More

    ಕೆಮುಂಡೇಲಲ್ಲಿ ತ್ಯಾಜ್ಯ ಘಟಕ

    ಹೇಮನಾಥ ಪಡುಬಿದ್ರಿ
    ಎಲ್ಲೂರು ಗ್ರಾಪಂ ವ್ಯಾಪ್ತಿಯ ಕೆಮುಂಡೇಲು ಉಳ್ಳಾಲ ಕಾಡಿನ 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕಾಪು ಪುರಸಭೆ ಘನತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಅವಧಿಗೆ ಮೊದಲೇ ಪೂರ್ಣವಾಗುವ ನಿರೀಕ್ಷೆಯಿದೆ.

    7200 ವಸತಿಗೃಹ ಹೊಂದಿರುವ ಕಾಪು ಪುರಸಭೆ ವ್ಯಾಪ್ತಿಯಲ್ಲಿ ದಿನನಿತ್ಯ 5 ಟನ್ ಹಸಿ ಹಾಗೂ 5 ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಸೂಕ್ತ ಸರ್ಕಾರಿ ಜಮೀನು ಕೊರತೆಯಿಂದ ಘನತ್ಯಾಜ್ಯ ಸಂಸ್ಕರಣೆಗಾಗಿ ಜಿಲ್ಲಾಡಳಿತದಿಂದ ನಾಲ್ಕು ವರ್ಷಗಳ ಹಿಂದೆ ಎಲ್ಲೂರಿನಲ್ಲಿ 10 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಅಲ್ಲಿ ಘಟಕ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯ ಮೆಟ್ಟಿಲೇರಿದ ಪರಿಣಾಮ ಯೋಜನೆ ಅನುಷ್ಠಾನ ವಿಳಂಬವಾಗಿತ್ತು. 2019ರಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ 6.36 ಕೋಟಿ ರೂ. ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಲ್ಲಿನ 10 ಎಕರೆ ಪ್ರದೇಶಕ್ಕೆ ಈಗಾಗಲೇ ಆವರಣ ಗೋಡೆ ನಿರ್ಮಿಸಲಾಗಿದೆ. ವೇಬ್ರಿಡ್ಜ್, ಕೊಳಚೆ ನೀರು ಸಂಗ್ರಹಣಾ ಎರಡು ಬೃಹತ್ ತೊಟ್ಟಿ, ಘಟಕದೊಳಗೆ ಕಾಂಕ್ರೀಟ್ ರಸ್ತೆ ಸಹಿತ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡಿದ್ದು, ತ್ಯಾಜ್ಯ ಸಂಗ್ರಹಿಸಿ ಪ್ರತ್ಯೇಕಿಸುವ ಶೆಡ್ ಕಾಮಗಾರಿ ಅಂತಿಮ ಹಂತದಲ್ಲಿದೆ. 2021 ಮೇ ಅಂತ್ಯದಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಗುತ್ತಿಗೆದಾರರಿಗೆ ಕಾಲಾವಕಾಶ ನೀಡಿದ್ದು, ಅವಧಿಗೆ ಮೊದಲೇ ಕಾಮಗಾರಿ ಮುಕ್ತಾಯಗೊಳಿಸುವ ಇರಾದೆಯನ್ನು ಅವರು ಹೊಂದಿದ್ದಾರೆ.

    ಎರಡು ಟನ್ ಸಾಮರ್ಥ್ಯದ ಯಂತ್ರ: ಕಾಪು ಪುರಸಭೆ ತ್ಯಾಜ್ಯ ಘಟಕದಲ್ಲಿ ಬೆಂಗಳೂರಿನ ಉದ್ಯಮಿ ರಾಮನಾಥ್ ಲಕ್ಷ್ಮಣ್ ಅವರಿಂದ ನಾಲ್ಕು ತಿಂಗಳ ಹಿಂದೆ ಅನುಷ್ಠಾನಿಸಲ್ಪಟ್ಟ ಒಂದು ಟನ್ ಸಾಮರ್ಥ್ಯದ ಪ್ಲಾಸ್ಟಿಕ್ ಶ್ರೆಡ್ಡರ್ ಯಂತ್ರದಿಂದ ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಿಸಿ ಡಾಂಬರಿನೊಂದಿಗೆ ರಸ್ತೆ ನಿರ್ಮಾಣದಲ್ಲಿ ಬಳಸುವ ಯೋಜನೆ ಯಶಸ್ಸಿನತ್ತ ಸಾಗಿದೆ. ಪರಿಣಾಮ ಎಲ್ಲೂರು ಘಟಕದಲ್ಲಿ ಎರಡು ಟನ್ ಸಾಮರ್ಥ್ಯದ ಶ್ರೆಡ್ಡರ್ ಯಂತ್ರ ಅಳವಡಿಸಲು ಮುಂದಡಿಯಿಡುವ ಮೂಲಕ ಪುರಸಭೆಗೆ ಆರ್ಥಿಕವಾಗಿಯೂ ಲಾಭ ಗಳಿಸುವ ಚಿಂತನೆ ನಡೆಸಿದೆ.

    ಪರಿಸರ ಸ್ನೇಹಿಯಾಗಿ ಯೋಜನೆ ಅನುಷ್ಠಾನವಾಗಲಿದೆ. 10 ಟನ್ ಘನ ತ್ಯಾಜ್ಯ ಸಂಗ್ರಹದ 2 ಶೆಡ್, 3000 ಚ.ಮೀ. ವಿಸ್ತೀರ್ಣದ 2 ಕೊಳಚೆ ನೀರು ಸಂಗ್ರಹಣಾ ತೊಟ್ಟಿ, 1 ವೇಬ್ರಿಡ್ಜ್ ನಿರ್ಮಾಣವಾಗಿದೆ. ನಿರುಪಯುಕ್ತ ತ್ಯಾಜ್ಯವನ್ನು ನೆಲಭರ್ತಿ ಮಾಡಲು ಘಟಕದೊಳಗಡೆ ಜಾಗ ಕಾಯ್ದಿರಿಸಲಾಗಿದೆ. ಸುಮಾರು 1.20 ಕೋಟಿ ರೂ. ವೆಚ್ಚದಲ್ಲಿ ಯಂತ್ರೋಪಕರಣ ಅಳವಡಿಸಿ ಘಟಕ ಶೀಘ್ರದಲ್ಲಿ ಕಾರ್ಯಾರಂಭಿಸಲು ಯೋಜನೆ ರೂಪಿಸಲಾಗಿದ್ದು, ಅಂತಿಮ ಹಂತದಲ್ಲಿದೆ.
    – ವೆಂಕಟೇಶ ನಾವಡ, ಮುಖ್ಯಾಧಿಕಾರಿ ಕಾಪು ಪುರಸಭೆ

    ಗುರುಗುಂಡಿ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದು, 32 ಲಕ್ಷ ರೂ. ವೆಚ್ಚದಲ್ಲಿ ಯುಪಿಸಿಎಲ್‌ನ 2019ರ ಕ್ರಿಯಾ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಅದು ಈವರೆಗೆ ಕೈಗೂಡಿಲ್ಲ. ರಸ್ತೆ ಅಭಿವೃದ್ಧಿ ಕುರಿತಂತೆ ಪುರಸಭೆಗೆ ಬೇಡಿಕೆ ಸಲ್ಲಿಸಲಾಗುವುದು.
    – ಮಮತಾ ಶೆಟ್ಟಿ, ಪಿಡಿಒ ಎಲ್ಲೂರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts