More

    ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಸೊಲಬಕ್ಕನವರ್ ಇನ್ನಿಲ್ಲ

    ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಟಿ.ಬಿ. ಸೊಲಬಕ್ಕನವರ್ (73) ಇಂದು ತಡರಾತ್ರಿ ನಿಧನರಾದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮಧ್ಯರಾತ್ರಿ 2.45ರ ಸುಮಾರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಸಾವಿತ್ರೆಮ್ಮ, ಪುತ್ರಿ ವೇದಾರಾಣಿ, ಪುತ್ರ ರಾಜಹರ್ಷ ಹಾಗೂ ಅಳಿಯ ಉದ್ಯಮಿ ಪ್ರಕಾಶ ದಾಸನೂರ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ರಾಕ್ ಗಾರ್ಡನ್ ಪಕ್ಕದ ನ್ಯೂ ವರ್ಕ್ ಶಾಪ್ (ದುಂಡಸಿ ದಾರಿ) ಹತ್ತಿರ ಜರುಗಲಿದೆ.

    ಶಿಕ್ಷಕರಾಗಿದ್ದ ಸೊಲಬಕ್ಕನವರ್ ಶಿಗ್ಗಾವಿಯ ಗೊಟಗೋಡಿಯಲ್ಲಿನ ಉತ್ಸವ ರಾಕ್‌ ಗಾರ್ಡನ್‌ ರೂವಾರಿ ಆಗಿಯೂ ಖ್ಯಾತರಾಗಿದ್ದವರು. ಕಲೆ, ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಲೋಕದಲ್ಲೂ ನಿರತರಾಗಿದ್ದ ಇವರು ‘ಅಣುಶಕ್ತಿ ಯುದ್ಧ ನಿಲ್ಲಿಸಿ’ ಎಂಬ 120 ಅಡಿ ಉದ್ದದ ತೈಲ ವರ್ಣಚಿತ್ರದ ಮೂಲಕ ನಾಡಿನಾದ್ಯಂತ ಸುತ್ತಾಟ ನಡೆಸಿದ್ದರು.

    ದೊಡ್ಡಾಟದತ್ತ ಆಕರ್ಷಿತರಾದ ಇವರು ಅದಕ್ಕಾಗಿ ಸರ್ಕಾರಿ ಶಿಕ್ಷಕ ವೃತ್ತಿಯನ್ನೇ ತೊರೆದು ಪೂರ್ಣಪ್ರಮಾಣದಲ್ಲಿ ದೊಡ್ಡಾಟದಲ್ಲಿ ತೊಡಗಿಸಿಕೊಂಡಿದ್ದರು. ದೊಡ್ಡಾಟ, ಶಿಲ್ಪ ಕಲಾಕೃತಿಗಳಲ್ಲಿನ ಇವರ ಸೃಜನಶೀಲ ಪ್ರತಿಭೆ ಹಾಗೂ ಕೊಡುಗೆ ಪರಿಣಗಣಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. ಇವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2002ರಲ್ಲಿ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಎಂದು ಪ್ರಶಸ್ತಿ ನೀಡಿತ್ತು.

    2001ರಲ್ಲಿ ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ, 2002ರಲ್ಲಿ ಸಂಘಟನಾ ಪ್ರಶಸ್ತಿ, 2005ರಲ್ಲಿ ರಾಜ್ಯೋತ್ಸವ ಹಾಗೂ 2006ರಲ್ಲಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು. ಅಲ್ಲದೆ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಲಿಮ್ಕಾ ಬುಕ್​ ಆಫ್ ರೆಕಾರ್ಡ್ಸ್, ಲಂಡನ್​ ರೆಕಾರ್ಡ್ ಹೋಲ್ಡರ್ಸ್​ ರಿಪಬ್ಲಿಕ್​, ಅಮೆರಿಕದ ರೆಕಾರ್ಡ್ ಸೆಕ್ಟರ್​, ನೇಪಾಳದ ಎವರೆಸ್ಟ್​ ವರ್ಲ್ಡ್​ ರೆಕಾರ್ಡ್, ಅಮೇಜಿಂಗ್ ವರ್ಲ್ಡ್ ರೆಕಾರ್ಡ್​, ಯೂನಿಕ್​ ವರ್ಲ್ಡ್​ ರೆಕಾರ್ಡ್​ಗಳಿಗೂ ಇವರು ಭಾಜನರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts