More

    ಕಾರ್ಲ ಕಜೆ ಬಿಡುಗಡೆಗೆ ಸಿದ್ಧ, 5000 ಕ್ವಿಂಟಾಲ್ ಭತ್ತ ಸಂಗ್ರಹ ಗುರಿ

    ಆರ್.ಬಿ.ಜಗದೀಶ್ ಕಾರ್ಕಳ
    ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗಿ ಕೃಷಿಯತ್ತ ಯುವ ಸಮುದಾಯವನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಬ್ರಾಂಡ್ ಕಾರ್ಕಳದಿಂದ ಹೊರಬರುತ್ತಿದೆ. ಅದುವೇ ಕಾರ್ಲ ಕಜೆ. ನೂತನ ಬ್ರಾಂಡ್‌ನ ಅಕ್ಕಿಯನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಜ.18ರಂದು ಬೆಳಗ್ಗೆ 10ಕ್ಕೆ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈದಾನದಲ್ಲಿ ಬಿಡುಗಡೆಗೊಳಿಸಲಿದ್ದಾರೆ.

    ಕಾರ್ಕಳದಲ್ಲಿ ಕಜೆ ಜಯ ರೈತರ ಅಚ್ಚುಮೆಚ್ಚಿನ ಬೆಳೆ. ಬೇರೆಬೇರೆ ತಳಿಯ ಭತ್ತ ಕಾರ್ಕಳದಲ್ಲಿ ಬೆಳೆಯುತ್ತಿದ್ದರೂ ಕಜೆ ಜಯವನ್ನು ರೈತರು ಕೈ ಬಿಟ್ಟಿಲ್ಲ. ಇಲ್ಲಿಯ ಹವಾಗುಣ ಮತ್ತು ಮಣ್ಣಿಗೆ ಕಜೆ ಜಯ ಒಗ್ಗಿಕೊಂಡಿದೆ. ಇತ್ತೀಚೆಗಿನ ಸಮೀಕ್ಷೆಯಂತೆ ಕಾರ್ಕಳದಲ್ಲಿ 350ಕ್ಕೂ ಹೆಚ್ಚು ರೈತರು ಕಜೆ ಜಯ ಬೆಳೆಯುತ್ತಿದ್ದಾರೆ. ಕರೊನಾದಿಂದ ಆರ್ಥಿಕತೆ ಕುಸಿತಗೊಂಡಿದ್ದರೂ ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಿರಲಿಲ್ಲ. ಇದೇ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತದ ಕಹಳೆ ಮೊಳಗಿಸಿದ್ದರು. ಆತ್ಮನಿರ್ಭರದ ಕನಸು ಹರಿದಾಡುತ್ತಿರುವಾಗಲೇ ಪ್ರಗತಿಪರ ಭತ್ತದ ಕೃಷಿಕರು ಸೇರಿ ಕಾರ್ಲ ಕಜೆ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಮಾಡುವ ಪ್ರಸ್ತಾಪ ಮುನ್ನೆಲೆಗೆ ತಂದರು.

    ಕಾರ್ಕಳ ಶಾಸಕರ ನೆರವು: ಕಾರ್ಲ ಕಜೆ ಮಾರುಕಟ್ಟೆ ಮಾಡುವ ಚಿಂತನೆಗೆ ಶಕ್ತಿ ತುಂಬಿದವರು ಶಾಸಕ, ಸರ್ಕಾರದ ಮುಖ್ಯ ಸಚೇತಕ ಸುನೀಲ್‌ಕುಮಾರ್. ಕೃಷಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು, ಭತ್ತದ ಬೆಳೆಗಾರರಿಗೆ ಬೆನ್ನೆಲುಬಾಗಿ ನಿಂತು, ಸ್ವಾತಂತ್ರೊೃೀತ್ಸವದಂದು ಕಾರ್ಲ ಕಜೆ ಮತ್ತು ಬಿಳಿ ಬೆಂಡೆಯನ್ನು ಕಾರ್ಕಳದ ಬ್ರಾಂಡ್ ಆಗಿ ರೂಪಿಸುವ ಘೋಷಣೆ ಮಾಡಿದರು. ಪ್ರಗತಿಪರ ಕೃಷಿಕರು, ಕೃಷಿ, ತೋಟಗಾರಿಕೆ ಅಧಿಕಾರಿಗಳು, ಕೃಷಿ ವಿಜ್ಞ್ಞಾನಿಗಳೊಂದಿಗೆ ಸಮಾಲೋಚಿಸಿ ಕಾರ್ಕಳದಲ್ಲಿ ಹೆಚ್ಚು ಪ್ರಚಲಿತವಿರುವ ಈ ಎರಡು ಕೃಷಿ ಉತ್ಪನ್ನಗಳ ಮುದ್ರಾಂಕಿತ(ಬ್ರಾಂಡಿಂಗ್)ಗೊಳಿಸುವ ಕುರಿತು ಕಾರ್ಯತತ್ಪರರಾಗುವಂತೆ ಸೂಚಿಸಿದರು.

    5000 ಕ್ವಿಂಟಾಲ್ ಭತ್ತ ಸಂಗ್ರಹ ಗುರಿ: ಕೃಷಿಕರ ಹಿತರಕ್ಷಣೆಯ ದೃಷ್ಟಿಯಿಂದಲೇ ಹುಟ್ಟಿಕೊಂಡ ಪರಂಪರಾ ವಿವಿಧೋದ್ದೇಶ ಸಹಕಾರ ಸಂಘ ಮತ್ತು ತೆಂಗು ಬೆಳೆಗಾರರ ಸಂಘ ನಿಟ್ಟೆ ಇವುಗಳ ಸಹಯೋಗದಲ್ಲಿ ಕಾರ್ಲ ಕಜೆ ಭತ್ತ ಉತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ ಮಾಡುವ ಜವಾಬ್ದಾರಿ ಹೆಗಲೇರಿಸಿಕೊಂಡಿದೆ. ಕಾರ್ಕಳ ಕಜೆ ಬ್ರಾಂಡಿಂಗ್ ಕುರಿತು ಮುಂದಡಿಯಿಟ್ಟಿರುವ ಪರಂಪರಾ ಸಂಸ್ಥೆ 1.5 ಕೋಟಿ ರೂಪಾಯಿಯ ಯೋಜನೆ ರೂಪಿಸಿದ್ದಾಗಿ ಸಂಸ್ಥೆಯ ಸಿಇಒ ಗಂಗಾಧರ ಪಣಿಯೂರ್ ತಿಳಿಸಿದ್ದಾರೆ.

    ರೈತರಿಗೇನು ಲಾಭ ?
    ಭತ್ತದ ಬೆಳೆ ಕಡಿಮೆಯಾಗುತ್ತಿರುವ ದಿನಗಳಲ್ಲಿ ಈ ಹೊಸ ಚಿಂತನೆ ಬೆಳೆಗಾರರಲ್ಲಿ ಭರವಸೆ ಮೂಡಿಸಲಿದೆ. ಭತ್ತದ ಬೆಳೆಯಿಂದ ಬದುಕು ಕಟ್ಟಿಕೊಳ್ಳಬಹುದು ಎಂಬ ವಿಶ್ವಾಸ ಮೂಡಿಸಬಹುದು. ತಾನೇ ಬೆಳೆದ ಭತ್ತದಿಂದ ತಯಾರಾದ ಗುಣಮಟ್ಟದ ಅಕ್ಕಿ ಪಡೆಯುತ್ತೇನೆ ಎಂಬ ಸಮಾಧಾನ. ಸಂಸ್ಕರಣೆ, ಮಾರಾಟ ಸೇರಿದಂತೆ ಗ್ರಾಮೀಣ ಭಾಗದ ಹಲವಾರು ಮಂದಿಗೆ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ. ಭತ್ತದಿಂದ ದೊರೆಯುವ ಉಪ ಉತ್ಪನ್ನಗಳಾದ ತೌಡು, ಭತ್ತದ ಹೊಟ್ಟು, ಜಾನುವಾರುಗಳು ಹೆಚ್ಚು ಇಷ್ಟಪಟ್ಟು ತಿನ್ನುವ ಪೋಷಕಾಂಶಯುಕ್ತ ಬೈಹುಲ್ಲು ಹೈನುಗಾರಿಕೆಗೂ ಪೂರಕವಾಗಲಿದೆ.

    ಕಾರ್ಕಳ ತಾಲೂಕಿನ ವ್ಯಾಪ್ತಿಯಲ್ಲಿ ಕಜೆ ಜಯ ಬೆಳೆಯುವ ರೈತರಿಂದ ಸುಮಾರು 5000 ಕ್ವಿಂಟಾಲ್ ಭತ್ತ ಸಂಗ್ರಹ, ಅದರ ಸಂಸ್ಕರಣೆ, ದಾಸ್ತಾನು, ಗುಣಮಟ್ಟ ಕಾಯ್ದುಕೊಳ್ಳುವಿಕೆಗೆ ರೂಪುರೇಷೆ ಹಾಕಿಕೊಳ್ಳಲಾಗಿದೆ. ಕಜೆ ಅಕ್ಕಿ ಬಹುಬೇಡಿಕೆಯಿರುವ ದ.ಕ, ಉಡುಪಿ ಜಿಲ್ಲೆಗಳಲ್ಲದೆ ರಾಜ್ಯವ್ಯಾಪಿ ಪರಿಚಯಿಸುವ, ಬೇಡಿಕೆ ಬಂದಲ್ಲಿ ಹೊರ ರಾಜ್ಯಗಳಿಗೂ ಕಳುಹಿಸುವ ಯೋಜನೆಯಿದೆ.
    -ನವೀನ್‌ಚಂದ್ರ ಜೈನ್, ಅಧ್ಯಕ್ಷರು, ಪರಂಪರಾ ವಿವಿಧೋದ್ದೇಶ ಸಹಕಾರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts