More

    ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು

    ಶಹಾಬಾದ್: ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವದ ನಿಮಿತ್ತ ರಾಜ್ಯಾದ್ಯಂತ ಕನ್ನಡ ನುಡಿ, ಸಂಸ್ಕೃತಿ ಪರಿಚಯಕ್ಕಾಗಿ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥಯಾತ್ರೆಯನ್ನು ಬಸವೇಶ್ವರ ವೃತ್ತದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

    ಸೇಡಂ, ಮಳಖೇಡದಿಂದ ಸಣ್ಣೂರ ಕ್ರಾಸ್‌ಗೆ ಗುರುವಾರ ಬೆಳಗ್ಗೆ ಆಗಮಿಸಿದ ರಥಯಾತ್ರೆಗೆ ತಹಸೀಲ್ದಾರ್ ಸುದರ್ಶನ ಚೌರ, ಗ್ರೇಡ್-೨ ತಹಸೀಲ್ದಾರ್ ಗುರುರಾಜ ಸಂಗಾವಿ, ತಾಪಂ ಇಒ ಮಲ್ಲಿನಾಥ ರಾವೂರ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಸರ್ಕಾರಿ ಸಿಬ್ಬಂದಿ ಸಂಭ್ರಮದಿಂದ ಸ್ವಾಗತಿಸಿದರು.

    ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಶಾಸ್ತಿç ವೃತ್ತ, ಶ್ರೀರಾಮ ವೃತ್ತ, ತ್ರಿಶೂಲ್ ವೃತ್ತ, ನೆಹರು ವೃತ್ತದ ಮೂಲಕ ಸರ್ಕಾರಿ ಪ್ರೌಢ ಶಾಲೆ ಆವರಣಕ್ಕೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಲಲಿತಾ ಹರಿಕೃಷ್ಣ ತಂಡದಿಂದ ನೃತ್ಯ, ಕುಸನೂರಿನ ಮಾಳಿಂಗರಾಯ ತಂಡದಿಂದ ಡೊಳ್ಳು ಕುಣಿತ ನಡೆಯಿತು. ಕನ್ನಡಾಭಿಮಾನಿಗಳು ಸಂಭ್ರಮದಿಂದ ಹೆಜ್ಜೆ ಹಾಕಿದರು. ಅಂಗನವಾಡಿ ಕಾರ್ಯಕರ್ತೆಯರು, ಪೂರ್ಣಕುಂಭ, ಆರತಿ, ಕಳಸದೊಂದಿಗೆ ಪಾಲ್ಗೊಂಡು ಗಮನಸೆಳೆದರು.

    ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಕೆಂಬಾವಿ, ಪಿಎಸ್‌ಐ ಚಂದ್ರಕಾಂತ ಮೆಕಾಲೆ, ಪ್ರಮುಖರಾದ ರವಿಕುಮಾರ, ವಿಜಯಲಕ್ಷ್ಮೀ ಹೆರೂರ, ಮಲ್ಲಿಕಾರ್ಜುನ ರೆಡ್ಡಿ, ವಿಶ್ವರಾಜ ಫಿರೋಜಾಬಾದ್, ಯಲ್ಲಾಲಿಂಗ ಹಯ್ಯಾಳಕರ್, ಶರಣು ವಸ್ತ್ರದ, ಬಸವರಾಜ ಮದ್ರಕಿ, ನರೇಂದ್ರ ವರ್ಮಾ, ಕೆ.ರಮೇಶ ಭಟ್ಟ, ಲೋಹಿತ್ ಕಟ್ಟಿ, ಬಸವರಾಜ ಮಯೂರ್ ಇತರರಿದ್ದರು.

    ಮಾಹಿತಿ ಕೊರತೆ, ಜನಪ್ರತಿನಿಧಿಗಳು ಗೈರು: ಶಹಾಬಾದ್‌ಗೆ ಕನ್ನಡ ರಥಯಾತ್ರೆ ಬರುವ ಬಗ್ಗೆ ನಗರಸಭೆ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿ ಸಾಕಷ್ಟು ಜನಪ್ರತಿಧಿಗಳಿಗೆ ಮಾಹಿತಿಯೇ ಇರಲಿಲ್ಲ. ಸರ್ಕಾರಿ, ಅನುದಾನಿತ, ಅನುದಾನ ರಹಿತಿ ಶಾಲೆಗಳಿಗೆ ಮಾತ್ರ ಮಾಹಿತಿ ನೀಡಲಾಗಿತ್ತು. ಹೀಗಾಗಿ ಜನಪ್ರತಿನಿಧಿಗಳಾರು ಯಾತ್ರೆಯಲ್ಲಿ ಕಾಣಿಸಲಿಲ್ಲ. ಹೆಚ್ಚಿನ ಶಿಕ್ಷಕರು ಗೈರಾಗಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ನೀರಿಗಾಗಿ ಪರದಾಡಿದರು. ಮಾರ್ಗ ಮಧ್ಯೆದಲ್ಲಿ ಪ್ಯಾಕೇಟ್ ನೀರು ಹಾಗೂ ಬಾಳೆ ಹಣ್ಣು ವಿತರಿಸಲಾಯಿತು.

    ರಾರಾಜಿಸಿದ ಆಂಗ್ಲ ಬ್ಯಾನರ್: ಖಾಸಗಿ ಶಾಲೆಗಳು ಆಂಗ್ಲ ಬ್ಯಾನರ್‌ನೊಂದಿಗೆ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು ಚರ್ಚೆಗೆ ಗ್ರಾಸವಾಯಿತು. ಈ ಬಗ್ಗೆ ಶಾಲಾ ಶಿಕ್ಷಕರನ್ನು ಪ್ರಶ್ನಿಸಿದಾಗ ಬ್ಯಾನರ್ ತೆಗೆದಿಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಅವರ ಗಮನಕ್ಕೆ ತಂದಾಗ, ನಾವು ಬ್ಯಾನರ್ ತೆಗೆದುಕೊಂಡು ಬನ್ನಿ ಎಂದು ಹೇಳಿಲ್ಲ, ಅವರೇ ತಂದಿದ್ದಾರೆ. ಈ ಕುರಿತು ಶಾಲೆಗೆ ನೋಟಿಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts