More

  ಅನ್ನದಾತ ಹಮ್ಮಿಕೊಳ್ಳುವ ಪ್ರತಿಭಟನೆಗೆ ಸರ್ಕಾರಗಳೇ ನಡುಗುತ್ತವೆ, ರೈತ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಗದ್ದಿ ಹೇಳಿಕೆ

  ಕನಕಗಿರಿ: ಮನುಕುಲಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಮೋಸ ಮಾಡಲು ಮುಂದಾದಾಗ ಅನ್ನದಾತ ಹಮ್ಮಿಕೊಳ್ಳುವ ಪ್ರತಿಭಟನೆಗೆ ಸರ್ಕಾರಗಳೇ ನಡುಗುತ್ತವೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಗದ್ದಿ ಹೇಳಿದರು.

  ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಹೋರಾಟಗಾರ ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಶುಕ್ರವಾರ ಮಾತನಾಡಿದರು.

  ರೈತ ಹೋರಾಟಕ್ಕೆ ಹೆಸರುವಾಸಿಯಾದ ನರಗುಂದ, ನವಲಗುಂದದಲ್ಲಿ ಈ ಹಿಂದೆ ನಡೆದ ರೈತರ ಬಂಡಾಯಕ್ಕೆ ಸರ್ಕಾರವೇ ನಡುಗಿತ್ತು. ಇದೇ ಮಾದರಿಯಲ್ಲಿ ಹೋರಾಟಗಳಾದರೆ ನಮಗೆ ಉಳಿಗಾಲವಿಲ್ಲ ಎನ್ನುವುದನ್ನು ಅರಿತ ಕೆಲ ರಾಜಕಾರಣಿಗಳು ರೈತ ಸಂಘಟನೆಯಲ್ಲಿ ನಾಲ್ಕೈದು ಬಣಗಳಾಗಿಸಿದ್ದು ಇತಿಹಾಸ. ಸಣ್ಣ ಗ್ರಾಮದಲ್ಲಿಯೂ ಬಣಗಳು ಹುಟ್ಟಿಕೊಂಡವು. ರೈತರ ಬೇಕು ಬೇಡಿಕೆಗಳು ಈಡೇರಬೇಕಾದರೆ, ಕೃಷಿಕರು ಒಗ್ಗೂಡಬೇಕಾಗಿದೆ ಎಂದರು.

  ಇದನ್ನೂ ಓದಿರಿ: 43 ವರ್ಷವಾದರೂ ಹಸನಾಗದ ರೈತರ ಬದುಕು

  ತಾಲೂಕು ಪ್ರಧಾನ ಕಾರ್ಯದರ್ಶಿ ಭೀಮನಗೌಡ ಮಾತನಾಡಿ, ಎಪಿಎಂಸಿ ಕಾಯ್ದೆ ವಾಪಾಸ್ ಪಡೆದಿರುವ ಸರ್ಕಾರ ಮುಂಬರುವ ದಿನಗಳಲ್ಲಿ ಭೂ ಸುಧಾರಣೆ, ವಿದ್ಯುತ್ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕು ಕೇಂದ್ರವಾಗಿರುವ ಕನಕಗಿರಿಯಲ್ಲಿ ತೋಟಗಾರಿಕೆ, ಕೃಷಿ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿ ಆರಂಭಕ್ಕೆ ಕ್ಷೇತ್ರದ ಶಾಸಕರು ಆದ ಸಚಿವ ಶಿವರಾಜ ತಂಗಡಗಿ ಮುಂದಾಗಬೇಕು ಎಂದು ಆಗ್ರಹಿಸಿದರು.

  ರೈತ ಹೋರಾಟಗಳಲ್ಲಿ ಹುತಾತ್ಮರಾದ ಎಚ್.ಎಸ್. ರುದ್ರಪ್ಪ ಹಾಗೂ ಪ್ರೊ.ನಂಜುಂಡಸ್ವಾಮಿ ಅವರ ಹೋರಾಟಗಳನ್ನು ಸ್ಮರಿಸಿ ನಂತರ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಯಿತು. ಪ್ರಮುಖರಾದ ಶೇಖರಪ್ಪ ಗದ್ದಿ, ಈರಣ್ಣ ಗುಡದೂರು, ಹನುಮಂತಪ್ಪ ಬಂಡ್ರಾಳ, ಯಮನೂರಪ್ಪ ಬಂಗಾರಿ, ವೆಂಕಟೇಶ ನಾಯಕ, ಮಂಜುನಾಥ ಮುಸಲಾಪೂರ, ಹನುಮೇಶ ಪೂಜಾರಿ, ಮಾರುತಿ ನಾಯಕ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts