More

    ಕರಾವಳಿಗೆ ಮೊದಲ ಕುಸ್ತಿ ಅಂಕಣ- ಸ್ಮಾರ್ಟ್‌ಸಿಟಿಯಿಂದ ನಿರ್ಮಾಣಕ್ಕೆ ಯೋಜನೆ, ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೂ ಬಳಕೆ

    ಶ್ರವಣ್ ಕುಮಾರ್ ನಾಳ, ಮಂಗಳೂರು

    ಪೈಲ್ವಾನ್‌ಗಳಿಗೆ ವಿಶ್ವದರ್ಜೆ ತರಬೇತಿ ಪಡೆಯಲು ಹಾಗೂ ಕಸರತ್ತು ನಡೆಸಲು ಕರಾವಳಿಯ ಮೊದಲ ಕುಸ್ತಿ ಅಂಕಣ(ಅಖಾಡ, ಗೋದ) ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಸ್ಮಾರ್ಟ್‌ಸಿಟಿ ವತಿಯಿಂದ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಕರಾವಳಿ ಜಿಲ್ಲೆಯಲ್ಲಿ ವಿಶ್ವದರ್ಜೆಯ ಪೈಲ್ವಾನ್‌ಗಳನ್ನು ರೂಪಿಸಲು ಹೇರಳ ಅವಕಾಶ ಇದೆ, ಆದರೆ ಸೂಕ್ತ ಕುಸ್ತಿ ಅಂಕಣ, ಗೋದಗಳು ಇಲ್ಲದ ಕಾರಣ ಇಲ್ಲಿನ ಪೈಲ್ವಾನ್‌ಗಳಿಗೆ ಅವಕಾಶ ತಪ್ಪುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎ ದರ್ಜೆಯ ಕುಸ್ತಿ ಮೈದಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸ್ಟೇಟ್‌ಬ್ಯಾಂಕ್ ಬಳಿ ಬೀದಿಬದಿ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಅಂಗಡಿ ನಿರ್ಮಿಸಲು ಯೋಚಿಸಿದ್ದ ಪ್ರದೇಶದಲ್ಲಿ ನೂತನ ಕುಸ್ತಿ ಅಂಕಣ ನಿರ್ಮಾಣವಾಗಲಿದ್ದು, ಒಂದು ಹಂತದ ನೀಲಿ ನಕ್ಷೆ ತಯಾರಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಹಮ್ಮಿಕೊಂಡಿದ್ದು, ಕುಸ್ತಿ ಅಖಾಡದ ಜತೆ ಸಣ್ಣ ಗ್ಯಾಲರಿ, ರೆಫ್ರಿ ರೂಂ, ಶೌಚಗೃಹ ಸಹಿತ ಮೂಲಸೌಕರ್ಯ ಗಳನ್ನು ಕಲ್ಪಿಸಲಾಗುತ್ತದೆ. ಮಣ್ಣು ಹಾಗೂ ಮ್ಯಾಟ್ ಕ್ರೀಡಾಂಗಣ ಇರಲಿದೆ. ಮುಂದಿನ ದಿನಗಳಲ್ಲಿ ಈ ಅಂಕಣವನ್ನು ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾಟಕ್ಕೂ ಬಳಸಿಕೊಳ್ಳಬಹುದು.

    ..ಜಿಲ್ಲೆಯಲ್ಲಿ ಸದ್ಯ ಸುಮಾರು 12 ವ್ಯಾಯಾಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಪುರುಷರು, ಮಹಿಳೆಯರು ಸಹಿತ ಸುಮಾರು 500 ಕುಸ್ತಿಪಟುಗಳು ಅಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ಅನುಕೂಲಕ್ಕೆ ಕುಸ್ತಿ ಮ್ಯಾಟ್ ವ್ಯವಸ್ಥೆ ಕೊರತೆ ಇದೆ. ಜಿಲ್ಲೆಯಲ್ಲಿ ದೊಡ್ಡಮಟ್ಟದ ಕುಸ್ತಿ ಪಂದ್ಯಾಟ ನಡೆಯಬೇಕಾದರೆ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣ ಅಥವಾ ನೆಹರು ಮೈದಾನವನ್ನೇ ಆಶ್ರಯಿಸಬೇಕಾಗುತ್ತದೆ. ಅಲ್ಲಿಯೂ ಪ್ರತ್ಯೇಕ ಬೆಡ್, ಮ್ಯಾಟ್ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.

    50 ವರ್ಷಗಳ ಇತಿಹಾಸ

    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಅನೇಕ ಕುಸ್ತಿಪಟುಗಳನ್ನು ನೀಡಿದೆ. ಇಂದಿಗೂ ಅನೇಕ ಗರಡಿಮನೆಗಳು ಕುಸ್ತಿಯ ಅಭ್ಯಾಸ ನೀಡುತ್ತ ಬಂದಿವೆೆ. ಒಂದು ಕಾಲದಲ್ಲಿ ಕರಾವಳಿಯಲ್ಲಿ 220ಕ್ಕೂ ಅಧಿಕ ಗೋದಗಳಿದ್ದವು. ಮಾಜಿ ಶಾಸಕ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ಎಂ.ಲೋಕಯ್ಯ ಶೆಟ್ಟಿ ಹಾಗೂ ಸಂಗಡಿಗರು ಸೇರಿ 50 ವರ್ಷದ ಹಿಂದೆ ದಕ್ಷಿಣ ಕನ್ನಡ ಅಮೆಚೂರ್ ಕುಸ್ತಿ ಸಂಘವನ್ನು ಹುಟ್ಟುಹಾಕಿ ಆ ಕಾಲದ ವಿಶ್ವವಿಖ್ಯಾತ ಕುಸ್ತಿಪಟು ಪೈಲ್ವಾನ್ ದಾರಾಸಿಂಗ್ ಅವರ ಮೂಲಕ ಉದ್ಘಾಟನೆಗೊಳಿಸಿತ್ತು. ಅಂದಿನ ಕಾಲದಲ್ಲಿಯೇ ಕುಸ್ತಿ ಪಂದ್ಯಾಟಗಳು ಮಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿವೆ. ಆ ಕಾಲದಲ್ಲಿ ಮಣ್ಣಿನ ನೆಲಹಾಸಿನಲ್ಲೇ ಪೈಲ್ವಾನ್‌ಗಳನ್ನು ತರಬೇತುಗೊಳಿಸಲಾಗುತ್ತಿತ್ತು.

    —————————————–

    ಕುಸ್ತಿಗೆ ಪ್ರೋತ್ಸಾಹ ನೀಡಲು ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಳಿ ಅಂಕಣ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ. ಸ್ಮಾರ್ಟ್ ಸಿಟಿ ವತಿಯಿಂದ ಕರಾವಳಿಯ ಮೊದಲ ಕುಸ್ತಿ ಅಂಕಣ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ. ವಿಶ್ವದರ್ಜೆಯ ತರಬೇತಿ ಹಾಗೂ ಕಸರತ್ತು ನಡೆಸಲು ಕರಾವಳಿಯಲ್ಲಿ ಕುಸ್ತಿ ಅಂಕಣ ಅಗತ್ಯ.

    ಡಿ. ವೇದವ್ಯಾಸ ಕಾಮತ್, ಶಾಸಕರು

    —————————————

    ಜಿಲ್ಲೆಯ ಕುಸ್ತಿಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ದೇಸಿ ಕ್ರೀಡೆ ಉಳಿಸಲು ದ..ಜಿಲ್ಲೆಯಲ್ಲಿ ಕುಸ್ತಿ ಅಂಕಣ ನಿರ್ಮಾಣ ಆಗಬೇಕು ಎಂಬುದು ದಶಕದ ಬೇಡಿಕೆ. ಸುಸಜ್ಜಿತ ಕುಸ್ತಿ ಅಂಕಣ ನಿರ್ಮಾಣ ನಿರ್ಮಾಣಗೊಂಡರೆ ಅನೇಕ ಕುಸ್ತಿ ಪ್ರತಿಭೆಗಳಿಗೆ ಅನುಕೂಲವಾಗಬಹುದು.

    ದಿಲ್‌ರಾಜ್ ಆಳ್ವ

    ಅಧ್ಯಕ್ಷ, .. ಜಿಲ್ಲಾ ಅಮೆಚೂರ್ ಕುಸ್ತಿ ಸಂಘ

    ——————————————-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts