More

    ರಿವರ್ ಫ್ರಂಟ್ ವಾಕ್ 10 ದಿನ ಮಾತ್ರ ಉಚಿತ!

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಕೆಲ ದಿನಗಳ ಹಿಂದಷ್ಟೇ ಸ್ಮಾರ್ಟ್‌ಸಿಟಿ ಯೋಜನೆಯಡಿ ಮಹತ್ವದ ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ಉದ್ಘಾಟನೆಯಾಗಿದೆ. ಆದರೆ ಸದ್ಯಕ್ಕೆ ಇದು ಸಾರ್ವಜನಿಕರಿಗೆ ಮುಕ್ತವಿಲ್ಲ. ಏಕೆಂದರೆ ಇದನ್ನು ಖಾಸಗಿಯವರ ಉಸ್ತುವಾರಿಗೆ ವಹಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ.

    ಸೌಂದರ್ಯೀಕರಣಗೊಂಡಿರುವ ತುಂಗಾ ದಡದ ಒಳಾಂಗಣದ ನಿರ್ವಹಣೆಗೆ ಸ್ಮಾರ್ಟ್‌ಸಿಟಿಯಲ್ಲೇ ಅನುದಾನ ಮೀಸಲಿರಿಸಲಾಗಿದೆ. 10 ವರ್ಷಗಳ ಕಾಲ ಇದೇ ಹಣದಲ್ಲಿ ನಿರ್ವಹಣೆಯಾಗಲಿದೆ. ಇಲ್ಲಿರುವ ಅಲಂಕಾರಿಕ ಹಾಗೂ ಹೂವಿನ ಗಿಡಗಳ ನಿರ್ವಹಣೆಗೆ ಇದರಲ್ಲಿ ಅವಕಾಶವಿದೆ. ಆದರೆ ಇಲ್ಲಿಗೆ ಅಗತ್ಯವಿರುವ ಸ್ವಚ್ಛತೆ ಹಾಗೂ ಭದ್ರತಾ ಸಿಬ್ಬಂದಿಗೆ ವೇತನ ನೀಡುವುದು, ನೆಲಹಾಸು ಹಾಳಾದರೆ ಅದನ್ನು ದುರಸ್ತಿ ಮಾಡುವುದು ಪಾಲಿಕೆಯ ಜವಾಬ್ದಾರಿಯಲ್ಲ. ಹೀಗಾಗಿ ಖಾಸಗಿಯವರಿಗೆ ವಹಿಸಲೇಬೇಕಾದ ಅನಿವಾರ್ಯತೆಯಿದೆ.
    ಗುಜರಾತ್‌ನ ಸಾಬರಮತಿ ನದಿ ದಂಡೆ ಅಭಿವೃದ್ಧಿಪಡಿಸಿರುವುದನ್ನು ಗಮನಿಸಿ ಶಿವಮೊಗ್ಗದಲ್ಲೂ ಕೈಗೊಂಡಿರುವ ಯೋಜನೆಯೇ ರಿವರ್‌ಫ್ರಂಟ್. 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆಯನ್ನು ಸುಸ್ಥಿತಿಯಲ್ಲಿ ನೋಡಿಕೊಳ್ಳುವುದೇ ಈಗ ನಿಜವಾದ ಸವಾಲು.
    ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾರ್ವಜನಿಕರಿಗೆ ಇಲ್ಲಿ ಉಚಿತ ಪ್ರವೇಶ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಅದು ಅಸಾಧ್ಯ ಎಂಬುದನ್ನು ಮನಗಂಡ ಅವರು, ಎಲ್ಲರೂ ಸೇರಿ ಸಭೆ ನಡೆಸಿ ಒಂದು ತೀರ್ಮಾನ ತೆಗೆದುಕೊಳ್ಳಿ ಎಂದು ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೆ ಹಾಕಿದ್ದರು.
    ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆದ ಬಳಿಕವಷ್ಟೇ ರಿವರ್‌ಫ್ರಂಟ್ ಯೋಜನೆ ಬಳಕೆ ಬಗ್ಗೆ ನಿರ್ದಿಷ್ಟ ತೀರ್ಮಾನ ಹೊರಬೀಳಲಿದೆ. ಅಲ್ಲಿಯವರೆಗೂ ತುಂಗಾ ನದಿ ದಂಡೆಯಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗದ ಗೇಟ್‌ಗಳಿಗೆ ಅಳವಡಿಸಿರುವ ಬೀಗ ತೆರೆಯುವುದಿಲ್ಲ.
    ಗೇಟ್‌ಗಳಿಗೆ ಬೀಗ:ರಿವರ್‌ಫ್ರಂಟ್ ಯೋಜನೆ ಉದ್ಘಾಟನೆಯಾಗಿದ್ದು ಕಳೆದ ತಿಂಗಳ 29ರಂದು. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಅಲ್ಲಿಗೆ ತೆರಳಿದ ನಾಗರಿಕರಿಗೆ ಶಾಕ್ ಕಾದಿತ್ತು. ಏಕೆಂದರೆ ನದಿ ದಂಡೆಗೆ ಸಂಪರ್ಕ ಕಲ್ಪಿಸುವ ಎಲ್ಲ ಗೇಟ್‌ಗಳಿಗೂ ಬೀಗ ಹಾಕಲಾಗಿತ್ತು. ವಾಸ್ತವ ಏನೆಂದರೆ ಸಾರ್ವಜನಿಕರ ಬಳಕೆಗೆ ಒದಗಿಸುವುದು ಹೇಗೆ ಎಂಬುದನ್ನು ಆಲೋಚಿಸದೇ ಅಧಿಕಾರಿಗಳು ಉದ್ಘಾಟನೆಗೆ ದಿನಾಂಕ ಫಿಕ್ಸ್ ಮಾಡಿದ್ದರು. ಹೀಗಾಗಿ ಇನ್ನೂ ಸಾರ್ವಜನಿಕರಿಗೆ ರಿವರ್‌ಫ್ರಂಟ್‌ನ ಸಂಪೂರ್ಣ ವೀಕ್ಷಣೆಯ ಭಾಗ್ಯ ದೊರಕದಂತಾಗಿದೆ.
    ನಿಗದಿಗೊಳ್ಳದ ಪ್ರವೇಶ ದರ: ಈಗ ಅಧಿಕಾರಿಗಳು ಹೇಳುವ ಪ್ರಕಾರ 10 ದಿನ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ನೀಡಲಾಗುತ್ತದೆ. ಆ ಸಂದರ್ಭದಲ್ಲಿ ಜನರಿಂದ ಸಿಗುವ ಸ್ಪಂದನೆ ಆಧಾರದಲ್ಲಿ ಪ್ರವೇಶ ಶುಲ್ಕ ಯಾವ ಪ್ರಮಾಣದಲ್ಲಿ ನಿಗದಿ ಮಾಡಬಹುದು, ಜನರಿಗೂ ಹೊರೆಯಾಗದಂತೆ ಅದರ ಉಸ್ತುವಾರಿಗೂ ತೊಂದರೆಯಾಗದಂತೆ ಎಷ್ಟು ಪ್ರವೇಶ ಶುಲ್ಕ ವಿಧಿಸಬಹುದು ಎಂಬುದನ್ನು ಅಧಿಕಾರಿಗಳು ಲೆಕ್ಕಾಚಾರ ಮಾಡಲಿದ್ದಾರೆ. ಬಳಿಕ ಖಾಸಗಿಯವರಿಗೆ ಇ-ಟೆಂಡರ್ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ.
    ಲಾಭ-ನಷ್ಟದ ಲೆಕ್ಕಾಚಾರ:ಬೈಪಾಸ್ ರಸ್ತೆ ಸೇತುವೆ ಬಳಿಯಿಂದ ಬೆಕ್ಕಿನಕಲ್ಮಠದವರೆಗೂ ತುಂಗಾ ನದಿಯ ಒಂದು ದಂಡೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕ್ರೀಡಾ ಸಂರ್ಕಿಣ, ಬಯಲು ರಂಗಮಂದಿರ, ಬೋಟಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲದಕ್ಕೂ ಶುಲ್ಕ ವಿಧಿಸಿ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡುವ ಬಗ್ಗೆಯೂ ಚಿಂತನೆ ನಡೆಯಲಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಆರಂಭದಲ್ಲಿ 10 ದಿನ ಮಾತ್ರ ಉಚಿತ ಬಳಿಕ ಶುಲ್ಕ ಖಚಿತ ಎನ್ನುವಂತಿದೆ.
    ಏನಿದು ಯೋಜನೆ?:ನದಿ ದಂಡೆಯ ಉದ್ದಕ್ಕೂ ಪಾದಚಾರಿ ಮಾರ್ಗ, ಸೈಕಲ್ ಪಥ, ವಿವಿಧ ಜಾತಿಯ ಅಲಂಕಾರಿಕ ಹಾಗೂ ಹೂವಿನ ಗಿಡಗಳು, ಮಕ್ಕಳಿಗಾಗಿ ವಿವಿಧ ಆಟಿಕೆಗಳ ಅಳವಡಿಕೆ, ಜಿಮ್ ಉಪಕರಣಗಳು, ವಿವಿಧ ಪ್ರಾಣಿಗಳ ಶಿಲ್ಪಕಲಾಕೃತಿಗಳು, ಗೋಡೆಗಳ ಮೇಲೆ ಆಕರ್ಷಣೀಯ ಚಿತ್ರಗಳು, 275 ಅಲಂಕಾರಿಕ ಕಂಬಗಳು, 11 ಕಲ್ಲಿನ ಮಂಟಪಗಳು, ಅಲಂಕಾರಿ ವಿದ್ಯುತ್ ದೀಪಗಳು ಹಾಗೂ ಗೋಪುರಗಳು ಇಲ್ಲಿವೆ. ನದಿಗೆ ಇಳಿಯಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕ ಶೌಚಗೃಹಗಳು, 12 ಶುದ್ಧ ಕುಡಿಯುವ ನೀರಿನ ಘಟಕಗಳು, ಆಹಾರ ಮಳಿಗೆಗಳು, ಉಪಹಾರ ಗೃಹಗಳು, ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹೀಗೆ ಮೂಲ ಸೌಕರ್ಯಗಳನ್ನೂ ಒದಗಿಸಲಾಗಿದೆ.
    ಜನರ ಸಹಕಾರವೂ ಅಗತ್ಯ:ಈಗಾಗಲೇ ಸ್ಮಾರ್ಟ್‌ಸಿಟಿ ಮೂಲಕ ನಗರದ ವಿವಿಧೆಡೆ ಸೌಂದರ್ಯ ಹೆಚ್ಚಿಸುವ ಶಿಲ್ಪಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಬಹಳಷ್ಟು ಶಿಲ್ಪಗಳು ಕಿಡಿಗೇಡಿಗಳ ಕೃತ್ಯದಿಂದ ಸೌಂದರ್ಯ ಕಳೆದುಕೊಂಡಿವೆ. ರಿವರ್‌ಫ್ರಂಟ್ ಕೂಡಾ ಅತ್ಯಾಕರ್ಷಕವಾಗಿದೆ. ಸಾರ್ವಜನಿಕರು ಅದನ್ನು ಕಣ್ತುಂಬಿಕೊಂಡರೆ ಸಾಕು. ಅದನ್ನು ಬಿಟ್ಟು ಹೂವಿನ ಗಿಡಗಳನ್ನು ಕೀಳುವುದು, ಕಲ್ಲಿನ ಕಂಬಗಳ ಮೇಲೆ ಶಕ್ತಿ ಪ್ರದರ್ಶನ ಮಾಡುವುದು, ನದಿಗೆ ಕಸ ಹಾಕುವುದನ್ನು ಮಾಡಿದರೆ ನಿಜವಾದ ಉದ್ದೇಶ ಈಡೇರುವುದಿಲ್ಲ. ಹೀಗಾಗಿ ಜನರ ಸಹಕಾರ ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts