More

    ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಕೊಡಿ ; ಅಧಿಕಾರಿಗಳಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ತಾಕೀತು

    ಶ್ರೀನಿವಾಸಪುರ : ವಿವಿಧ ಕೆಲಸಗಳಿಗೆ ಬರುವ ರೈತರನ್ನು ತಾಲೂಕು ಕಚೇರಿಗೆ ಅಲೆದಾಡಿಸುವುದೇ ಅಧಿಕಾರಿಗಳ ಕೆಲಸವಾಗಿದೆ. ಇದು ಹೀಗೇ ಮುಂದುವರಿದರೆ ನಿಮ್ಮ ಗ್ರಹಚಾರ ನೆಟ್ಟಗಿರಲ್ಲ. ಹಳೆ ಚಾಳಿ ಬಿಟ್ಟು ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಕೊಡಿ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ ಮಾತನಾಡಿ, ರೈತರ ಕೆಲಸಗಳು ನ್ಯಾಯಯುತವಾಗಿದ್ದರೆ ನಾನು ಏನೂ ಅಡ್ಡಿಪಡಿಸುವುದಿಲ್ಲ. ಅವರ ಕೆಲಸ ಮಾಡಲು ನಿಮಗೆ ಇಚ್ಛಾಸಕ್ತಿ ಇರಬೇಕು. ಅದಾಲತ್ ಮಾಹಿತಿ ಸಾರ್ವಜನಿಕರಿಗೆ ಸಮರ್ಪಕವಾಗಿ ತಿಳಿಯದ ಕಾರಣ ಬಹುಪಾಲು ರೈತರು, ಸಾರ್ವಜನಿಕರು ಭಾಗವಹಿಸಿಲ್ಲ. ಇದನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದುವರಿಸುವ ಕೆಲಸ ಮಾಡಬೇಕು. ತಾಲೂಕಿನಲ್ಲಿ ಎಲ್ಲ ಹೋಬಳಿಗಳ ಪಿ.ನಂಬರ್ ಸಮಸ್ಯೆ ಮಾ.15ರೊಳಗೆ ಸರಿಪಡಿಸಬೇಕು. ಬಾಕಿ ಇರುವ ಸಾಗುವಳಿ ಚೀಟಿಗಳನ್ನು ಕೂಡಲೆ ವಿತರಣೆ ಮಾಡಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್‌ಗೆ ಸೂಚಿಸಿದರು.

    ಪಂಚಾಯಿತಿಗಳಿಂದ ಸ್ವಚ್ಛ ಭಾರತ್ ಮಿಷನ್‌ಗಾಗಿ ಗುರುತಿಸಿರುವ ಜಮೀನು ಸರ್ಕಾರಿ ಅಥವಾ ಗೋಮಾಳದಲ್ಲಿರಲಿ ಯಾವುದೇ ಕಾರಣಕ್ಕೂ ಬಡವರ ಅನುಭವದಲ್ಲಿದ್ದರೆ ಕಿತ್ತುಕೊಳ್ಳುವುದು ಬೇಡ. ಅಂತಹ ಪ್ರಕರಣಗಳಿದ್ದರೆ ಕೂಡಲೆ ಬೇರೆ ಸ್ಥಳ ಗುರುತಿಸಿ ಎಂದು ಪಿಡಿಒಗಳಿಗೆ ಸೂಚಿಸಿದರು. ಎಲ್ಲ ವರ್ಗಗಳ ಸ್ಮಶಾನ ಒತ್ತುವರಿ ತೆರವುಗೊಳಿಸಿ ತಡೆಗೋಡೆ ನಿರ್ಮಿಸಬೇಕು. ಒತ್ತುವರಿದಾರರ ತೆರವಿಗೆ ಪೊಲೀಸ್, ಸರ್ವೇ ಇಲಾಖೆ ಸಹಕಾರ ನೀಡಬೇಕು ಎಂದು ತಿಳಿಸಿ ವಿವಿಧ ಗ್ರಾಪಂ ಕೇಂದ್ರಗಳಲ್ಲಿ ಗ್ರಾಮ ವಿಕಾಸ್ ಯೋಜನೆಯಿಂದ ಕೈಗೊಳ್ಳಲಾಗಿರುವ ರಸ್ತೆ ಮತ್ತು ಚರಂಡಿ ವಿವರ ಪಡೆದರು. ವೃದ್ಧಾಪ್ಯವೇತನ, ವಿಧವಾ ವೇತನ ಆಧಾರ್ ಲಿಂಕ್ ಸಮಸ್ಯೆಯಿಂದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಮುಂದಿನ ವಿಧಾನಸಭಾ ಕಲಾಪದಲ್ಲಿ ವಿಧವಾ ವೇತನ ಕನಿಷ್ಠ 3000 ರೂ. ನೀಡುವಂತೆ ಸರ್ಕಾರಕ್ಕೆ ಒತ್ತಾಯ ತರುತ್ತೇವೆ ಎಂದರು.

    ನ್ಯಾಯಬೆಲೆ ಅಂಗಡಿಗಳನ್ನು ಡೀಲರ್ಸ್‌ ಲಾಭಕ್ಕಾಗಿ ಸ್ಥಾಪನೆ ಮಾಡಿರುವುದಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಿರುವ ಅಂಗಡಿಗಳು. ಕೆಲ ಡೀಲರ್ಸ್‌ಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸದಿದ್ದಲ್ಲಿ ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇನೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ವಿರುದ್ಧ ಕಿಡಿಕಾರಿದರು.

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಚಿಮುಲ್ ನಿರ್ದೇಶಕ ಹನುಮೇಶ್, ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ತಾಪಂ ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ, ಮುಖಂಡರಾದ ಗಾಂಡ್ಲಹಳ್ಳಿ ಶಶಿ, ಹೂಹಳ್ಳಿ ಬಾಬು, ಪಾಳ್ಯ ಗೋಪಾಲರೆಡ್ಡಿ, ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ, ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts