More

    ಕಾಲೇಜಿಗಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ, ಯರಡೋಣಾ ಗ್ರಾಮದಿಂದ ಕಾರಟಗಿಗೆ 10ಕಿ.ಮೀ.ಪಾದಯಾತ್ರೆ

    ಕಾರಟಗಿ: ಯರಡೋಣಾ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗ್ರಾಮದಿಂದ ಪಟ್ಟಣದ ತಹಸಿಲ್ ಕಚೇರಿವರೆಗೆ ಬುಧವಾರ 10ಕಿ.ಮೀ ಪಾದಯಾತ್ರೆ ನಡೆಸಿದರು.

    ಗ್ರಾಮ ಹಾಗೂ ಸುತ್ತಲಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಮಂಜೂರಾಗಬೇಕೆನ್ನುವುದು ಹಲವು ವರ್ಷಗಳ ಬೇಡಿಕೆ. 2021ರ ಸೆ.1ರಂದು ಸರ್ಕಾರ ರಾಜ್ಯಾದ್ಯಂತ 361ಸರ್ಕಾರಿ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ ಪದವಿಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿತ್ತು. ಅದರಲ್ಲಿ ಯರಡೋಣಾ ಗ್ರಾಮವೂ ಒಂದಾಗಿತ್ತು. ಆಗ ಗ್ರಾಮಸ್ಥರು ಪಕ್ಷಾತೀತವಾಗಿ ಶಾಸಕ ಬಸವರಾಜ ದಢೇಸುಗೂರು ಅವರನ್ನು ಸನ್ಮಾನಿಸಿ ಸಂಭ್ರಮಿಸಿದರು.

    2022ರ ಸೆ.20ರಂದು ರಾಜ್ಯ ಸರ್ಕಾರ ಮೊದಲನೇ ಹಂತದಲ್ಲಿ ಅನುಮೋದಿತ ಪಟ್ಟಿಯಲ್ಲಿನ 46ಹೊಸ ಪದವಿಪೂರ್ವ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತು. ಆಗ ಗ್ರಾಮವನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಗ್ರಾಮಸ್ಥರ ನಿಯೋಗ ಶಾಸಕರನ್ನು ಭೇಟಿ ಮಾಡಿ ಕಾಲೇಜು ಮಂಜೂರುಗೊಳಿಸುವಂತೆ ಮನವಿಮಾಡಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ್ದ ಶಾಸಕ ದಢೇಸುಗೂರು, ಎರಡನೇ ಹಂತದಲ್ಲಿ ಗ್ರಾಮಕ್ಕೆ ಕಾಲೇಜು ಮಂಜೂರುಗೊಳಿಸುವ ಭರವಸೆ ನೀಡಿದ್ದರು. ಈಗ 2022ರ ಅ.31ರಂದು ಎರಡನೇ ಹಂತದಲ್ಲಿ ಅನುಮೋದಿತ ಪಟ್ಟಿಯಲ್ಲಿನ 29ಹೊಸ ಪ.ಪೂ.ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲೂ ಗ್ರಾಮಕ್ಕೆ ಕಾಲೇಜು ಮಂಜೂರಾಗಿಲ್ಲವಾದ್ದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಈಳಿಗನೂರು, ಎಚ್.ಬಸವಣ್ಣಾಕ್ಯಾಂಪ್, ಮುರಡಬಸವೇಶ್ವರ ನಗರ, ಮರ್ಲಾನಹಳ್ಳಿ ಹಾಗೂ ಯರಡೋಣಾ ಗ್ರಾಮಗಳು ಸೇರಿ ಪ್ರಸ್ತುತ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ 228ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತಿವರ್ಷ ಪದವಿಪೂರ್ವ ಕಾಲೇಜು ಅಭ್ಯಾಸಕ್ಕಾಗಿ 70ರಿಂದ 80ವಿದ್ಯಾರ್ಥಿಗಳು ಕಾರಟಗಿ, ಗಂಗಾವತಿ ಇತರೆಡೆ ತೆರಳುತ್ತಾರೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಯುವತಿಯರು ಹಾಗೂ ಬಡಮಕ್ಕಳು ಉನ್ನತ ವ್ಯಾಸಾಂಗದಿಂದ ವಂಚಿತರಾಗುತ್ತಿದ್ದಾರೆ. ಶಾಸಕ ಬಸವರಾಜ ದಢೇಸುಗೂರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಕಾಲೇಜು ಮಂಜೂರುಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಮತದಾನವನ್ನು ಸಾಮೂಹಿಕವಾಗಿ ಬಹಿಷ್ಕರಿಸುವ ಎಚ್ಚರಿಕೆಯನ್ನು ಪ್ರತಿಭಟನಾನಿರತರು ನೀಡಿದರು.

    400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನೂರಾರು ಜನ ಗ್ರಾಮಸ್ಥರು ಗ್ರಾಮದಿಂದ ತಹಸಿಲ್ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖ್ಯಮಂತ್ರಿ, ಶಿಕ್ಷಣ ಸಚಿವ, ಶಾಸಕರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಎಂ.ಬಸವರಾಜಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts