More

    ಕಪ್ಪತಗುಡ್ಡದಲ್ಲಿ ಅಭಿವೃದ್ಧಿ ಮರೀಚಿಕೆ

    ಸಂತೋಷ ಮುರಡಿ ಮುಂಡರಗಿ

    ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲ್ಪಡುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಅಪಾರ ಆಯುರ್ವೆದ ಸಸ್ಯ ಸಂಪತ್ತು ಹೊಂದಿದೆ. ಕಪ್ಪತಗುಡ್ಡ ಅರಣ್ಯ ಪ್ರದೇಶವು ವನ್ಯಜೀವಿಧಾಮವಾಗಿದ್ದರೂ ಇಲ್ಲಿ ಅಭಿವೃದ್ಧಿ ಕಾರ್ಯಗಳು ವಿರಳವಾಗಿರುವುದು ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

    ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರವರೆಗೆ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತಾರವಿರುವ ಕಪ್ಪತಗುಡ್ಡ ಒಟ್ಟು 63 ಕಿಮೀ ಉದ್ದವಿದೆ. ಸಮುದ್ರದ ಮಟ್ಟದಿಂದ 2700 ಅಡಿ ಎತ್ತರದಲ್ಲಿದೆ. ಕೆಂಪುಮಿಶ್ರಿತ ಮಣ್ಣು ಮತ್ತು ವಿವಿಧ ನಮೂನೆಯ ಬೆಟ್ಟಗಳ ಸಂಗಮವಾಗಿದೆ.

    ರಾಜ್ಯ ಸರ್ಕಾರ 2019ರಲ್ಲಿ ಕಪ್ಪತಗುಡ್ಡದ 24, 415.73 ಹೆಕ್ಟೇರ್ ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮವೆಂದು ಘೊಷಣೆ ಮಾಡಿದೆ. ಆದರೆ, ಕಪ್ಪತಗುಡ್ಡ ಅರಣ್ಯ ಪ್ರದೇಶದ ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಬಜೆಟ್​ನಲ್ಲೂ ಕಪ್ಪತಗುಡ್ಡ ಅಭಿವೃದ್ಧಿಗೆ ಪ್ರತ್ಯೇಕವಾಗಿ ಯಾವುದೇ ಯೋಜನೆ ಕೈಗೊಂಡಿಲ್ಲ.

    ಬೇಸಿಗೆ ಪ್ರಾರಂಭವಾದರೆ ಸಾಕು ಕಪ್ಪತಗುಡ್ಡ ಅರಣ್ಯದಲ್ಲಿ ಬೆಂಕಿ ಕಾಣಿಸುವುದು ಸರ್ವೆ ಸಾಮಾನ್ಯ. ಪದೇಪದೆ ಬೆಂಕಿ ಬೀಳುತ್ತಿರುವುದರಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ಬೆಂಕಿಗಾಹುತಿಯಾಗುತ್ತಿದೆ. ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಳ್ಳುವುದರ ಜತೆಗೆ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ.

    423 ಔಷಧಿ ಸಸ್ಯ: ಕಪ್ಪತಗುಡ್ಡದಲ್ಲಿ 423ಕ್ಕೂ ಹೆಚ್ಚು ವಿವಿಧ ಜಾತಿಯ ಔಷಧ ಸಸ್ಯಗಳನ್ನು ಗುರುತಿಸಲಾಗಿದೆ. ಅಂಟುವಾಳ, ತುಳಸಿ, ನೆಲಬೇವು, ಲೋಳೆಸರ, ಕಣಗಲಿ, ಅಡುಸೋಗೆ, ಎಕ್ಕೆ, ಉತ್ತರಾಣಿ, ದತ್ತೂರಾ, ಮುತ್ತಗ, ಶತಾವರಿ, ಗುಲಗಂಜಿ, ಬ್ರಾಹ್ಮಿ, ಅಶ್ವಗಂಧ, ಅಮೃತಬಳ್ಳಿ, ಮೊದಲಾದ ಸಸ್ಯಗಳಿವೆ. ಕಪ್ಪತಗುಡ್ಡ ಮಣ್ಣಿನಲ್ಲಿ ಕಬ್ಬಿಣದ ಅದಿರಿನಂಶವು ಶೇ.60 ರಿಂದ 63 ರಷ್ಟಿದ್ದ್ದು ಅದರ ಅದಿರಾದ ಹೆಮಟೈಟ್, ಲೈಮೋಟೈಟ್, ಸೈಡರೈಟ್ ರೂಪದಲ್ಲಿದೆ. ಇದರ ಜತೆಗೆ ಇಲ್ಲಿ ಬಂಗಾರ, ಮ್ಯಾಂಗನೀಸ್, ತಾಮ್ರ, ಕ್ಯಾಲ್ಸಿಯಂ ಮತ್ತಿತರ 18 ಖನಿಜಗಳು ಹೇರಳವಾಗಿವೆ. ಇಂತಹ ಖನಿಜಭರಿತ ಭೂಮಿಯಲ್ಲಿ ಬೆಳೆಯುವ ಔಷಧ ಸಸ್ಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ.

    ವಿಶೇಷ ಯೋಜನೆಗೆ ಒತ್ತಾಯ: ಕಪ್ಪತಗುಡ್ಡದಲ್ಲಿ ಆಯುರ್ವೆದ ಔಷಧಗಳ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು. ವಿವಿಧೆಡೆ ಚೆಕ್​ಪೋಸ್ಟ್, ವಾಚ್ ಟವರ್​ಗಳನ್ನು ನಿರ್ವಿುಸಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವುದು, ಕಪ್ಪತಗುಡ್ಡದಲ್ಲಿರುವ ಎಲ್ಲ ಔಷಧ ಸಸ್ಯಗಳನ್ನು ಒಂದೇ ಕಡೆ ವೀಕ್ಷಿಸಲು ಅನುಕೂಲವಾಗುವಂತೆ ಔಷಧ ವನ ನಿರ್ವಣ. ಕಪ್ಪತಗುಡ್ಡದಲ್ಲಿನ ಕೆರೆಗಳ ಹೂಳು ತೆಗೆಯುವುದು ಮತ್ತು ಅಗತ್ಯವಿದ್ದಲ್ಲಿ ಹೊಸ ಕೆರೆಗಳ ನಿರ್ವಣ, ಮಣ್ಣು ಮತ್ತು ನೀರು ಸಂರಕ್ಷಣೆ, ತುಂಗಭದ್ರಾ ನದಿ ನೀರಿನಿಂದ ಅರಣ್ಯದಲ್ಲಿನ ಕೆರೆಗಳನ್ನು ತುಂಬಿಸುವುದು, ಬೆಂಕಿ ಬೀಳದಂತೆ ಮುಂಜಾಗ್ರತೆ ಕ್ರಮ ಜಾರಿಗೊಳಿಸುವುದು. ಹೀಗೆ ವಿಶೇಷ ಯೋಜನೆಗಳನ್ನು ಕೈಗೊಂಡು ಕಪ್ಪತಗುಡ್ಡದ ಅಭಿವೃದ್ಧಿಗೆ ಮುಂದಾಗಬೇಕು ಎನ್ನುವುದು ಪರಿಸರವಾದಿಗಳ ಒತ್ತಾಯ.

    ಕಪ್ಪತಗುಡ್ಡದಲ್ಲಿನ ಔಷಧ ಸಸ್ಯಗಳು, ಸುಗಂಧದ್ರವ್ಯ ಸಸ್ಯಗಳು, ಕಾಡುಹಣ್ಣಿನ ಸಸ್ಯಗಳ ಸಂರಕ್ಷಣೆ, ಸಂಶೋಧನೆ ಮಾಡುವುದರ ಜತೆಗೆ ಅವುಗಳ ಅಧ್ಯಯನ ಕೇಂದ್ರವನ್ನು ತೆರೆಯಬೇಕು. ತುಂಗಭದ್ರಾ ನದಿ ನೀರಿಂದ ಕಪ್ಪತಗುಡ್ಡದಲ್ಲಿನ ಕೆರೆಗಳನ್ನು ತುಂಬಿಸುವ ಮೂಲಕ ಪ್ರಾಣಿ, ಪಕ್ಷಿಗಳಿಗೆ ಅನುಕೂಲ ಮಾಡುವುದರೊಂದಿಗೆ ಅಂತರ್ಜಲಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಬೇಕು. ಜಿಂಕೆ ವನ ನಿರ್ವಿುಸಬೇಕು. ಜನರ ಸಹಭಾಗಿತ್ವದಲ್ಲಿ ಕಪ್ಪತಗುಡ್ಡ ಉಳಿಸಿ, ಬೆಳೆಸುವಂತಾಗಬೇಕು. ಸರ್ಕಾರ ಕಪ್ಪತಗುಡ್ಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಮೂಲಕ ಕಪ್ಪತಗುಡ್ಡ ಅರಣ್ಯ ಪ್ರದೇಶದ ರಕ್ಷಣೆ ಜತೆಗೆ ಅಭಿವೃದ್ಧಿಗೆ ಮುಂದಾಗಬೇಕು.

    ಶಿವಕುಮಾರ ಸ್ವಾಮೀಜಿ. ನಂದಿವೇರಿಮಠ ಕಪ್ಪತಗುಡ್ಡ ಗದಗ

    ಕಪ್ಪತಗುಡ್ಡ ವನ್ಯಜೀವಿಧಾಮ ಅರಣ್ಯ ಪ್ರದೇಶಕ್ಕೆ ಒಳಪಡುವ ವ್ಯಾಪ್ತಿಯಲ್ಲಿ ಸುತ್ತಲೂ ತಂತಿಬೇಲಿ ಹಾಕಬೇಕು. ಬೆಂಕಿ ಬೀಳದಂತೆ ಮುಂಜಾಗ್ರತೆ ವಹಿಸುವುದಕ್ಕೆ ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು. ಕಪ್ಪತಗುಡ್ಡದ ರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

    | ಸಿ.ಎಸ್. ಅರಸನಾಳ, ಜಿಲ್ಲಾ ವನ್ಯಜೀವಿ ಪರಿಪಾಲಕ

    ಕಪ್ಪತಗುಡ್ಡ ಅರಣ್ಯ ಪ್ರದೇಶವು ವನ್ಯಜೀವಿಧಾಮವಾದ ನಂತರ 3 ವಲಯದಲ್ಲಿ 7 ಕಾವಲುಗಾರರ ಕ್ಯಾಂಪ್ ಮಾಡಲಾಗಿದೆ. 3 ಚೆಕ್ ಪೋಸ್ಟ್, 2 ವಾಚ್ ಟವರ್ ನಿರ್ವಿುಸುವುದು ಸೇರಿ ಮತ್ತಿತರರ ಕೆಲಸ ಮಾಡಲಾಗಿದೆ. ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    |ಸೂರ್ಯಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts