More

    ಕನ್ನಡ ಸಿನಿಮಾಗಳು ಪರಭಾಷೆಗೆ ಪದಾರ್ಪಣೆ

    ಬೆಂಗಳೂರು: ‘ಮೊದಲು ಚಿತ್ರವನ್ನು ಕನ್ನಡವಲ್ಲದೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಇರಲಿಲ್ಲ. ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಂತರ, ಬೇರೆ ಭಾಷೆಗಳಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಅದರ ಜತೆಗೆ ಡಬ್ ಮಾಡುವ ಆಫರ್​ಗಳು ಸಹ ಬಂದವು. ಆಗ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡುವ ಯೋಚನೆ ಬಂತು …’

    ಇದು ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಅವರ ಮಾತು. ಅವರೇ ಹೇಳಿಕೊಂಡಂತೆ ಅವರಿಗೆ ಚಿತ್ರವನ್ನು ಬೇರೆ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ಯೋಚನೆ ಇರಲಿಲ್ಲ. ಆದರೆ, ಈಗ ಅವರು ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲೂ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ್ದೂ ಇದೇ ಕಥೆ. ಈ ಚಿತ್ರ ಸಹ ಮುಂಚೆ ಕನ್ನಡಕ್ಕೆ ಸೀಮಿತವಾಗಿತ್ತು. ಆದರೆ, ಚಿತ್ರದ ಡೈಲಾಗ್ ಟ್ರೇಲರ್ ಮತ್ತು ಹಾಡು ಯಶಸ್ವಿಯಾಗುತ್ತಿದ್ದಂತೆಯೇ, ಚಿತ್ರವು ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಮುಂಚೆ ಕನ್ನಡದಲ್ಲಷ್ಟೇ ಶುರುವಾದ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಮತ್ತು ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರಗಳು ಸಹ ತೆಲುಗಿನಲ್ಲಿ ಬಿಡುಗಡೆಯಾಗುತ್ತಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’. ಒಂದು ಭಾಷೆ ಎಂದು ಶುರುವಾದ ಈ ಚಿತ್ರ, ಇದೀಗ ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ ಎಂದು ಸ್ವತಃ ಪ್ರೇಮ್ ಸಂಕ್ರಾಂತಿಯಂದು ಘೋಷಿಸಿದ್ದಾರೆ.

    ಇದೆಲ್ಲ ಹೇಗೆ ಸಾಧ್ಯವಾಯಿತು ಎಂದರೆ, ಅದಕ್ಕೆ ಉತ್ತರ ಮೇಕಿಂಗ್ ಮತ್ತು ಯೂಟ್ಯೂಬ್, ಸೋಷಿಯಲ್ ಮೀಡಿಯಾದಂತಹ ಆಧುನಿಕ ಪ್ರಚಾರ ವೇದಿಕೆಗಳು ಎಂದರೆ ತಪ್ಪಿಲ್ಲ. ‘ಕೆಜಿಎಫ್’ ಆಗಲೀ, ‘ಪೊಗರು’, ‘ಯುವರತ್ನ’ ಅಥವಾ ‘ಮದಗಜ’ ಆಗಲೀ, ಆ ಚಿತ್ರಗಳಿಗೆ ಬೇಡಿಕೆ ಬಂದಿರುವುದು ಆ ಚಿತ್ರಗಳ ಗುಣಮಟ್ಟದಿಂದ. ಕನ್ನಡ ಚಿತ್ರಗಳು ಮೇಕಿಂಗ್​ನಲ್ಲಿ ಮತ್ತು ಅದ್ಧೂರಿತನದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಸಮವಾಗಿ ರೂಪುಗೊಳ್ಳುತ್ತಿರುವುದರಿಂದ, ಅಂತಹ ಚಿತ್ರಗಳಿಗೆ ಮಾತ್ರ ಬೇಡಿಕೆ ಹೆಚ್ಚುತ್ತಿದೆ. ಇನ್ನು ಈ ಚಿತ್ರಗಳ ಹಾಡುಗಳು, ಟೀಸರ್ ಮತ್ತು ಟ್ರೇಲರ್​ಗಳು ಯೂಟ್ಯೂಬ್​ನಲ್ಲಿ ಬಿಡುಗಡೆಯಾದಾಗ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಜನರಿಂದ ಮೆಚ್ಚುಗೆಯ ಮಾತುಗಳ ಕೇಳಿಬಂದಾಗ, ಸಹಜವಾಗಿಯೇ ಆ ಭಾಷೆಯ ಚಿತ್ರರಂಗದವರು ಇತ್ತ ತಿರುಗಿನೋಡುವುದರ ಜತೆಗೆ, ದೊಡ್ಡ ಮೊತ್ತ ಕೊಟ್ಟು ಈ ಚಿತ್ರಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳು ಪರಭಾಷೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯವಿಲ್ಲ.

    ಹರಿಶ್ಚಂದ್ರನಿಂದ ಪ್ರಾರಂಭ…

    ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗುತ್ತಿರುವುದು ಹೊಸದೇನಲ್ಲ. 1943ರಲ್ಲಿ ಬಿಡುಗಡೆಯಾದ ನಾಗೇಂದ್ರರಾವ್ ನಿರ್ದೇಶನದ ‘ಹರಿಶ್ಚಂದ್ರ’ ಚಿತ್ರವು ಕನ್ನಡದಿಂದ ತಮಿಳಿಗೆ ಡಬ್ ಆದ ಮೊದಲ ಚಿತ್ರ. ಅಷ್ಟೇ ಅಲ್ಲ, ಬೇರೆ ಭಾಷೆಯೊಂದಕ್ಕೆ ಡಬ್ ಆದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ. ಈ 78 ವರ್ಷಗಳಲ್ಲಿ ನೂರಾರು ಚಿತ್ರಗಳು ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆಗಿವೆ. ಸಾಮಾನ್ಯವಾಗಿ ಒಂದು ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾದ ನಂತರ ಇಲ್ಲಿನ ಜಯ-ಅಪಜಯಗಳನ್ನು ನೋಡಿಕೊಂಡು ಇನ್ನೊಂದು ಭಾಷೆಗೆ ಡಬ್ ಮಾಡಲಾಗುತ್ತಿತ್ತು. ಆದರೆ, ಯಶ್ ಅಭಿನಯದ ‘ಕೆಜಿಎಫ್’ ಚಿತ್ರವು ಬಿಡುಗಡೆಗೂ ಮುನ್ನವೇ ನಾಲ್ಕು ಭಾಷೆಗಳಿಗೆ ಡಬ್ ಆಗಿ, ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರವಾಯಿತು. ಆ ನಂತರ ‘ಕುರುಕ್ಷೇತ್ರ’, ‘ಅವನೇ ಶ್ರೀಮನ್ನಾರಾಯಣ’, ‘ಪೈಲ್ವಾನ್’ ಚಿತ್ರಗಳು ಸಹ ಕನ್ನಡವಲ್ಲದೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾದವು. ಈ ಬೆಳವಣಿಗೆಯಿಂದ ಸ್ಪೂರ್ತಿಗೊಂಡ ನಿರ್ದೇಶಕ ಚಂದ್ರು, ತಮ್ಮ ‘ಕಬ್ಜ’ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಘೊಷಿಸಿದ್ದಾರೆ.

    ‘ಕಬ್ಜ’ ಚಿತ್ರಕ್ಕೆ ಸುದೀಪ್​ ಸೇರ್ಪಡೆ; ಸಂತಸ ಹಂಚಿಕೊಂಡ ಕಿಚ್ಚ …

    ರಿಷಭ್​ ಶೆಟ್ಟಿ ಅಭಿನಯದ ‘ಹೀರೋ’ ಟ್ರೇಲರ್​ ನೋಡಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts