More

    ಕಪ್ಪತಗುಡ್ಡ ಕಲ್ಲಿನ ಕ್ವಾರಿಗಳು ನಿರಾತಂಕ!

    ಗದಗ: ಹತ್ತು ತಿಂಗಳ ನಂತರ ಅರಣ್ಯ ಇಲಾಖೆಯು ಕಪ್ಪತಗುಡ್ಡ ವನ್ಯಜೀವಿಧಾಮ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕಪ್ಪತಗುಡ್ಡ ವ್ಯಾಪ್ತಿಯಲ್ಲಿರುವ ಕಲ್ಲಿನ ಕ್ವಾರಿಗಳು ಮತ್ತು ಪವನ ವಿದ್ಯುತ್ ಘಟಕಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಗುಸುಗುಸು ಜಿಲ್ಲೆಯಲ್ಲಿ ಸದ್ದು ಮಾಡತೊಡಗಿದೆ.

    ಅಪರೂಪದ ವನಸಂಪತ್ತಿನ ಕಣಜ ಎನಿಸಿರುವ ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಸರ್ಕಾರ ಆದೇಶ ಹೊರಡಿಸಿ ಒಂಬತ್ತು ತಿಂಗಳು ಕಳೆದರೂ ಈ ಕುರಿತು ವರದಿ ಸಲ್ಲಿಸಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು. ಕ್ರಿಯಾಯೋಜನೆಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ ಜಿಲ್ಲಾಡಳಿತದ ವರ್ತನೆ ನೋಡಿದರೆ ಉಳ್ಳವರನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂಬ ವದಂತಿ ದಟ್ಟವಾಗಿದೆ.

    ವನ್ಯಜೀವಿಧಾಮ ಕುರಿತು ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಹಿನ್ನೆಲೆಯಲ್ಲಿ ಅರಣ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದರು. ವಿಷಯ ಸೂಕ್ಷ್ಮವಾಗಿರುವುದರಿಂದ ಎಲ್ಲ ಆಯಾಮಗಳಲ್ಲಿ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಆದರೆ, ಸಭೆಯಲ್ಲಿ ನಡೆದ ಚರ್ಚೆ ಕುರಿತು ಬಹಿರಂಗಪಡಿಸಲು ಆಗುವುದಿಲ್ಲ. ಕಪ್ಪತಗುಡ್ಡ ಉಳಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದ್ದರು.

    ಇದಲ್ಲದೆ, ಜಿಲ್ಲೆಯಲ್ಲಿ ಮೊದಲೇ ಕೈಗಾರಿಕೆಗಳಿಲ್ಲ. ಹೀಗಾಗಿ, ಕಲ್ಲಿನ ಕ್ವಾರಿಗಳಿಗೂ ನಿರ್ಬಂಧ ವಿಧಿಸಿದರೆ ಹೇಗೆ ಎಂಬ ವಿಷಯವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು. ಅಂತಿಮವಾಗಿ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಮುಂದೇನು ಮಾಡಬೇಕು ಎಂಬುದನ್ನು ಅಂತಿಮಗೊಳಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿವರಣೆ ನೀಡಿದ್ದರು.

    ಈ ವಿಷಯಗಳನ್ನು ಗಮನಿಸಿದರೆ ಕಲ್ಲಿನ ಕ್ವಾರಿಗಳು ಮತ್ತು ಪವನ ವಿದ್ಯುತ್ ಘಟಕಗಳ ಬಗ್ಗೆ ಜಿಲ್ಲಾಡಳಿತ ಮೃದು ಧೋರಣೆ ತಳೆದಿದೆ ಎಂಬ ಅನುಮಾನ ಶುರುವಾಗಿತ್ತು. ಇದೀಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲೂ ಪವನ ವಿದ್ಯುತ್ ಮತ್ತು ಕಲ್ಲಿನ ಕ್ವಾರಿಗಳಿಗೆ ವಿನಾಯಿತಿ ನೀಡಿ ವರದಿ ಸಿದ್ಧಪಡಿಸಲಾಗಿದೆ ಎಂಬ ಸಂಗತಿಗೆ ಮತ್ತಷ್ಟು ಇಂಬು ದೊರೆತಂತಾಗಿದೆ.

    ಕಾಂಗ್ರೆಸ್ ಜೆಡಿಎಸ್ ಸರ್ಕಾರವು 2019ರ ಮೇ 6ರಂದು ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೊಷಿಸಿತ್ತು. ಒಂಬತ್ತು ತಿಂಗಳು ಗತಿಸಿದರೂ ವರದಿ ಸಿದ್ಧಪಡಿಸಲು ಅಧಿಕಾರಿಗಳು ತಯಾರಿಸಿರಲಿಲ್ಲ. ಕಾಣದ ಕೈಗಳು ವನ್ಯಜೀವಿಧಾಮ ಯೋಜನೆ ಜಾರಿಗೆ ಕೊಕ್ಕೆ ಹಾಕತೊಡಗಿವೆ ಎಂಬ ಆರೋಪಗಳು ಸದ್ದು ಮಾಡತೊಡಗಿವೆ.

    ಸೂಕ್ಷ್ಮ ಪ್ರದೇಶದಲ್ಲಿ ಕೈಗಾರಿಕೆಗಿಲ್ಲ ಅವಕಾಶ

    ಕಪ್ಪತಗುಡ್ಡದಲ್ಲಿರುವ 33 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 24,415 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿಧಾಮ ಪ್ರದೇಶ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬ್ಲಾಕ್ 1, ಬ್ಲಾಕ್ 2, ಬ್ಲಾಕ್ 3, ಮತ್ತು ಬ್ಲಾಕ್ 4 ಎಂದು ನಾಲ್ಕು ವಲಯಗಳನ್ನು ಮಾಡಲಾಗಿದೆ. ಪ್ರತಿ ಬ್ಲಾಕ್​ಗೂ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಬೇಕು. 100 ಮೀಟರ್​ನಿಂದ 10 ಕಿಮೀ ವ್ಯಾಪ್ತಿಯೊಳಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಬೇಕು. ಇದು ನಿಷೇಧಿತ ಪ್ರದೇಶವಾಗಿರುವುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವಂತಹ ಗಣಿಗಾರಿಕೆ, ಕ್ವಾರಿಗಳ ಕಾರ್ಯನಿರ್ವಹಣೆ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಎಲ್ಲ ತರಹದ ಕೈಗಾರಿಕೆಗಳನ್ನು ನಡೆಸಲು ಅವಕಾಶ ಇಲ್ಲ. ಇದೆಲ್ಲವನ್ನೂ ನಿರ್ಧರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಪಂ ಸಿಇಒ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. 100 ಮೀಟರ್​ನಿಂದ 10 ಕಿಮೀವರೆಗೂ ಪರಿಸರ ಸೂಕ್ಷ್ಮ ಪ್ರದೇಶ ಎಂದು ಡಿಕ್ಲೇರ್ ಮಾಡುವ ಅವಕಾಶ ಇರುತ್ತದೆ. ಇಂತಹ ಎಲ್ಲ ಅಂಶಗಳನ್ನು ಒಳಗೊಂಡಂತೆ ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ. ಆದರೆ, ಜಿಲ್ಲಾಡಳಿತ ಕಳಿಸಿರುವ ವರದಿಯಲ್ಲಿ ಏನಿದೆ ಎಂಬ ಅಂಶಗಳ ಬೆಳಕಿಗೆ ಬರಬೇಕಿದೆ.

    ಕಪ್ಪತಗುಡ್ಡ ವನ್ಯಜೀವಿಧಾಮ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಜನಪರವಾಗಿ ವರದಿ ಸಿದ್ಧ್ದಡಿಸಲಾಗಿದೆ.

    |ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ಗದಗ

    ವನ್ಯಜೀವಿಧಾಮ ಕುರಿತು ಜನಪರವಾಗಿಯೇ ನಿರ್ಣಯ ಕೈಗೊಳ್ಳಲಾಗುವುದು. ವಿಷಯ ಗಂಭೀರವಾಗಿದ್ದು ಎಲ್ಲ ವಿಷಯಗಳ ಕುರಿತು ರ್ಚಚಿಸಿ ನಿರ್ಣಯಿಸಲಾಗುವುದು. ಇದರಲ್ಲಿ ಸಂಶಯವೇ ಬೇಡ.

    |ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts