More

    ವರ್ಷಾಂತ್ಯಕ್ಕೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ: ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿಕೆ

    ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆ, ಮುಂಬರುವ ದಕ್ಷಿಣ ಶಿಕ್ಷಕರ ಚುನಾವಣೆ ಹಾಗೂ ಮಳೆಗಾಲದ ನಂತರ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿದರು.
    ನಗರದ ಎಸ್.ಬಿ ಎಜುಕೇಷನ್ ಟ್ರಸ್ಟ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮ್ಮೇಳನದ ಪುಸ್ತಕ ಪ್ರಕಟಣ ಸಮಿತಿಯ ಎರಡನೇ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ಬಳಿಕ ಸರ್ಕಾರದೊಂದಿಗೆ ಮಾತನಾಡಿ ದಿನಾಂಕ ನಿಗದಿಪಡಿಸಲಾಗುವುದು. ನದಿಗೆ ಸಾವಿರಾರು ತೊರೆಗಳು ಸೇರುವಂತೆ ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
    ಸಮ್ಮೇಳನದಲ್ಲಿ ಪ್ರಕಟವಾಗುವ ಪುಸ್ತಕಗಳು ಜನತೆ ಒಪ್ಪಿಕೊಳ್ಳುವ ರೀತಿ ಪರಿಪೂರ್ಣತೆಯಿಂದ ಇರಬೇಕು. ವ್ಯಾಕರಣ, ಕಾಗುಣಿತ ದೋಷಗಳಿಲ್ಲದೇ 80 ಪುಟದ ಮಿತಿಯೊಳಗಿರಬೇಕು. ಪ್ರಕಟಣಾ ಸಮಿತಿ ಸೌಹಾರ್ದ ಸಂಬಂಧದಿಂದ ಕೆಲಸ ಮಾಡಬೇಕು. ಸಮ್ಮೇಳನಕ್ಕೆ ಒಂದು ತಿಂಗಳ ಮುಂಚೆ ಪ್ರಕಟಿತ ಪುಸ್ತಕಗಳು ಸಿದ್ದಗೊಳ್ಳುವಂತಿರಬೇಕು. ರಾಜ್ಯಮಟ್ಟದ ಸಮಿತಿ ಎಲ್ಲ ದೃಷ್ಟಿಕೋನದಿಂದ ಪರಿಶೀಲಿಸಿ ಪುಸ್ತಕಗಳನ್ನು ಆಯ್ಕೆ ಮಾಡಿ ರಚಿಸಲಾಗುವುದು. ಲೇಖಕರಿಗೆ ಗೌರವಧನ ಮತ್ತು ಗೌರವ ಪ್ರತಿಗಳನ್ನು ನೀಡಲಾಗುವುದು. ಸಮಿತಿ ಒಂದು ವೇಳಾಪಟ್ಟಿ ಹಾಕಿಕೊಂಡು ಮುಂದುವರೆಯುವಂತೆ ಸಲಹೆ ನೀಡಿದರು.
    ಮಂಡ್ಯದಲ್ಲಿ ಹಿಂದೆ ನಡೆದ ಎರಡು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳನ್ನು ನೋಡಿರುವ ವ್ಯಕ್ತಿಯಿಂದ ‘ಸಮ್ಮೇಳನ ಮೆಲುಕು’ ಕುರಿತು ಪುಸ್ತಕ ಬರೆಸಲಾಗುವುದು. ಕಳೆದ ಬಾರಿಯಂತೆ ಈ ಬಾರಿಯೂ ವಿದೇಶಿ ಕನ್ನಡಿಗರು ಬರುತ್ತಾರೆ. ಸಾಹಿತಿ ಎಚ್.ವಿ.ನಂಜುಂಡಯ್ಯ, ಕರ್ಪೂರ ಶ್ರೀನಿವಾಸರಾಯರು ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಕುಟುಂಬದವರು ಸೇರಿದಂತೆ ವಿದೇಶದಲ್ಲಿರುವ ಹಲವರು ಸಮ್ಮೇಳನದಲ್ಲಿ ಭಾಗಹಿಸಲಿದ್ದಾರೆ ಎಂದರು.
    ಪುಸ್ತಕ ಪ್ರಕಟಣಾ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಲೇಖಕರಿಂದ 47 ಕೃತಿ ಪ್ರಕಟಿಸಲು ಅವಕಾಶ ಮಾಡಿಕೊಡಿ. ಹಿಂದಿನ ಎರಡು ಅಖಿಲ ಭಾರತ ಸಮ್ಮೇಳನಗಳಲ್ಲಿ ಪ್ರಕಟವಾದ ಇಕ್ಷು ಕಾವೇರಿ, ಇಕ್ಷು ಗಂಗಾ, ಸಿರಿಯೊಡಲು, ಸುವರ್ಣ ಮಂಡ್ಯ ಗ್ರಂಥಗಳು ಮರು ಮುದ್ರಣವಾಗಬೇಕು. 150 ಪುಟಗಳಿದ್ದರೆ ಪುಸ್ತಕದ ಅಂದ ಹೆಚ್ಚುತ್ತದೆ. ಪ್ರಕಟಣಾ ಸಮಿತಿ ಕನ್ನಡದ ಕೆಲಸ ದೊಡ್ಡ ಖುಷಿ ತಂದುಕೊಡುತ್ತದೆ. ಸಮಿತಿ ಸದಸ್ಯರು ಶಿಸ್ತು, ಸಹಕಾರದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
    ಜಿಲ್ಲೆಯಲ್ಲಿ 120 ಲೇಖಕಿಯರು ಸೇರಿದಂತೆ 500 ಜನ ಲೇಖಕರು ಇದ್ದಾರೆ. ಅವರಲ್ಲಿ ಆಯ್ದ ಲೇಖಕರಿಂದ ಕೃತಿ ರಚಿಸಲಾಗುವುದು. ಅವುಗಳ ಜತೆಗೆ ಹೊಸ ಪೀಳಿಗೆಯ ಬರಹಗಾರರಿಂದಲೂ ಪ್ರಕಟಿಸಬೇಕು. ಇದೊಂದು ದಾಖಲೆಯಾಗಿ ಉಳಿಯುತ್ತದೆ. ನಿಧನರಾಗಿರುವ ಹಿರಿಯ ಸಾಹಿತಿಗಳ ಮೇರು ಕೃತಿಗಳನ್ನು ಆಯ್ಕೆ ಮಾಡಿ ಇಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕು ಎಂದರು.
    ಸಮಿತಿಯ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸಾಹಿತಿ ತೈಲೂರು ವೆಂಕಟಕೃಷ್ಣ, ಕಸಾಪ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ್, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಧನಂಜಯ ದರಸಗುಪ್ಪೆ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಚಂದ್ರಲಿಂಗು, ಕೃಷ್ಣ, ಹೊಳಲು ಶ್ರೀಧರ್, ಹರ್ಷ ಪಣ್ಣೇದೊಡ್ಡಿ, ಉಪನ್ಯಾಸಕ ಚಲುವೇಗೌಡ, ಹರಿಚರಣತಿಲಕ್, ಕೊತ್ತತ್ತಿ ರಾಜು, ಪ್ರಕಾಶ್, ಸುಮಾರಾಣಿ ಶಂಭು, ಎಂ.ಯು.ಶ್ವೇತಾ, ಭವಾನಿ ಲೋಕೇಶ್, ಸಿ.ಎಂ.ಕ್ರಾಂತಿಸಿಂಹ, ಮ.ರಾಮಕೃಷ್ಣ, ಉಮಾಶಂಕರ್, ಸುನೀಲ್ಕುಮಾರ್, ಕಲೀಂಉಲ್ಲಾ, ಬಸಪ್ಪ ಇತರರಿದ್ದರು.
    ಇದೇ ವೇಳೆ ಇತ್ತೀಚೆಗೆ ಮೈಸೂರಿನಲ್ಲಿ ಡಾಕ್ಟರೇಟ್ ಪದವಿ ಪಡೆದ ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts