More

    ರಾಜ್ಯಕ್ಕೆ ಮಾದರಿಯಾದ ಕಾರ್ಕಳ: ಸಚಿವ ವಿ.ಸುನೀಲ್‌ಕುಮಾರ್

    ಕಾರ್ಕಳ: ಕೋವಿಡ್ ತೀವ್ರತೆಯ ಕಾಲಘಟ್ಟದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಸವಲತ್ತುಗಳನ್ನು ಕಲ್ಪಿಸುವ ಜೊತೆಗೆ ಉನ್ನತೀಕರಣ ಗೊಳಿಸುವ ನಿಟ್ಟಿನಲ್ಲಿ ವಿವಿಧ ದಾನಿಗಳು, ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಮ್ಲಜನಕ ಘಟಕವೊಂದು ಸಿದ್ಧಗೊಂಡಿದೆ ಆ ಮೂಲಕ ರಾಜ್ಯಕ್ಕೆ ಕಾರ್ಕಳ ಮಾದರಿ ಎನಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು.
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಮತ್ತು ಸಂಘ-ಸಂಸ್ಥೆಗಳ ಮತ್ತು ದಾನಿಗಳ ಸಹಕಾರದಿಂದ ಕಾರ್ಕಳ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 300 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ನೆರವೇರಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ತಾಲೂಕಿನಲ್ಲಿ 1ನೇ ಡೋಸ್ ಲಸಿಕೆಯನ್ನು 1,53,453(ಶೇ.90)ಮಂದಿ ಪಡೆದಿದ್ದಾರೆ. 2ನೇ ಹಂತದ ಡೋಸ್ 66,256 (ಶೇ.60)ಮಂದಿಗೆ ನೀಡಲಾಗಿದೆ. ಲಸಿಕಾ ಅಭಿಯಾನದಲ್ಲಿ ವಿವಿಧ ಸಂಘ-ಸಂಸ್ಥೆಯ ಸದಸ್ಯರು ಸಕ್ರಿಯರಾಗಿದ್ದಾರೆ. ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಂಘ-ಸಂಸ್ಥೆಗಳು, ದಾನಿಗಳು ಸಹಕಾರಿಯಾದರೆ ಯೋಜನೆಗಳು ಇನ್ನಷ್ಟು ಜನರಿಗೆ ತಲುಪಲಿದೆ ಎಂದು ಸುನೀಲ್ ಕುಮಾರ್ ಹೇಳಿದರು.
    ರಾಜಾಪುರ ಸಾರಸ್ವತ ಕ್ರೆಡಿಟ್ ಕೋ- ಆಪರೇಟಿವ್ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದಾನ, ಧರ್ಮ ಮಾಡಿದಾಗ ಸಂತೃಪ್ತಿ ದೊರಕುತ್ತದೆ. ದಾನಿಗಳ ಸೇವೆ ಸಾರ್ಥಕವಾಗಲಿ. ದಾನವನ್ನು ಪಡೆದವರು ಸದುಪಯೋಗ ಪಡಿಸಿಕೊಂಡಾಗ ಸಮಾಜ ಸುಭಿಕ್ಷಗೊಳ್ಳಲು ಸಾಧ್ಯ ಎಂದರು.
    ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಗೋಡಂಬಿ ಉತ್ಪಾದಕ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವ, ಬೋಳ ಅಗ್ರೋ ಸಂಸ್ಥೆಯ ಬೋಳ ದಾಮೋದರ್ ಕಾಮತ್ ಶುಭಾಶಂಸನೆಗೈದರು.
    ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ, ತಹಸೀಲ್ದಾರ್ ಪ್ರಕಾಶ್ ಮರವಳ್ಳಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ತ, ತಾಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಸುಬ್ರಹಣ್ಯ ರಾವ್, ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ ರಾವ್ ಮೊದಲಾದವರು ಉಪಸ್ಥಿತರಿದ್ದರು.
    ಶಿವಕುಮಾರ್ ಪ್ರಾರ್ಥನೆ ನೆರವೇರಿಸಿದರು. ಶಶಾಂಕ್ ಸ್ವಾಗತಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಪ್ರಸ್ತಾವಿಸಿದರು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ಡಾ.ಮಾನಸ ವಂದಿಸಿದರು.

    ಕರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಪಪ್ರಚಾರ ನಡೆದಿತ್ತು. ಅದಕ್ಕೆ ಮೊದಲು ತುತ್ತಾದವರು ಜನಪ್ರತಿನಿಧಿಗಳು. ದೇಶ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲಸಿಕೆ ಅಭಿಯಾನ ನಡೆದಾಗಲೂ ಅಪಪ್ರಚಾರ ನಡೆದಿತ್ತು. ಲಸಿಕೆಯನ್ನು ಬಿಜೆಪಿಯವರು ಮಾತ್ರವೇ ಪಡೆಯಲಿ ಎಂದಿದ್ದರು. ಆ ನಂತರದಲ್ಲಿ ಲಸಿಕೆಗಾಗಿ ಮುಗಿಬಿದ್ದರು, ಲಸಿಕೆ ಸಿಗುವುದಿಲ್ಲ ಎಂಬ ಆರೋಪವೂ ಕೇಳಿಬಂತು.
    |ವಿ.ಸುನೀಲ್‌ಕುಮಾರ್, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts