇವಮ್ಮ, ವಕೀಲ ಸಿದ್ದಪ್ಪ ಇದ್ದರು.

    ಸದ್ದು ಮಾಡುತ್ತಿದೆ 78ರ ಮಾಡೆಲ್ !: ಶಿರಾ ಬೈಎಲೆಕ್ಷನ್‌ನಲ್ಲಿ 78ರ ಮಾಡೆಲ್ ಹೆಚ್ಚು ಸದ್ದು ಮಾಡುತ್ತಿದೆ. ಈ ಇಂಜಿನ್ ಇನ್ನೂ ಗಟ್ಟಿಯಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹಾಸ್ಯ ಚಟಾಕಿ ಹಾರಿಸಿದರು. ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತುತ್ತಿರುವ ಟಿಬಿಜೆ ಆರೋಗ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಯುವಕರು ನಾಚುವಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು. ಇತ್ತೀಚೆಗೆ ಕೆಪಿಸಿಸಿ ಸಭೆಯಲ್ಲು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ‘ಏ ಜಯಣ್ಣ 78ರ ಮಾಡೆಲ್ ಕಣಯ್ಯ.. ಬದಲಾಗಬೇಕು. ಈಗಿನ ಕಾಲದ ಯುವಕರನ್ನು ಜತೆಗೆ ಕರೆದುಕೊಂಡು ಚುನಾವಣೆ ನಡೆಸಬೇಕು. ಕ್ಷೇತ್ರದಲ್ಲಿ ಎಲ್ಲರನ್ನೂ ಸರಿಮಾಡಿಕೊಳ್ಳಬೇಕು ಎಂದು ಸೂಚಿಸಿದ್ದರು. ಗಾಳಿಗಂಟಲು: ಜಿ.ಜೆ.ರಾಜಣ್ಣ ಅವರನ್ನು ಗಾಳಿಗಂಟಲು ರಾಜಣ್ಣ ಎಂದು ಹೇಳುವ ಮೂಲಕ ಕೆಎನ್ನಾರ್‌ಗೆ ಮಾತಿನಲ್ಲೇ ತಿವಿದ ಪರಮೇಶ್ವರ್, ರಾಜಣ್ಣ ಎನ್ನುವವರೇ ಅಷ್ಟು . ನೀನು(ಕೆಎನ್ನಾರ್) ದೊಡ್ಡ ಗಾಳಿಗಂಟಲು. ಜಿ.ಜೆ.ರಾಜಣ್ಣ ಸಣ್ಣ ಗಾಳಿಗಂಟಲು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

    ಕಳ್ಳಂಬೆಳ್ಳ, ಶಿರಾ, ಮದಲೂರು ಕೆರೆಗೆ ಹೇಮಾವತಿ ನೀರು ಹರಿಯುವ ಯೋಜನೆಗೆ ಅಪ್ಪ ಅಮ್ಮ ಕೂಡ ಟಿ.ಬಿ.ಜಯಚಂದ್ರ ಅವರೇ. ಕಳೆದ ಬಾರಿ ಸಣ್ಣಪುಟ್ಟ ಬಿನ್ನಾಭಿಪ್ರಾಯದಿಂದ ಚುನಾವಣಾ ಶಿರಾ, ಮಧುಗಿರಿ ಕ್ಷೇತ್ರದಲ್ಲಿ ಸೋಲುಂಡಿದ್ದೇವೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಈ ಶಿರಾ ಉಪಚುನಾವಣೆ ಮಾದರಿಯಾಗಲಿದೆ.
    ಡಾ.ಜಿ.ಪರಮೇಶ್ವರ್ ಮಾಜಿ ಡಿಸಿಎಂ

    ಸರ್ಕಾರದಲ್ಲಿ ವಯೋವೃದ್ಧರ ಪಿಂಚಣಿ ನೀಡಲು ಹಣವಿಲ್ಲದೆ ಪರದಾಡುತ್ತಿರುವ ಯಡಿಯೂರಪ್ಪ ಸರ್ಕಾರಕ್ಕೆ ಹೆಚ್ಚು ದಿನ ಭವಿಷ್ಯವಿಲ್ಲ. ಬಿಜೆಪಿಯ ಅಂತರಿಕ ಚಟುವಟಿಕೆ ಗಮನಸಿದರೆ ಗೊತ್ತಾಗುತ್ತದೆ.
    ಕೆ.ಎನ್.ರಾಜಣ್ಣ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts