More

    ಕನ್ನಡ ಕಂಪು ಹರಡಿದ ಡಾ.ಕೋರೆ

    ಬೆಳಗಾವಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಡಾ.ಪ್ರಭಾಕರ ಕೋರೆ ನೀಡಿದಷ್ಟು ಸೇವೆ ಮತ್ತು ಸಮಯವನ್ನು ಬೇರೆ ಯಾವ ಶಾಸಕರು ಹಾಗೂ ಸಂಸದರೂ ನೀಡಿಲ್ಲ. 2003ರಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 2011ರಲ್ಲಿ ಬೆಳಗಾವಿಯಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಲ್ಲಿ ಡಾ.ಕೋರೆಯವರದ್ದು ಸಿಂಹಪಾಲು.

    ಡಾ.ಪಾಟೀಲ ಪುಟ್ಟಪ್ಪ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಡಾ.ಕೋರೆ ಅವರು ರಾಜಾಧ್ಯಕ್ಷರ ಮೇಲೆ ಒತ್ತಡ ಹೇರಿದ್ದು ಅನೇಕರಿಗೆ ತಿಳಿಯದ ಸಂಗತಿ. 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ನೆಹರು ನಗರದಲ್ಲಿ ಕನ್ನಡ ಸಾಂಸ್ಕೃತಿಕ ಭವನದ ಸಂಕಲ್ಪ ಮಾಡಿ, ಸರ್ಕಾರದಿಂದ ಮೊದಲ ಹಂತದಲ್ಲಿ 3 ಕೋಟಿ ಹಾಗೂ 2ನೇ ಹಂತದಲ್ಲಿ 3 ಕೋಟಿ ರೂ. ಅನುದಾನ ತಂದು ಭವನದ ನಿರ್ಮಾಣಕ್ಕೆ ಕೋರೆ ಅವರು ಕಾರಣೀಕರ್ತರಾದರು.

    ಗಡಿನಾಡು, ಕುಂದಾನಗರಿ ಬೆಳಗಾವಿಯಲ್ಲಿ 2006ರಲ್ಲಿ ಸತತವಾಗಿ ಎರಡು ಬಾರಿ ವಿಧಾನ ಮಂಡಲ ಅಧಿವೇಶನ ಯಶಸ್ವಿಗೊಳಿಸಿದ್ದಾರೆ. ಸುವರ್ಣ ವಿಧಾನಸೌಧ ನಿರ್ಮಾಣ ಹಾಗೂ ಜಿಲ್ಲೆಯಲ್ಲಿ ಮೂರು ವಿಶ್ವವಿದ್ಯಾಲಯಗಳು (ರಾಣಿ ಚನ್ನಮ್ಮ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕೆಎಲ್‌ಇ ವೈದ್ಯಕೀಯ ವಿವಿ) ಸ್ಥಾಪನೆಗೊಳ್ಳುವಲ್ಲಿ ಡಾ. ಪ್ರಭಾಕರ ಕೋರೆ ಅವರು ಹಗಲಿರುಳು ಶ್ರಮಿಸಿದ್ದಾರೆ.

    ಸಮ್ಮೇಳನ ಸಂಘಟನೆಗೆ ಬಲ: ಡಾ.ಕೋರೆ ಅವರು ಈ ಹಿಂದೆ ನಿಪ್ಪಾಣಿಯಲ್ಲಿ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೊದಲ ಬಾರಿಗೆ ಏರ್ಪಡಿಸಲು ಮರಾಠಿ ಭಾಷಿಕರ ನೆರವು ಪಡೆದು ಯಶಸ್ವಿಗೊಳಿಸಿದ್ದು ಈಗ ಇತಿಹಾಸ. ಈ ಮೂಲಕ ಅವರು ಖಾನಾಪುರದಲ್ಲಿ ಹಾಗೂ ಬಾಳೇಕುಂದ್ರಿಯಲ್ಲಿ ಸಾಹಿತ್ಯ ಸಮ್ಮೇಳನ ಸಂಘಟಿಸಲು ಆನೆ ಬಲ ತಂದು ಕೊಟ್ಟಿದ್ದಾರೆ.

    ‘ಮುಖ್ಯಮಂತ್ರಿ ಚಂದ್ರು’ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿಭಾಗದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ರಥಯಾತ್ರೆ’ ಯಶಸ್ಸುಗೊಳಿಸಲು ಡಾ.ಕೋರೆ ಟೊಂಕಕಟ್ಟಿ ನಿಂತರು. ಚಿಕ್ಕೋಡಿಯಿಂದ ಅಂಕಲಿವರೆಗಿನ ಸಾಹಿತ್ಯ ರಥಯಾತ್ರೆ, ಸಭೆ-ಸಮಾವೇಶ ಆಯೋಜಿಸುವ ಮೂಲಕ ಗಡಿಭಾಗದಲ್ಲಿ ಜಾಗೃತಿ ಮೂಡಿಸಿ, ಕನ್ನಡದ ಕಂಪು ಹರಡಿದ್ದಾರೆ. 50 ವರ್ಷಗಳ ಹಿಂದೆ ಮರಾಠಿಮಯವಾಗಿದ್ದ ಅಂಕಲಿ ಪರಿಸರ ಇಂದು ಸಂಪೂರ್ಣ ಕನ್ನಡಮಯವಾಗಿದೆ. ಎಲ್ಲೆಡೆ ನಾಡಧ್ವಜ ರಾರಾಜಿಸುತ್ತಿದೆ.

    ಪುಸ್ತಕ ಪ್ರಕಟಣೆ:
    ಡಾ.ಕೋರೆ ಅವರು ಕೆಎಲ್‌ಇ ಸಂಸ್ಥೆಯ ಚೇರ್ಮನ್‌ರಾಗಿ, ಕೆಎಲ್‌ಇ ಪ್ರಸಾರಾಂಗದ ಮೂಲಕ ನೂರಕ್ಕೂ ಅಧಿಕ ಮೌಲಿಕ ಗ್ರಂಥಗಳ ಪ್ರಕಟಣೆಗೆ ಕಾರಣರಾಗಿದ್ದಾರೆ. ಕೆಎಲ್‌ಇ ಸಂಸ್ಥೆಯು ಆಯೋಜಿಸುವ ಪ್ರತಿ ಸಮಾವೇಶಗಳಲ್ಲಿ ಕನ್ನಡ ಗ್ರಂಥಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡುತ್ತಾರೆ. 20 ವರ್ಷಗಳಿಂದ ಕನ್ನಡದಲ್ಲಿ ಕೆಎಲ್‌ಇ ವಾರ್ತಾಪತ್ರಿಕೆ ಪ್ರಕಟವಾಗುತ್ತಿದೆ.

    ಇವೆಲ್ಲ ಕನ್ನಡದ ಸೇವೆಯಲ್ಲವೇನು? ನಾಡ ಭಾಷೆ ಬೆಳವಣಿಗೆಗಾಗಿ ಈ ರೀತಿ ಸೇವೆ ಮಾಡಿ ಅಭಿಮಾನ ತೋರ್ಪಡಿಸಬಹುದಲ್ಲವೇ?. ಕೇವಲ ಟಿಎ, ಡಿಎ ಸಾಹಿತಿ ಎಂದೆನಿಸಿಕೊಳ್ಳುವುದಕ್ಕಿಂತ ಏನನ್ನೂ ಆಶಿಸದೆ ಕನ್ನಡಕ್ಕಾಗಿ ಸೇವೆ ಹಾಗೂ ಇತರ ನೆರವು ನೀಡುವುದಿದೆಯಲ್ಲ, ಅದು ಎಲ್ಲಕ್ಕಿಂತ ಮಿಗಿಲಾದ ಸೇವೆ. ಡಾ.ಪ್ರಭಾಕರ ಕೋರೆ ಅವರು ವಾಗ್ಮಿ ಅಥವಾ ಲೇಖಕರಾಗಿರದೆ ಇರಬಹುದು. ಆದರೆ, ಅವರು ಸಾರಸ್ವತ ಲೋಕಕ್ಕೆ ಅನೇಕ ಬರಹಗಾರರನ್ನು ರೂಪಿಸಿಕೊಟ್ಟಿದ್ದಾರೆ. ಅನೇಕ ಕನ್ನಡ ಪ್ರಾಧ್ಯಾಪಕರ ಪಿಎಚ್‌ಡಿ ಕೃತಿಗಳ ಪ್ರಕಟಣೆಗೆ ಕಾರಣರಾಗಿದ್ದಾರೆ.
    | ಪ್ರೊ. ಬಿ.ಎಸ್. ಗವಿಮಠ

    ಜಿಲ್ಲಾ ಕಸಾಪದಿಂದ ಅಭಿನಂದನೀಯ ಕಾರ್ಯ: ಜ. 30ರಿಂದ ಕಾಗವಾಡದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ.ಪ್ರಭಾಕರ ಕೋರೆಯವರನ್ನು ಆಯ್ಕೆ ಮಾಡುವ ಮೂಲಕ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಹಾಗೂ ಅವರ ಬಳಗ ಅಭಿನಂದನೀಯ ಕಾರ್ಯ ಮಾಡಿದೆ. ಡಾ.ಕೋರೆ ಅವರು ಗಡಿ ಜಿಲ್ಲೆಯೆನಿಸಿರುವ ಬೆಳಗಾವಿಯಲ್ಲಿ ಕನ್ನಡಕ್ಕಾಗಿ ಕೈ ಎತ್ತಿದ್ದು, ಅವರ ಕೈ ಕಲ್ಪವೃಕ್ಷವಾಗಿದೆ. ಎಲ್ಲ ಶಾಸಕರು-ಸಂಸದರಿಗೂ ಅವರು ಆದರ್ಶಪ್ರಾಯರಾಗಿದ್ದಾರೆ. ಡಾ.ಕೋರೆ ಅವರಿಂದ ಇನ್ನೂ ಹೆಚ್ಚಿನ ಕನ್ನಡಪರ ಕಾರ್ಯಗಳಾಗಲಿ ಎಂಬುದು ನಮ್ಮ ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts