More

    50 ಲಕ್ಷ ರೂ. ಉಳಿತಾಯ ಬಜೆಟ್

    ವಿರಾಜಪೇಟೆ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ 2024-25 ನೇ ಸಾಲಿನ 50.33 ಲಕ್ಷ ರೂ.ಗಳ ಉಳಿತಾಯ ಬಜೆಟ್ ಅನ್ನು ಪುರಸಭೆಯ ಮುಖ್ಯಾಧಿಕಾರಿ ಎ.ಚಂದ್ರಕುಮಾರ್ ಸೋಮವಾರ ಮಂಡಿಸಿದರು.

    ಪುರಸಭೆಯ ಆಡಳಿತಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಬೋಯಿಕೇರಿ, ಕೆದಮುಳ್ಳೂರು, ಆರ್ಜಿ, ಅಂಬಟ್ಟಿ ಮತ್ತು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಗಳ ಭಾಗಶಃ ಪ್ರದೇಶಗಳು ಸೇರ್ಪಡೆಯಾಗಿವೆ. ಹೀಗಾಗಿ ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿದೀಪ ವ್ಯವಸ್ಥೆ ವೈಜ್ಞಾನಿಕವಾಗಿ ಆಗಬೇಕಾಗಿದೆ. ಇದಕ್ಕಾಗಿ ಆರ್ಥಿಕವಾಗಿ ಪುರಸಭೆ ಸದೃಢಗೊಳಿಸಲು ಆದಾಯ ಮೂಲಗಳಿಂದ ತೆರಿಗೆ ಸಂಗ್ರಹಿಸುವುದು, ಸರ್ಕಾರದಿಂದ ಬಿಡುಗಡೆಯಾಗುವ ನಗರೋತ್ಥಾನ ಅನುದಾನ, ಎಸ್‌ಎಫ್‌ಸಿ ಅನುದಾನವನ್ನು ಅಂದಾಜಿಸಿಕೊಂಡು ಆಯವ್ಯಯ ಮಂಡನೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಪುರಸಭೆಗೆ ವಿವಿಧ ಮೂಲಗಳಿಂದ 872.31 ಲಕ್ಷ ರೂ. ಆದಾಯ, ವೆಚ್ಚದ ಮೂಲಗಳು ಒಟ್ಟು 438.52 ಲಕ್ಷ ರೂ., 2024-25ನೇ ಸಾಲಿಗೆ ನಿರೀಕ್ಷಿತ ಆದಾಯ 872.31 ಲಕ್ಷ ರೂ., ನಿರೀಕ್ಷಿತ ವೆಚ್ಚ 1302.60 ಲಕ್ಷ ರೂ., ನಿರೀಕ್ಷಿತ ಉಳಿತಾಯ 50.33 ಲಕ್ಷ ರೂ.ಗಳನ್ನು ಬಜೆಟ್‌ನಲ್ಲಿ ಒಳಗೊಂಡಿದೆ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.

    ಸಭೆಯಲ್ಲಿ ಸಿ.ಕೆ.ಪೃಥ್ವಿನಾಥ್ ಮಾತನಾಡಿ, ಹಿಂದಿನ ಬಜೆಟ್‌ನಲ್ಲಿ ಶವ ಸಂಸ್ಕಾರಕ್ಕೆ 2000 ರೂ. ನಿಗದಿಗೊಳಿಸಿ, 2 ಲಕ್ಷ ರೂ. ಮೀಸಲಿರಿಸಲಾಗಿತ್ತು. ಪ್ರಸ್ತುತ ಸಾಲಿನಲ್ಲೂ 2 ಲಕ್ಷ ರೂ. ಮೀಸಲಿಡಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ 3000 ರೂ.ಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಮುಖ್ಯಾಧಿಕಾರಿ ಒಪ್ಪಿಗೆ ಸೂಚಿಸಿದರು.

    ಕುಡಿಯುವ ನೀರು ಕರ ಪ್ರಸ್ತುತ 130 ರೂ.ಗಳಾಗಿದ್ದು, 10 ರೂ.ಗಳನ್ನು ಕಡಿತಗೊಳಿಸಿ ಜನಸಾಮಾನ್ಯರಿಗೆ ಹೊರೆಯನ್ನು ಕಡಿಮೆ ಮಾಡಿ ಎಂದು ಪ್ರಥ್ವಿನಾಥ್ ಮನವಿ ಮಾಡಿದರು. ಇದಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಧ್ವನಿಗೊಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ಪುರಸಭೆಯ ಆದಾಯದ ಮೂಲಗಳಿಗೆ ಧಕ್ಕೆಯಾಗಲಿದೆ. ಹೊಂದಾಣಿಕೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ವಿಶೇಷ ಅನುದಾನಗಳನ್ನು ಹೊಂದಾಣಿಕೆ ಮಾಡಿಕೊಂಡು ದರ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

    ಆಗಸ್ಟೀನ್ ಭೆನ್ನಿ ಮಾತನಾಡಿ, ನೆಹರುನಗರ ವಾರ್ಡಿನಲ್ಲಿ 5 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಪುರಸಭೆಯು ನೀರಿನ ಕರವನ್ನು ಕಡಿಮೆ ಮಾಡದೆ ಪೂರ್ಣ ಹಣವನ್ನು ಪಡೆಯುತ್ತಿದೆ. ಹೀಗಾಗಿ ತಿಂಗಳ ಎಲ್ಲ ದಿನಗಳು ಕುಡಿಯುವ ನೀರುವ ಸರಬಾರಾಜು ಮಾಡುವಂತೆ ಆಗ್ರಹಿಸಿದರು.

    ರಜನಿಕಾಂತ್ ಮಾತನಾಡಿ, ವಾರ್ಡ್‌ನಲ್ಲಿ ಬೋರ್‌ವೆಲ್ ಸ್ಥಗಿತಗೊಂಡು ಹಲವು ವರ್ಷಗಳು ಕಳೆದಿವೆ. ಆದರೆ, ದುರಸ್ತಿ ಮಾಡಲು ಪುರಸಭೆ ಮುಂದಾಗಿಲ್ಲ. ನಗರದ ಹಲವು ಭಾಗಗಳಲ್ಲಿ ಬೋರ್‌ವೆಲ್ ದುರಸ್ತಿಗೊಳಿಸಿದರೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    ಮುಖ್ಯಾಧಿಕಾರಿ ಮಾತನಾಡಿ, ಕುಡಿಯುವ ನೀರು ಶಾಶ್ವತ ಯೋಜನೆ ರೂಪಿಸಲು ಶಾಸಕರು ಕೆಲವು ದಿನಗಳ ಹಿಂದೆ 55 ಕೋಟಿ ರೂ. ವೆಚ್ಚದ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಂಡು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗಲಿದೆ. ಎಲ್ಲಿಯೂ ಕುಡಿಯುವ ನೀರು ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.

    ಸಭೆಯಲ್ಲಿ ಮಾಜಿ ಉಪಾಧ್ಯಕ್ಷರಾದ ವಿನಾಂಕ್ ಕುಟ್ಟಪ್ಪ, ಸದಸ್ಯರಾದ ಪೂರ್ಣಿಮಾ, ಫಾಸೀಯ ತಬ್ಸಂ, ಮೊಹಮ್ಮದ್ ರಾಫಿ, ಎಸ್.ಎಚ್.ಮತೀನ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts