More

    ಶವಾಗಾರವಿಲ್ಲದೆ ರಸ್ತೆಯಲ್ಲೇ ಮರಣೋತ್ತರ ಪರೀಕ್ಷೆ; ಲೋಕಾಯುಕ್ತದಿಂದ ಸ್ವಯಂಪ್ರೇರಿತ ದೂರು ದಾಖಲು

    ಬೆಂಗಳೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲು ಶವಾಗಾರ ಇಲ್ಲದಿರುವುದರಿಂದ ರಸ್ತೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಮಾಧ್ಯಮ ವರದಿಯನ್ನು ಪರಿಗಣಿಸಿ, ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

    ಪ್ರಕರಣದ ವಿಚಾರಣೆ ನಡೆಸಿರುವ ಉಪಲೋಕಾಯುಕ್ತ ನ್ಯಾ.ಕೆ ಎನ್ ಫಣೀಂದ್ರ ಅವರು ಯಾದಗಿರಿ ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾಸ್ಪತ್ರೆಯ ಸರ್ಜನ್, ಕೆಂಭಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ.

    ಪ್ರಕರಣದ ಕುರಿತು ಯಾದಗಿರಿ ಜಿಲ್ಲಾಧಿಕಾರಿಯು ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಕೆಂಭಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಗೆ ನಿರ್ದೇಶಿಸಿದ್ದು, ಮುಂದಿನ ವಿಚಾರಣೆಯ ವೇಳೆಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಅ.10ಕ್ಕೆ ಮುಂದೂಡಲಾಗಿದೆ.

    ಕರ್ನಾಟಕ ಲೋಕಾಯುಕ್ತ ಕಾಯಿದೆ ಸೆಕ್ಷನ್ 7(2) ಮತ್ತು 9(3)ಎ ಅಡಿ ಸ್ವಯಂಪ್ರೇರಿತ ಅಧಿಕಾರ ಚಲಾಯಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ಉಪಲೋಕಾಯುಕ್ತರು ಆದೇಶ ಮಾಡಿದ್ದಾರೆ.

    ರಸ್ತೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸುವುದು ಮೇಲ್ನೋಟಕ್ಕೆ ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಲಿದೆ. ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಶವಾಗಾರ ನಿರ್ಮಿಸದೇ ಇರುವುದು ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 2(10) ಅಡಿ ಸಂಬಂಧಿತ ಅಧಿಕಾರಿಗಳಿಂದ ಆಗಿರುವ ಕರ್ತವ್ಯ ಲೋಪವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

    ಹಲವು ಬಾರಿ ಕೋರಿಕೆ ಸಲ್ಲಿಸಿದರೂ ಕೆಂಭಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವಾಗಾರ ನಿರ್ಮಿಸಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಲು ಸಿಬ್ಬಂದಿಯು ಆಸ್ಪತ್ರೆಯಿಂದ ಎರಡು ಕಿ. ಮೀ ವರೆಗೆ ವೈದ್ಯಕೀಯ ಸಲಕರಣೆಗಳನ್ನು ಕೊಂಡೊಯ್ಯುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಶವಾಗಾರ ಅತಿ ಮುಖ್ಯ. ಸಂಬಂಧಿತ ಅಧಿಕಾರಿಗಳು ಶವಾಗಾರ ನಿರ್ಮಿಸಿಕೊಡದೇ ಇರುವುದರಿಂದ ಅಧಿಕಾರಿ/ಸಿಬ್ಬಂದಿ ರಸ್ತೆ ಬದಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಸ್ಥಿತಿ ಬಂದೊದಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts