More

    ಯಾರ ಪಾಲಾಗಲಿದೆ ಸಕ್ಕರೆ ನಾಡಿನ ಸಿಹಿ? ಭದ್ರಕೋಟೆ ಉಳಿಸಿಕೊಳ್ಳಲು ಕೈ, ದಳ ಕಸರತ್ತು, ಕಮಲ ಪಾಳಯ ಪ್ರದರ್ಶಿಸಲಿದೆಯೇ ತಾಕತ್ತು?

    ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಹೊಂದಿರುವ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಹಿಂದಿಗಿಂತಲೂ ಪ್ರತಿಷ್ಠೆಯ ಕಣವಾಗಿದೆ. ಅಚ್ಚರಿ ಫಲಿತಾಂಶ, ಪಕ್ಷಕ್ಕೆ ನಿಷ್ಠೆ, ಭಾವನಾತ್ಮಕ ವಿಷಯಕ್ಕೆ ಕರಗುವ ಹಾಗೂ ಹೋರಾಟದ ಉಸಿರಾಗಿರುವ ನೆಲದಲ್ಲಿ ಮತದಾರರ ಮನದಾಳ ತಿಳಿಯುವುದು ಬಲುಕಷ್ಟ. ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಹಳಬರು ಹಾಗೂ ಹೊಸಬರ ನಡುವೆ ಕಾದಾಟ ಜೋರಾಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಯಾರು ದಡ ಸೇರಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.

    | ಕೆ.ಎನ್. ರಾಘವೇಂದ್ರ ಮಂಡ್ಯ

    ಹಳೇ ಮೈಸೂರು ಪ್ರಾಂತ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಮಂಡ್ಯ ಜಿಲ್ಲೆ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಎಲ್ಲ ಏಳು ಸ್ಥಾನಗಳಲ್ಲೂ ಜೆಡಿಎಸ್ ಗೆಲ್ಲಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಸಿಎಂ ಗಾದಿಗೇರಲು ಜಿಲ್ಲೆ ಸಹಕರಿಸಿತ್ತು. ಇದಕ್ಕೆ ಕಾರಣ ಒಕ್ಕಲಿಗ ಸಮುದಾಯದವರು ಸಿಎಂ ಆಗುತ್ತಾರೆ ಎನ್ನುವುದಾಗಿತ್ತು. ಈ ಬಾರಿ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್ ಹೂಡಿದ ದಾಳವನ್ನೇ ಕಾಂಗ್ರೆಸ್ ಬಳಸಿಕೊಂಡಿದೆ. ಜಿಲ್ಲೆಯ ಜನರು ನನಗೂ ಒಮ್ಮೆ ಅವಕಾಶ ಕೊಟ್ಟರೆ ಉನ್ನತ ಸ್ಥಾನ ಅಲಂಕರಿಸುತ್ತೇನೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತು ಸಮುದಾಯದ ಮತವನ್ನು ಇಬ್ಭಾಗ ಮಾಡುವ ಲಕ್ಷಣ ಗೋಚರಿಸುತ್ತಿದೆ.

    ಜೆಡಿಎಸ್​ನಿಂದ ಎರಡು ಕ್ಷೇತ್ರಗಳಲ್ಲಿ ಹೊಸ ಮುಖ, ಕಾಂಗ್ರೆಸ್​ನಿಂದಲೂ ಎರಡು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳು ಹಾಗೂ ಒಂದು ಕ್ಷೇತ್ರದಲ್ಲಿ ರೈತ ಸಂಘಕ್ಕೆ ಬೆಂಬಲ ನೀಡಲಾಗಿದೆ. ಆದರೆ ಅಚ್ಚರಿಯ ಫಲಿತಾಂಶ ನೀಡುತ್ತೇವೆನ್ನುವ ಅತಿ ಉತ್ಸಾಹದಲ್ಲಿರುವ ಬಿಜೆಪಿ ಹಾಲಿ ಸಚಿವರನ್ನು ಹೊರತುಪಡಿಸಿ ಆರು ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ ಹಾಕಿದೆ. ಅದರಲ್ಲಿಯೂ ಒಬ್ಬರು ಮಹಿಳಾ ಅಭ್ಯರ್ಥಿ ಎನ್ನುವುದು ವಿಶೇಷ.

    ಮಂಡ್ಯದಲ್ಲಿ ಯಾರು ಗೆದ್ದರೂ ದಾಖಲೆ

    ಮಂಡ್ಯ ಕ್ಷೇತ್ರ ಜಿಲ್ಲೆಯ ಪೈಕಿ ತೀವ್ರ ಕುತೂಹಲ ಹುಟ್ಟಿಸಿದೆ. ಸ್ವಾಭಿಮಾನಿ ಪಡೆ ಅಭ್ಯರ್ಥಿಯಾಗಿ ಕೆ.ಎಸ್.ವಿಜಯಾನಂದ, ಕಾಂಗ್ರೆಸ್​ನಿಂದ ರವಿಕುಮಾರ್ ಗಣಿಗ, ಬಿಜೆಪಿಯಿಂದ ಅಶೋಕ್ ಜಯರಾಂ, ಜೆಡಿಎಸ್​ನಿಂದ ರಾಮಚಂದ್ರು, ಸವೋದಯ ಕರ್ನಾಟಕ ಪಕ್ಷದಿಂದ ಮಧುಚಂದನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಎಲ್ಲರೂ ಹೊಸಮುಖಗಳೇ ಆಗಿರುವುದರಿಂದ ಯಾರೇ ಗೆದ್ದರೂ ದಾಖಲೆ ಪುಟ ಸೇರಲಿದೆ. ಎಲ್ಲರೂ ತಮ್ಮದೇ ಆದ ಮತಬ್ಯಾಂಕ್ ಹೊಂದಿದ್ದು, ಮತ್ತೊಬ್ಬರ ಗೆಲುವಿಗೆ ಅಗತ್ಯವಿರುವ ಮತವನ್ನು ಕಸಿದುಕೊಳ್ಳುವ ಹಾಗೂ ಫಲಿತಾಂಶ ಬದಲಿಸುವ ಶಕ್ತಿ ಹೊಂದಿದ್ದಾರೆ. ದಳಪತಿ ಕೈಕೊಟ್ಟ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ವಿಜಯಾನಂದಗೆ ತಾತ ಕೆ.ವಿ.ಶಂಕರಗೌಡ, ಅಶೋಕ್​ಗೆ ತಂದೆ ಎಸ್.ಡಿ.ಜಯರಾಂ ಹೆಸರೇ ಶ್ರೀರಕ್ಷೆ. ರವಿಕುಮಾರ್​ಗೆ ಕಾಂಗ್ರೆಸ್, ರಾಮಚಂದ್ರುಗೆ ಜೆಡಿಎಸ್​ನ ವೋಟ್​ಬ್ಯಾಂಕ್​ಗಳೇ ಗಟ್ಟಿ. ಮಧುಚಂದನ್​ಗೆ ಹೋರಾಟಗಳೇ ಕೈಹಿಡಿಯಬೇಕಿದೆ.

    ಮದ್ದೂರಲ್ಲಿ ಕೈ, ಹೊರೆ ನೇರ ಹೋರಾಟ

    ದೊಡ್ಡಗೌಡರ ಬೀಗರಾಗಿರುವ ಶಾಸಕ ಡಿ.ಸಿ.ತಮ್ಮಣ್ಣ ಮತ್ತೊಮ್ಮೆ ಜೆಡಿಎಸ್​ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನಿಂದ ಸಮಾಜಸೇವಕ ಕದಲೂರು ಉದಯ್ಗೆ ಮಣೆ ಹಾಕಲಾಗಿದೆ. ಬಿಜೆಪಿಯಿಂದ ಮನ್​ವುುಲ್ ನಿರ್ದೇಶಕ ಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಕೈ ಮತ್ತು ಹೊರೆ ನಡುವೆ ನೇರ ಫೈಟ್ ಇದೆ. ಬಿಜೆಪಿ ಕೂಡ ಕಸರತ್ತು ನಡೆಸುತ್ತಿದೆ. ತಮ್ಮಣ್ಣ ಅವರ ಸಿಡುಕಿನ ವರ್ತನೆಯಿಂದ ಕೆಲ ಮುಖಂಡರು ಪಕ್ಷ ತೊರೆದಿದ್ದಾರೆ. ಆದರೆ ‘ಕೈ’ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ಗೊಂಡಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕುಟುಂಬದ ಕುಡಿ ಗುರುಚರಣ್ ಜೆಡಿಎಸ್ ಸೇರಿದ್ದಾರೆ. ಸಾಮಾಜಿಕ ಚಟುವಟಿಕೆ ಮೂಲಕ ಉದಯ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದರೂ, ಎಸ್​ಎಂಕೆ ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ ಎನ್ನುವ ಅಪವಾದ ಕಾಂಗ್ರೆಸ್ ಮೇಲೆ ಬಂದಿದೆ. ಇದನ್ನು ಜೆಡಿಎಸ್ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.

    ಮಳವಳ್ಳಿ ಮೀಸಲು ಮೂರು ಬಾಗಿಲು

    ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಜೆಡಿಎಸ್​ನಿಂದ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಬಿಜೆಪಿಯಿಂದ ಮುನಿರಾಜು ಹುರಿಯಾಳಾಗಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಇರುತ್ತಿದ್ದ ಸ್ಪರ್ಧೆ ಈ ಬಾರಿ ತ್ರಿಕೋನಕ್ಕೆ ತಿರುಗಿದೆ. ನರೇಂದ್ರಸ್ವಾಮಿ ಅವರಿಗೆ ಕಳೆದ ಚುನಾವಣೆಯ ಸೋಲಿನ ಅನುಕಂಪದ ಜತೆಗೆ ಜೆಡಿಎಸ್ ಎಂಎಲ್​ಸಿ ಮರಿತಿಬ್ಬೇಗೌಡ ಹಾಗೂ ಬಿಜೆಪಿ ತೊರೆದಿರುವ ಮಾಜಿ ಸಚಿವ ಬಿ.ಸೋಮಶೇಖರ್ ಬಲ ಸಿಕ್ಕಿದೆ. ಇನ್ನು ಅನ್ನದಾನಿಗೆ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು ಪ್ರಮುಖವಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಕೈಹಿಡಿದಿದ್ದ ಬಿಜೆಪಿಯ ಸಾಂಪ್ರದಾಯಿಕ ಮತಗಳು ಈ ಬಾರಿ ಸಿಗುವುದು ಕಷ್ಟ. ಅತ್ಯಲ್ಪ ಅವಧಿಯಲ್ಲಿಯೇ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಮುನಿರಾಜು ಅಚ್ಚರಿ ಫಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

    ಕೆ.ಆರ್.ಪೇಟೆ ಕಾಳಗ ಜೋರು

    ಬಿಜೆಪಿಯ ಸಚಿವ ಕೆ.ಸಿ.ನಾರಾಯಣಗೌಡ ಸ್ಪರ್ಧೆ ಯಿಂದ ಕ್ಷೇತ್ರ ಮಹತ್ವ ಪಡೆದುಕೊಂಡಿದೆ. ಜೆಡಿಎಸ್​ನಿಂದ ಮನ್​ವುುಲ್ ನಿರ್ದೇಶಕ ಎಚ್.ಟಿ. ಮಂಜು, ಕಾಂಗ್ರೆಸ್​ನಿಂದ ಬಿ.ಎಲ್.ದೇವರಾಜು ಕಣದಲ್ಲಿದ್ದಾರೆ. ಸಚಿವರಾಗಿ ಬೇರೆ ಕ್ಷೇತ್ರ ನಿರ್ಲಕ್ಷಿಸಿದರೂ ಕೆ.ಆರ್.ಪೇಟೆ ವಿಚಾರ ದಲ್ಲಿ ಕೆಸಿಎನ್ ಹಿಂದೆ ಬಿದ್ದಿಲ್ಲ. ಜತೆಗೆ ತಮ್ಮದೇ ಆದ ಮತಬ್ಯಾಂಕ್ ಹೊಂದಿದ್ದಾರೆ. ಜೆಡಿಎಸ್​ನಲ್ಲಿದ್ದ ಅತೃಪ್ತರನ್ನು ಪಕ್ಷಕ್ಕೆ ಕರೆತಂದಿದ್ದಾರೆ. ಸಜ್ಜನ ರಾಜಕಾರಣಿ ಎನ್ನಿಸಿಕೊಂಡಿ ರುವ ದೇವರಾಜು ಕೊನೆಯ ಚುನಾ ವಣೆ ಎನ್ನುವುದರ ಜತೆಗೆ ಕಳೆದ ಚುನಾ ವಣೆಯ ಸೋಲಿನ ಅನುಕಂಪವಿದೆ. ಅತ್ತ ತನ್ನ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.

    ಮೇಲುಕೋಟೆಯಲ್ಲಿ ಇಬ್ಬರ ಫೈಟ್

    ಜೆಡಿಎಸ್​ನಿಂದ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ಸವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಅಭ್ಯರ್ಥಿಗಳಾಗಿದ್ದು, ಇಬ್ಬರ ನಡುವೆ ಬಿಗ್​ಫೈಟ್ ನಡೆಯುತ್ತಿದೆ. ಆರೋಪ-ಪ್ರತ್ಯಾರೋಪದಿಂದಾಗಿ ಚುನಾವಣಾ ಕಣ ರಂಗೇರಿದ್ದು, ಹಲವು ವಿಷಯಗಳಿಂದ ಚುನಾವಣೆ ಪ್ರತಿಷ್ಠೆಯಾಗಿದೆ. ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಕ್ಷೇತ್ರದಲ್ಲಿ ಗಮನ ಸೆಳೆದಿದ್ದು, ಇವರು ಗಳಿಸುವ ಮತಗಳ ಮೇಲೆ ಉಳಿದಿಬ್ಬರ ಫಲಿತಾಂಶ ನಿರ್ಣಯವಾಗಬಹುದು.

    ಶ್ರೀರಂಗಪಟ್ಟಣದಲ್ಲಿ ಯಾರಿಗೆ ಟ್ರಬಲ್?

    ಜೆಡಿಎಸ್​ನಿಂದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕಾಂಗ್ರೆಸ್​ನಿಂದ ರಮೇಶ ಬಂಡಿಸಿದ್ದೇಗೌಡ ಹಾಗೂ ಬಿಜೆಪಿಯಿಂದ ಇಂಡುವಾಳು ಸಚ್ಚಿದಾನಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಬಾರಿಗೆ ಶಾಸಕರಾದರೂ ದಶಕಗಳ ಸಮಸ್ಯೆಗೆ ರವೀಂದ್ರ ಮುಕ್ತಿ ಕೊಡಿಸಿದ್ದಾರೆ. ಆದರೂ ಹಲವು ಕಾರಣದಿಂದ ಕೆಲವರು ಜೆಡಿಎಸ್ ತೊರೆದಿದ್ದಾರೆ. ಅಂತೆಯೆ, ಕಾಂಗ್ರೆಸ್​ನಲ್ಲಿ ಮೂಲ ವರ್ಸಸ್ ವಲಸಿಗ ಗದ್ದಲವಿದೆ. ಇಬ್ಬರಿಗೂ ಟಕ್ಕರ್ ಕೊಟ್ಟು ಕಮಾಲ್ ಮಾಡಲು ಕಮಲ ಪಾಳಯ ಸಿದ್ಧವಾಗಿದೆ.

    ನಾಗಮಂಗಲದಲ್ಲಿ ಪ್ರತಿಷ್ಠೆ ಮೇಲೋಗರ

    ಜೆಡಿಎಸ್​ನಿಂದ ಶಾಸಕ ಸುರೇಶ್​ಗೌಡ, ಕಾಂಗ್ರೆಸ್​ನಿಂದ ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಚಲುವರಾಯಸ್ವಾಮಿ ಹಾಗೂ ಬಿಜೆಪಿಯಿಂದ ಸುಧಾ ಶಿವರಾಮೇಗೌಡ ಅಭ್ಯರ್ಥಿ. ದಳ ಮತ್ತು ಕೈ ನಡುವೆ ನೇರ ಹಣಾಹಣಿ ಎನ್ನುವುದಿದ್ದರೂ ಬಿಜೆಪಿಯನ್ನು ಕಡೆಗಣಿಸುವಂತಿಲ್ಲ. ಫಲಿತಾಂಶದಲ್ಲಿ ಟ್ವಿಸ್ಟ್ ಕೊಟ್ಟರೂ ಅಚ್ಚರಿಯಿಲ್ಲ. ಜೆಡಿಎಸ್​ಗೆ ಒಳೇಟಿನ ಭೀತಿ ಜತೆಗೆ ಹಲವು ಪ್ರಭಾವಿ ಮುಖಂಡರು ಪಕ್ಷ ತೊರೆದಿರುವುದು ನಿದ್ದೆಗೆಡುವಂತೆ ಮಾಡಿದೆ. ಮಾತ್ರವಲ್ಲದೆ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಜೆಡಿಎಸ್​ನಿಂದ ದೂರವಾದ ನಂತರ ಬಿಜೆಪಿ ಸೇರಿ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ವೋಟ್​ಬ್ಯಾಂಕ್ ಹೊಂದಿದ್ದಾರೆ. ಜತೆಗೆ ದಳದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಬಂಡಾಯ ಕಾಂಗ್ರೆಸ್​ಗೆ ವರದಾನವಾಗುವ ಲೆಕ್ಕಾಚಾರವಿದೆ. ಜತೆಗೆ ಕಳೆದ ಚುನಾವಣೆ ಸೋಲಿನ ಅನುಕಂಪ ಸಿಆರ್​ಎಸ್ ಮೇಲಿದೆ.

    Mandya Election

    Mandya Election 1

    ಬಿಜೆಪಿಗೆ ಪೂರ್ಣ ಜನಾದೇಶ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

    ಬೆಂಗಳೂರಲ್ಲಿಂದು ಪ್ರಧಾನಿ ಮೋದಿಯಿಂದ ಮತ್ತೊಂದು ರೋಡ್ ಶೋ: ಪೊಲೀಸರಿಂದ ಬಿಗಿ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts