More

  ಕರ್ನಾಟಕ ವೈಭವ-ವೈಚಾರಿಕ ಹಬ್ಬ

  ರಾಣೆಬೆನ್ನೂರ: ಕನ್ನಡ ನಾಡು ದೇಶಕ್ಕೆ ಮಾದರಿ ರಾಜ್ಯವಾಗಬೇಕು. ರಾಷ್ಟ್ರವನ್ನು ಬಲಪಡಿಸುವಲ್ಲಿ ಕನ್ನಡ ನಾಡಿನ ಜನರ ಬೆಂಬಲ ಅಪಾರವಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಲೆ, ಸಾಹಿತ್ಯ, ಸಂಸ್ಕಾರ, ತಂತ್ರಜ್ಞಾನ ಸೇರಿ ಪ್ರತಿ ಕ್ಷೇತ್ರದಲ್ಲೂ ಅತ್ಯುನ್ನತ ಸ್ಥಾನದಲ್ಲಿ ಬೆಳೆಯುವ ಪ್ರಯತ್ನ ಮಾಡಬೇಕು ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

  ನವದೆಹಲಿ ಅಖಿಲ ಭಾರತೀಯ ಪ್ರಜ್ಞಾ ಪ್ರವಾಹ ಹಾಗೂ ಪರಿವರ್ತನಾ ಸಂಘದ ವತಿಯಿಂದ ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಮೂರು ದಿನ ನಡೆಯಲಿರುವ ಕರ್ನಾಟಕ ವೈಭವ-ವೈಚಾರಿಕ ಹಬ್ಬ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

  ಕನ್ನಡದವರು ಯಾರ ಎದುರು ತಲೆ ತಗ್ಗಿಸಿ ನಿಲ್ಲುವ ಅವಶ್ಯವಿಲ್ಲ. ನಮ್ಮ ಪೂರ್ವಿಕರು ಆ ರೀತಿ ನಮ್ಮ ನಾಡನ್ನು ಕಟ್ಟಿಕೊಟ್ಟಿದ್ದಾರೆ. ತಲೆ ಎತ್ತಿ ಓಡಾಡುವಂತೆ ಮಾಡಿದ್ದಾರೆ. ಕನ್ನಡ ಮಾತನಾಡುವಾಗ ಅಂಜಿಕೆ, ಬೇಸರ, ಹೆದರಿಕೆ ಬೇಡ. ಹೆಮ್ಮೆಯಿಂದ ಕನ್ನಡ ಮಾತನಾಡಬೇಕು. ಕನ್ನಡ ಗೊತ್ತಿಲ್ಲದವರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು. ಯುವ ಬಿಗ್ರೇಡ್​ನಿಂದ ಈ ಕೆಲಸ ನಡೆಯುತ್ತಿದೆ. ಆ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ನಾಡು ಉಳಿಸುವ ಪ್ರಯತ್ನ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.

  ನಾನು ಕರ್ನಾಟಕ, ಭಾರತದವನು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಕರ್ನಾಟಕ ಸ್ವಾಭಿಮಾನದಿಂದ ಕಟ್ಟಿದ ನಾಡು. ಕಲೆ, ಸಾಹಿತ್ಯ, ಸಂಸ್ಕೃತಿಕ ಮಾತ್ರವಲ್ಲದೇ ಸಂಪತ್ತಿನಲ್ಲೂ ಕನ್ನಡ ನಾಡು ಸಮೃದ್ಧವಾಗಿದೆ. ಪ್ರತಿಯೊಬ್ಬರೂ ನಾಡು-ನುಡಿ ಬೆಳೆಸಿ, ಉಳಿಸಲು ಮುಂದಾಗಬೇಕು ಎಂದರು.

  ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಕರ್ನಾಟಕದ ಇತಿಹಾಸ, ಪರಂಪರೆ ನಮಗೆ ಆತ್ಮಬಲ ತಂದುಕೊಟ್ಟಿದೆ. ಆದರೆ, ಇಂದು ಭವಿಷ್ಯದ ಕನ್ನಡ ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಂತ್ರಜ್ಞಾನ ಬಳಸಿಕೊಂಡು ಕನ್ನಡ ಕಲಿಸುವ ಪ್ರಯತ್ನ ನಡೆಯಬೇಕು ಎಂದರು.

  ಸಂಗೀತ ಕಲಾವಿದ ಉಸ್ತಾದ್ ಫಯಾಜ್​ಖಾನ್ ಅವರಿಗೆ ಸರ್ವಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಕರ್ನಾಟಕ ವೈಭವ ವೇದಿಕೆ ಉದ್ಘಾಟಿಸಿದರು.

  ಪ್ರಜ್ಞಾ ಪ್ರವಾಹ ಸಂಯೋಜಕ ಜೆ. ನಂದಕುಮಾರ, ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ಧು ಅಲಗೂರ್, ಹಂಪಿ ವಿವಿ ಕುಲಪತಿ ಪ್ರೊ. ಎಸ್.ಸಿ. ರಮೇಶ, ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ಹಲಸೆ, ಗೋಟಗೋಡಿ ಜಾನಪದ ವಿವಿ ಕುಲಪತಿ ಪ್ರೊ. ಡಿ.ಬಿ. ನಾಯ್ಕ, ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ, ಕರ್ನಾಟಕ ವಿವಿ ಕುಲಪತಿ ಎ.ಎಸ್. ಶಿರಾಳಶೆಟ್ಟಿ, ಗದಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರೊ. ಸುರೇಶ ನಾಡಗೌಡರ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts