More

    ಲಾಕ್‌ಡೌನ್ ಅವಧಿ ವೇತನಕ್ಕೆ ಕಾರ್ಮಿಕರ ಆಗ್ರಹ

    ವಿಜಯಪುರ: ಲಾಕ್‌ಡೌನ್ ಅವಧಿಯಲ್ಲಿಯ ವೇತನ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷೆ ಕಾಶಿಬಾಯಿ ಜನಗೊಂಡ ಹಾಗೂ ಜಿಲ್ಲಾ ಕಾರ್ಯದರ್ಶಿ ಮಹಾದೇವಿ ಧರ್ಮಶೆಟ್ಟಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
    ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಜಿಲ್ಲೆಯ ವಸತಿ ಶಾಲೆಗಳು ಮತ್ತು ವಸತಿ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 10-12 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೇವಲ ಕನಿಷ್ಠ ಕೂಲಿ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಹೊರಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೆ, ವೇತನವೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಅವಧಿಯಲ್ಲಿ ವೇತನ ನೀಡಬೇಕೆಂದು ಸ್ಪಷ್ಟ ಆದೇಶವಿದ್ದರೂ ಜಿಲ್ಲಾಮಟ್ಟದಲ್ಲಿ ಮೇಲಿನ ಇಲಾಖೆಗಳ ಅಧಿಕಾರಿಗಳು ಇನ್ನೂ ಪಾವತಿ ಮಾಡಿಲ್ಲ ಎಂದರು.
    ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ರಾತ್ರಿ ಕಾವಲುಗಾರರು ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಜೂನ್ ತಿಂಗಳಿಂದ ವೇತನ ಪಾವತಿಸಿ ಕಾರ್ಮಿಕರಿಗೆ ಕೆಲಸ ನೀಡಬೇಕು. ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಎಸ್‌ಐ ಮತ್ತು ಇಪಿಎ್ನ ಪಾವತಿ ಮಾಡಿರುವ ದಾಖಲೆಗಳನ್ನು ಕಾರ್ಮಿಕರಿಗೆ ಒದಗಿಸಬೇಕು. ಇಲ್ಲವೆ ಇಲಾಖೆಯಿಂದಲೇ ಸೌಲಭ್ಯಗಳನ್ನು ನೀಡಬೇಕು. ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅವಧಿಯ ಹಿಂದಿನ ತಿಂಗಳುಗಳ ವೇತನವನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ತಕ್ಷಣವೇ ಪಾವತಿಸಬೇಕು. ಹೆಚ್ಚುವರಿ ಸಿಬ್ಬಂದಿ ಹೆಸರಿನಲ್ಲಿ ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ಖಾಲಿ ಇರುವ ಕಡೆ ಮತ್ತು ಹೊಸ ವಸತಿನಿಲಯಗಳಲ್ಲಿ ನೇಮಕ ಮಾಡಲು ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷೆ ಕಾಶಿಬಾಯಿ ಜನಗೊಂಡ ಮಾತನಾಡಿ, ಜೂನ್ ತಿಂಗಳಿಂದ ಸಂಸ್ಥೆಯ ಹೊರಗುತ್ತಿಗೆ ಕಾರ್ಮಿಕರು ನಿತ್ಯ ವಸತಿಶಾಲೆ ಮತ್ತು ವಸತಿ ಕಾಲೇಜುಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ, ಶಾಲೆ ಕಾಲೇಜುಗಳು ಪ್ರಾರಂಭವಾಗದೆ ಅಡುಗೆ ಕೆಲಸ ಸ್ಥಗಿತಗೊಂಡಿದೆ. ಕಾರ್ಮಿಕರಿಗೆ ಜೂನ್ ತಿಂಗಳಿಂದ ವೇತನ ನೀಡುತ್ತಿಲ್ಲ. ಪ್ರಸ್ತುತ ಹಣಕಾಸು ಸಾಲಿನಲ್ಲಿ ಅನುದಾನ ಮಂಜೂರಾಗಿರುವುದರಿಂದ ಜೂನ್ ತಿಂಗಳಿಂದ ಕಾರ್ಮಿಕರಿಗೆ ವೇತನ ಪಾವತಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕನಿಷ್ಠ ಕೂಲಿಯಿಂದ ಬದುಕುತ್ತಿರುವ ಕಾರ್ಮಿಕರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತವೆ. ಈಗಾಗಲೇ ಬಿಸಿಯೂಟ ಕಾರ್ಮಿಕರಿಗೆ ಜೂನ್‌ನಿಂದ ಆಗಸ್ಟ್‌ವರೆಗೂ ವೇತನ ಮಂಜೂರು ಮಾಡಿದ್ದು, ಅದೇ ರೀತಿ ಹಾಸ್ಟೆಲ್ ಕಾರ್ಮಿಕರಿಗೂ ವೇತನ ಜತೆಗೆ ಕೂಡಲೇ ಕೆಲಸ ನೀಡಬೇಕು ಎಂದರು.
    ಜಿಲ್ಲಾ ಕಾರ್ಯದರ್ಶಿ ಮಹಾದೇವಿ ಧರ್ಮಶೆಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಅಕಲಕಬಾನು ನಗಾರ್ಚಿ, ಸುಲೋಚನಾ ತಿವಾರಿ, ಗಂಗೂಬಾಯಿ ಹಲಗಿ, ಸುವರ್ಣ ತೆಲಸಂಗ, ಅನೀತಾ ರಾಠೋಡ, ಶಾರಾದಾ ಪಾಟೀಲ, ಅಂಬಿಕಾ ಕೋಳಿ, ಶಿವಮ್ಮ ಬೂದಿಹಾಳ, ರಮೇಶ ಕೂತನೂರ, ಸಂಜೀವ ಕುಂಬಾರ, ರಾಮು ರಾಠೋಡ, ರೇವಣಸಿದ್ದ ಬಿರಾದಾರ ಮತ್ತಿತರರು ಭಾಗವಹಿಸಿದ್ದರು.

    ಲಾಕ್‌ಡೌನ್ ಅವಧಿ ವೇತನಕ್ಕೆ ಕಾರ್ಮಿಕರ ಆಗ್ರಹ
    ಲಾಕ್‌ಡೌನ್ ಅವಧಿ ವೇತನಕ್ಕೆ ಕಾರ್ಮಿಕರ ಆಗ್ರಹ
    ಲಾಕ್‌ಡೌನ್ ಅವಧಿ ವೇತನಕ್ಕೆ ಕಾರ್ಮಿಕರ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts