More

  ನೌಕರರ, ಕಾರ್ಮಿಕರ ಹಿತರಕ್ಷಣೆಯೇ ನನ್ನ ಗುರಿ

  ನೈಋತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿಕೆ

  ವಿಜಯವಾಣಿ ಸುದ್ದಿಜಾಲ ಉಡುಪಿ:
  ದುಡಿದು ತಿನ್ನುವ ನೌಕರರು ಹಾಗೂ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ತಡೆಯಲು, ನೊಂದವರ ಧ್ವನಿಯನ್ನು ಸದನದಲ್ಲಿ ಮಂಡಿಸಿ, ನ್ಯಾಯ ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದೇನೆ. 47 ವರ್ಷಗಳಿಂದ ಕಾರ್ಮಿಕ ಹಾಗೂ ನೌಕರರ ಸಂಟನೆಯ ಹಿನ್ನೆಲೆ ಹೊಂದಿದ್ದು, ಗೆಲ್ಲುವ ಭರವಸೆ ಇದೆ ಎಂದು ಆಯನೂರು ಮಂಜುನಾಥ ಹೇಳಿದರು.

  ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೀಗ ನಮ್ಮದೇ ಕಾಂಗ್ರೆಸ್​ ಸರ್ಕಾರ ಇದೆ. ಹೀಗಾಗಿ ಸರ್ಕಾರಿ/ಖಾಸಗಿ ನೌಕರರ, ಶಿಕ್ಷಕರ, ನಿರುದ್ಯೋಗಿ ಪದವೀಧರರ, ಸ್ವಯಂ ಉದ್ಯೋಗಿ ಪದವೀಧರರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

  ಸರ್ಕಾರವನ್ನೇ ಮಣಿಸಿದ ಐತಿಹಾಸಿಕ ಘಟನೆ

  ರಾಜ್ಯದ 411 ಸರ್ಕಾರಿ ಪ್ರ.ದ. ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 13,500 ಅತಿಥಿ ಉಪನ್ಯಾಸಕರಿಗೆ ಕರೊನಾ ಸಂದರ್ಭದಲ್ಲಿ 6 ತಿಂಗಳು ವೇತನ ನೀಡಿರಲಿಲ್ಲ. ಅವರ ಕುಟುಂಬಕ್ಕಾದ ಸಂಕಷ್ಟವನ್ನು ಹೇಳಲು ಸದನದಲ್ಲಿ ಕಾರ್ಯಕಲಾಪವನ್ನೇ ತಡೆಹಿಡಿದಾಗ ಮುಖ್ಯಮಂತ್ರಿಗಳೇ ಸದನಕ್ಕೆ ಆಗಮಿಸಿ ಸುಮಾರು 87.00 ಕೋಟಿ ರೂ. ಬಾಕಿ ವೇತನ ಬಿಡುಗಡೆ ಮಾಡಲು ಹೋರಾಟ ಮಾಡಿದ್ದೇನೆ. ಇದು ಆಡಳಿತ ಪಕ್ಷದ ಶಾಸಕನೊಬ್ಬ ಸರ್ಕಾರದ ವಿರುದ್ಧವೇ ಸೆಟೆದು ನಿಂತು, ಸರ್ಕಾರವನ್ನೇ ಮಣಿಸಿದ ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಐತಿಹಾಸಿಕ ಘಟನೆಯಾಗಿದೆ ಎಂದರು.

  ಕಾಂಗ್ರೆಸ್​ನ ಮನೆಗೆ ಬಂದೆ

  ಪ್ರತಿ ಚುನಾವಣೆಯಲ್ಲೂ ತಾವು ಪಕ್ಷ ಬದಲಾಯಿಸುತ್ತೀರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಕಾರ್ಮಿಕ ಸಂಘಟನೆಯ ಹಿನ್ನೆಲೆ ಉಳ್ಳವನು. ನೈತಿಕ ರಾಜಕಾರಣ ಮಾಡಿಕೊಂಡು ಬಂದವನು. ಕಾರ್ಮಿಕರ ಹೋರಾಟವೊಂದರಲ್ಲಿ 6 ಜನ ಮೃತಪಟ್ಟಾಗಲೂ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೌಜನ್ಯಕ್ಕೂ ನೋಡಲು ಬರಲಿಲ್ಲ. ಇದು ನನಗೆ ತೀವ್ರ ನೋವು ತಂದಿತ್ತು. ಅಲ್ಲದೆ, ಬಿಜೆಪಿಯಲ್ಲಿ ಹಿರಿಯ ಕಾರ್ಯಕರ್ತನಾದರೂ ಸಹ ಯಾವುದೇ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಲಾಗಿತ್ತು. ಹೀಗಾಗಿ ಬಿಜೆಪಿ ತ್ಯಜಿಸಿ ಬಸ್​ ನಿಲ್ದಾಣದಲ್ಲಿ ನಿಂತಿದ್ದೆ. ಬಂದ ಬಸ್​ ಏರಿ ಕಾಂಗ್ರೆಸ್​ನ ಮನೆಗೆ ಬಂದಿದ್ದೇನೆ ಎಂದರು.

  ರಘುಪತಿ ಭಟ್​ ಸ್ಪರ್ಧೆ ತೊಡಕಾಗದು

  ಕೆಲವರು ಪಕ್ಷದ ನೆಲೆಗಟ್ಟಿನಲ್ಲಿ ಹಾಗೂ ಇನ್ನೂ ಕೆಲವರು ವೈಯಕ್ತಿಕ ನೆಲೆಗಟ್ಟಿನಲ್ಲಿ ಹೋರಾಡುತ್ತಾರೆ. ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಟಿಕೆಟ್​ ಸಿಗಲಿಲ್ಲ ಎಂದು, ಕರಾವಳಿ ಭಾಗಕ್ಕೆ ಬಿಜೆಪಿಯಿಂದ ಅನ್ಯಾಯ ಆಗಿದೆ ಎಂದು ಪಕ್ಷೇತರರಾಗಿ ಇದೇ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ. ಅವರ ಸ್ಪರ್ಧೆಯಿಂದ ಕಾಂಗ್ರೆಸ್​ಗೆ ಹಾಗೂ ಅಭ್ಯರ್ಥಿಯಾದ ನನ್ನ ಗೆಲುವಿಗೆ ಏನೂ ತೊಡಕಾಗದು ಎಂದರು.

  ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ಕುಮಾರ್​ ಕೊಡವೂರು, ಉಪಾಧ್ಯಕ್ಷ ಕಿಶನ್​ ಹೆಗ್ದೆ ಕೊಳ್ಕೆಬೈಲ್​, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ .ಗಪೂರ್​, ಭಾಸ್ಕರ ರಾವ್​ ಕಿದಿಯೂರು, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​, ಪ್ರಸಾದ್​ ರಾಜ್​ ಕಾಂಚನ್​, ದಿನೇಶ್​ ಹೆಗ್ಡೆ ಮುಳವಳ್ಳಿ ಇದ್ದರು.

  ನಾಥ ಮಾದರಿಯಿಂದ ಕಾಂಗ್ರೆಸ್​ ಸರ್ಕಾರ ಅಲ್ಲಾಡದು

  ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರ ರಾಜ್ಯದಲ್ಲಿ ಆದಂತೆ ಕರ್ನಾಟಕದಲ್ಲೂ ನಾಥ ಮಾದರಿಯಲ್ಲಿ ಕಾಂಗ್ರೆಸ್​ ಸರ್ಕಾರ ಪತನ ಮಾಡುತ್ತೇವೆ ಎಂದಿದ್ದಾರೆ. ನಾಥ ಮಾದರಿಯಲ್ಲ, ಯಾವ ಮಾದರಿಯೂ ಸಹ ನಮ್ಮ ಕಾಂಗ್ರೆಸ್​ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರು ಈ ಹಿಂದೆ ಸರ್ಕಾರ ಇದ್ದಾಗ ಚೆನ್ನಾಗಿ ತಿನ್ನುತ್ತಿದ್ದರು. ಆದರೆ, ಕಾಂಗ್ರೆಸ್​ ಸರ್ಕಾರ ಬಂದ ಬಳಿಕ ಅವರಿಗೇನೂ ದಕ್ಕುತ್ತಿಲ್ಲ. ಈಗ ರಾಜ್ಯದಲ್ಲಿ ಬಡ ಜನರು, ಹಸಿದವರು ತಿನ್ನುತ್ತಿರುವುದನ್ನು ಅವರಿಗೆ ನೋಡಲು ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್​ ಸರ್ಕಾರ ಕೆಡವಲು ಯಾವೆಲ್ಲ ಮಾದರಿ ಸಿಗುತ್ತದೆ ಎಂದು ಹುಡುಕುತ್ತಿದ್ದಾರೆ ಎಂದು ಆಯನೂರು ಮಂಜುನಾಥ್​ ಟೀಕಿಸಿದರು.

  ಹಿಂದಿನ ಬಿಜೆಪಿ ಸರ್ಕಾರ ಕಾರ್ಮಿಕರ ಕೆಲಸದ ವೇಳೆಯನ್ನು 8ರಿಂದ 12 ಗಂಟೆಗೆ ಏರಿಕೆ ಮಾಡಿ ಅಮಾನವೀಯ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ. ಅವರ ಕೆಲಸದ ವೇಳೆಯನ್ನು ಮೊದಲಿನಂತೆ 8 ಗಂಟೆ ಎಂದು ತಿದ್ದುಪಡಿ ಮಾಡಿಸುವುದು ಹಾಗೂ 11,318 ನೌಕರರು 2004ಕ್ಕಿಂತ ಹಿಂದೆ ಆಯ್ಕೆಯಾಗಿ 2006ರಲ್ಲಿ ಸೇವೆಗೆ ಸೇರಿದ್ದಾರೆ. ಇವರನ್ನು ಒಪಿಎಸ್​ ವ್ಯಾಪ್ತಿಗೆ ಸೇರ್ಪಡೆಗೊಳಿಸುವವರೆಗೆ ನನ್ನ ಹೋರಾಟ ನಿಲ್ಲದು.

  ಆಯನೂರು ಮಂಜುನಾಥ. ಕಾಂಗ್ರೆಸ್​ ಅಭ್ಯರ್ಥಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts