More

  ಅಕಾಡೆಮಿ ಚಟುವಟಿಕೆ ಸ್ತಬ್ಧ: ಸಾರಥಿಗಳಿಲ್ಲದೆ ಯೋಜನೆ ಸ್ಥಗಿತ

  ರಾಜೇಶ್ ಶೆಟ್ಟಿ ದೋಟ, ಮಂಗಳೂರು

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 14 ಅಕಾಡೆಮಿ, 4 ಪ್ರಾಧಿಕಾರ, 6 ರಂಗಾಯಣ ಹಾಗೂ ಯಕ್ಷರಂಗಾಯಣ ಸಾರಥಿಗಳಿಲ್ಲದೆ ಅನಾಥವಾಗಿದ್ದು, ಮರುಜೀವ ಪಡೆಯುವ ನಿರೀಕ್ಷೆಯಲ್ಲಿದೆ.

  ಮೂರು ವರ್ಷ ಅಧಿಕಾರಾವಧಿಯ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಅವಧಿ 2022ರ ಅ.10ಕ್ಕೆ ಅಂತ್ಯಗೊಂಡಿತ್ತು. ಮತ್ತೊಂದು ಅವಧಿಗೆ ನೇಮಕಕ್ಕೆ ಅವಕಾಶವಿದ್ದರೂ, ಚುನಾವಣೆ ಸಮೀಪಿಸುತ್ತಿದ್ದರಿಂದ ಅಂದಿನ ಬಿಜೆಪಿ ಸರ್ಕಾರ ಮನ ಮಾಡಲಿಲ್ಲ. ಇದರಿಂದ ಅಧಿಕಾರಿಗಳೇ ಉಸ್ತುವಾರಿಗಳಾಗಿದ್ದು, ಹೆಸರಿಗಷ್ಟೇ ಇರುವ ಅಕಾಡೆಮಿ, ಪ್ರಾಧಿಕಾರಗಳಲ್ಲಿ ಕಾರ್ಯಚಟುವಟಿಕೆ ನಡೆಯದೆ ನಿಂತ ನೀರಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ನೇಮಕ ನಡೆಯುವ ನಿರೀಕ್ಷೆ ಇದ್ದರೂ ನಡೆಯಲಿಲ್ಲ. ಮೊದಲ ಅಧಿವೇಶನ ಬೆನ್ನಲ್ಲೇ ನೇಮಕ ಪಟ್ಟಿ ಹೊರಬೀಳಲಿದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಇನ್ನೂ ಪ್ರಕ್ರಿಯೆ ನಡೆಯದಿರುವುದರಿಂದ ಅಕಾಡೆಮಿ, ಪ್ರಾಧಿಕಾರಗಳು ಜೀವಂತಿಕೆ ಕಳೆದುಕೊಂಡಿರುವುದು ಸಾಂಸ್ಕೃತಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

  ಕಳೆದ ಅವಧಿಯಲ್ಲಿ ಪ್ರಾಧಿಕಾರ, ಅಕಾಡೆಮಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ದೊರೆಯದ ಕಾರಣ ಯಾವುದೇ ಯೋಜನೆ ರೂಪುಗೊಳ್ಳಲಿಲ್ಲ. ಬಹುತೇಕ ಕಲಾ, ಸಾಂಸ್ಕೃತಿಕ ಯೋಜನೆಗಳು ಸ್ತಬ್ಧವಾಗಿದ್ದವು. ಆನ್‌ಲೈನ್ ಕಾರ್ಯಾಗಾರಗಳಿಗಷ್ಟೇ ಸೀಮಿತವಾಗಿದ್ದವು.
  *ನೇಮಕ ಪ್ರಕ್ರಿಯೆ?: ಇದೇ ಮೊದಲ ಬಾರಿಗೆ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಸಾಂಸ್ಕೃತಿಕ ಲೋಕದ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿ ನೀಡಿರುವ ಪಟ್ಟಿ ಆಧರಿಸಿ ನೇಮಕಾತಿ ನಡೆಯಲಿದೆ ಎನ್ನಲಾಗಿದೆ. ಜ.23ರಂದು ಉಡುಪಿಗೆ ಭೇಟಿ ನೀಡಿದ ಸಚಿವ ಶಿವರಾಜ ತಂಗಡಗಿ ವಾರದೊಳಗೆ ಅಕಾಡೆಮಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು.

  ಹಲವು ಆಕಾಂಕ್ಷಿಗಳು:

  ಕರಾವಳಿ ಕೇಂದ್ರೀಕೃತವಾಗಿರುವ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಅಕಾಡೆಮಿ ಹಾಗೂ ಯಕ್ಷರಂಗಾಯಣ ಅಧ್ಯಕ್ಷ ಗಾದಿಗೆ ಹಲವು ಮಂದಿ ತೆರೆಮರೆಯಲ್ಲಿ ಲಾಬಿ ನಡೆಸಿದ್ದಾರೆ. 2017 ಆಗಸ್ಟ್‌ನಲ್ಲಿ ಕಾಂಗ್ರೆಸ್ ಸರ್ಕಾರ ನೇಮಿಸಿದ ಸಮಿತಿಯನ್ನೇ ಮರು ನೇಮಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ. ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ಲೇಖಕಿಯರ ಸಂಘ ಇತ್ತೀಚೆಗೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಮಹಿಳೆಯರಿಗೆ ಸ್ಥಾನ ಸಿಗುವ ಸಾಧ್ಯತೆಯೂ ಇದೆ.

  ಸವಾಲುಗಳಿವೆ ಹಲವು:

  ಚಟುವಟಿಕೆಗಳಿಲ್ಲದೆ ನಿಷ್ಕ್ರಿಯವಾಗಿರುವ ಅಕಾಡೆಮಿಗಳಲ್ಲಿ ಮತ್ತೆ ಚಟುವಟಿಕೆಗೆ ಚಾಲನೆ ನೀಡಬೇಕಿದೆ ಜತೆಗೆ ರಾಜ್ಯದಲ್ಲಿ ತುಳುಭಾಷೆಗೆ ಎರಡನೇ ಭಾಷೆ ಸ್ಥಾನಮಾನ, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಸಹಿತ ಹಲವಾರು ಸವಾಲುಗಳಿವೆ. ಅಕಾಡೆಮಿ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳಿಗೂ ಘೋಷಣೆ ಸಾಧ್ಯವಾಗಿಲ್ಲ.

  ಅಧ್ಯಕ್ಷರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ. ಕಳೆದ ಚುನಾವಣೆಯಲ್ಲಿ ಪರಭಾವಗೊಂಡ ಪಕ್ಷದ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರ ಸಲಹೆ ಪಡೆದು ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಕಾಂಗ್ರೆಸ್ ಕಟ್ಟಾಳು, ಪಕ್ಷದ ಬಾವುಟ ಹಿಡಿದು ದುಡಿದವರಿಗೆ ಅವಕಾಶ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.
  – ಶಿವರಾಜ್ ತಂಗಡಗಿ, ಸಚಿವ, ಕನ್ನಡ ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

  See also  ರಾಹುಲ್ ಗಾಂಧಿ ಕೈಯಲ್ಲಿ ಗದೆ, ಮುಖಕ್ಕೆ ಹನುಮನ ಮಾಸ್ಕ್…ಈ ಫೋಟೋ ಅರ್ಥವೇನು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts